ಶನಿವಾರ, ಮೇ 21, 2022
25 °C
ಚಿಕ್ಕೋಡಿ ತಾಲ್ಲೂಕಿನ ಮಾಂಜರಿಯಲ್ಲಿ ನೆರೆ ಸಂತ್ರಸ್ತರ ಕಣ್ಣೀರು

ಸಿಗದ ಕಂತು: ಮನೆ ಕೆಲಸ ನಿಂತಿತು

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೃಷ್ಣಾ ನದಿಯಲ್ಲಿ 2019ರಲ್ಲಿ ಉಂಟಾಗಿದ್ದ ಮಹಾಪೂರದಿಂದಾಗಿ ಮನೆಗಳನ್ನು ಕಳೆದುಕೊಂಡಿದ್ದ ಚಿಕ್ಕೋಡಿ ತಾಲ್ಲೂಕು ಮಾಂಜರಿ ಗ್ರಾಮದ ಸಂತ್ರಸ್ತರು ಎರಡು ವರ್ಷ ಸಮೀಪಿಸುತ್ತಿದ್ದರೂ ಚೇತರಿಸಿಕೊಳ್ಳುವುದು ಸಾಧ್ಯವಾಗಿಲ್ಲ.

ಆ ಗ್ರಾಮದ ಬಹಳಷ್ಟು ಮನೆಗಳು ಇಂದಿಗೂ ಬಿದ್ದ ಸ್ಥಿತಿಯಲ್ಲೇ ಇವೆ. ಕುಸಿದ ಗೋಡೆಗಳು ಅಲ್ಲಿನ ಜನರ ದುಃಸ್ಥಿತಿಯನ್ನು ಸಾರಿ ಹೇಳುತ್ತಿವೆ. ಕೆಲವು ಮನೆಗಳಿಗೆ ಸರ್ಕಾರದಿಂದ ಬರಬೇಕಾದ ಕಂತುಗಳು ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಹೀಗಾಗಿ, ಕಾಮಗಾರಿಗಳು ಸ್ಥಗಿತಗೊಂಡಿವೆ. ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ, ಕೋವಿಡ್ ಪರಿಸ್ಥಿತಿ ತಂದೊಡ್ಡಿದ ಸಂಕಷ್ಟದ ಪರಿಣಾಮವೂ ನಿರ್ಮಾಣ ಕಾರ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಇದರಿಂದಾಗಿ ಇಲ್ಲಿನ ಜನರು ಸುಸಜ್ಜಿತ ‘ಸೂರು’ ಕಂಡುಕೊಳ್ಳಲಾಗಿಲ್ಲ.

ಕೆಲವರು ಕುಸಿದ ಮನೆಗಳಲ್ಲೇ ತಗಡಿನ ಅಥವಾ ಸಿಮೆಂಟ್ ಶೀಟುಗಳನ್ನು ಜೋಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮಳೆ ಬಂದಾಗ ಸೋರುತ್ತದೆ. ಗೋಡೆಗಳು ಯಾವಾಗ ಬೀಳುತ್ತದೆಯೋ ಎಂಬ ಆತಂಕದಲ್ಲೇ ಅವರು ಇದ್ದಾರೆ. ಸರ್ಕಾರದ ನಿಯಮಗಳ ಪ್ರಕಾರ ಪರಿಹಾರಕ್ಕೆ ಅರ್ಹರಾದವರಿಗೆ ಇನ್ನೂ ಸರಾಸರಿ 3 ಅಥವಾ 4ನೇ ಕಂತುಗಳು ಬಂದಿವೆ. ಅಂದರೆ ಪೂರ್ಣ ಪ್ರಮಾಣದಲ್ಲಿ ಮಳೆ ಬಿದ್ದವರಿಗೆ ಘೋಷಿಸಲಾಗಿದ್ದ ₹ 5 ಲಕ್ಷದಲ್ಲಿ ₹ 3 ಲಕ್ಷ ಅಥವಾ ₹ 4 ಲಕ್ಷ ಸಿಕ್ಕಿದೆ. ಕೆಲವರಿಗೆ 2ನೇ ಕಂತಷ್ಟೆ ದೊರೆತಿದೆ. ಪರಿಣಾಮ ಹೊಸ ಮನೆಗಳು ಇಂದಿಗೂ ಮೈದಳೆದಿಲ್ಲ. ಇಲ್ಲಿನ 516 ಮಂದಿಯನ್ನು ಪಟ್ಟಿಯಿಂದ ಡಿಲೀಟ್ ಮಾಡಿರುವ ದೂರುಗಳೂ ಇವೆ.

ವಂಚಿತರಾಗಿದ್ದಾರೆ:

ಇಲ್ಲಿನ ಹಲವು ಮನೆಗಳ ಗೋಡೆಗಳು ಮೇಲೇಳಲೇ ಇಲ್ಲ. ದಾಖಲೆಗಳಿಲ್ಲ ಎನ್ನುವುದು ಸೇರಿದಂತೆ ಒಂದಿಲ್ಲೊಂದು ಕಾರಣ ಹೇಳಿ ಪರಿಹಾರದಿಂದ ಸಂತ್ರಸ್ತರನ್ನು ವಂಚಿತರನ್ನಾಗಿಸಲಾಗಿದೆ.

‘‌ಹೊಳೆ ಬಂದಾಗ (ಪ್ರವಾಹ) ನಮ್ಮ ಮನೆ ಬಹುತೇಕ ಮುಳುಗಿತ್ತು. ಗೋಡೆಗಳೆಲ್ಲ ಬಿದ್ದಿವೆ. ಆದರೆ, ನಮಗೆ ಪರಿಹಾರ ಸಿಕ್ಕಿಲ್ಲ. ನಮ್ಮಂತಹ ಬಡವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಲ್ಲ. ಅಧ್ಯಕ್ಷರು, ಉಪಾಧ್ಯಕ್ಷರ ಹೆಸರುಗಳನ್ನು ಹಾಕಿ ಹಣ ಕೊಡಿಸಲಾಗಿದೆ’ ಎಂದು ಸಂತ್ರಸ್ತ ತಾತ್ಯಾಸಾಬ ಶಿವಪ್ಪ ಭೀಮನ್ನವರ ಆರೋಪಿಸಿದರು. ಅವರ ದೂರಿಗೆ ಸ್ಥಳೀಯರು ದನಿಗೂಡಿಸಿದರು.

ಶೆಡ್‌ನಲ್ಲಿದ್ದೇವೆ:

ಬಿದ್ದಿರುವ ಮನೆಯೊಂದನ್ನು ತೋರಿಸಿದ ಸ್ಥಳೀಯರು, ‘ಈ ಮನೆಯಲ್ಲಿದ್ದ ಕುಟುಂಬ ಪರಿಹಾರ ಸಿಗದೆ ಈಗ ಬಾಡಿಗೆ ಮನೆಗೆ ತೆರಳಿದೆ. ದುರಸ್ತಿ ಮಾಡಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗಿಲ್ಲ’ ಎಂದು ಸ್ಥಳೀಯರು ಹೇಳಿದರು.

‘ನಮಗೆ ಮೂರು ಬಿಲ್ ಮಾತ್ರ ಬಂದಿದೆ. ಅದರಲ್ಲಿ ಕಾಮಗಾರಿ ಮುಗಿದಿಲ್ಲ. ಇಲ್ಲಿ ವಾಸ ಮಾಡುವುದಕ್ಕೂ ಆಗುವುದಿಲ್ಲ. ತಗಡಿನ ಶೀಟ್‌ಗಳಿಂದ ಶೆಡ್ ಹಾಕಿಕೊಂಡು ಬೇರೆ ಕಡೆ ಜೀವನ ನಡೆಸುತ್ತಿದ್ದೇವೆ. ಸರ್ಕಾರದಿಂದ ಬೇಗನೆ ಪರಿಹಾರ ಸಿಕ್ಕರೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ನಮ್ಮ ಮನೆಗೆ ನಾವು ಬರಬಹುದು. ಅಲ್ಲಿವರೆಗೂ ನಮ್ಮ ಬದುಕು ಅತಂತ್ರವಾಗಿಯೇ ಇದೆ’ ಎಂದು ಮರಿಯಪ್ಪ ಪ್ರತಿಕ್ರಿಯಿಸಿದರು.

ಈ ಗ್ರಾಮದ ಸಂತ್ರಸ್ತರು ದುಃಸ್ಥಿತಿಯಲ್ಲೇ ಬದುಕು ನಡೆಸುತ್ತಿದ್ದಾರೆ. ಮನೆಯೂ ಇಲ್ಲ; ಸ್ವಚ್ಛತೆಯೂ ಸಮರ್ಪಕವಾಗಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದಾಗಿ, ತಗಡಿನ ಶೀಟುಗಳ ಶೆಡ್‌ಗಳ ಮುಂದೆ ಕೊಳಚೆ ನೀರು ಸಂಗ್ರಹವಾಗಿದೆ. ಅನೈರ್ಮಲ್ಯ ಉಂಟಾಗಿದೆ. ಆದರೆ, ಗ್ರಾಮ ಪಂಚಾಯ್ತಿಯವರು ಸ್ವಚ್ಛತೆಗೆ ಕ್ರಮ ವಹಿಸಿಲ್ಲ ಎನ್ನುವ ದೂರು ಸ್ಥಳೀಯರದಾಗಿದೆ.

ಕಂತು ಬರಬೇಕಿದೆ

ನೆರೆಯಿಂದ ನಮ್ಮ ಮನೆ ಸಂಪೂರ್ಣ ಬಿದ್ದಿತ್ತು. ಈವರೆಗೆ 4 ಬಿಲ್ ಬಂದಿದೆ. 5ನೇಯದು ಬಂದಿಲ್ಲ. ಹಣ ಬಾರದಿರುವುದರಿಂದ ನಿರ್ಮಾಣ ಕಾರ್ಯ ಮುಂದುವರಿಸಲು ಸಾಧ್ಯವಾಗಿಲ್ಲ. ಈ ಮನೆಯಲ್ಲೇ ವಾಸವಿದ್ದೇವೆ

– ರಾವಸಾಬ ಕುರಣಿ, ಮಾಂಜರಿ

ಅರ್ಹರಿಗೆ ಸಿಕ್ಕಿಲ್ಲ

ಪರಿಹಾರ ವಿತರಣೆಯಲ್ಲಿ ಬಹಳ ತಾರತಮ್ಯ ಮಾಡಲಾಗಿದೆ. ನಿಜವಾಗಿಯೂ ಸಂತ್ರಸ್ತರಾದವರಿಗೆ, ಅರ್ಹರಿಗೆ ಆರ್ಥಿಕ ನೆರವು ಸಿಕ್ಕಿಲ್ಲ. ಒಂದು ಕಿಟಕಿ ಮುರಿದಿದ್ದವರನ್ನು ಕೂಡ ಪಟ್ಟಿಗೆ ಸೇರಿಸಿದ್ದಾರೆ

– ತಾತ್ಯಾಸಾಬ ಭೀಮನ್ನವರ, ಮಾಂಜರಿ

ಮುಖ್ಯಾಂಶಗಳು

ವಂಚಿತರಾಗಿರುವ ಹಲವರು

ತಾರತಮ್ಯ ಆರೋಪ

ಗಮನಹರಿಸಲು ಸರ್ಕಾರಕ್ಕೆ ಆಗ್ರಹ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು