ಭಾನುವಾರ, ಆಗಸ್ಟ್ 25, 2019
23 °C

ಪ್ರವಾಹ: ರೈತನ ಬಾಳು ಬೀದಿಗೆ

Published:
Updated:
Prajavani

ರಾಮದುರ್ಗ: ಮಲಪ್ರಭಾ ನದಿಯ ಭೀಕರ ಪ್ರವಾಹದ ಪರಿಣಾಮ ತಾಲ್ಲೂಕಿನ 29 ಗ್ರಾಮಗಳ ಬಹುತೇಕ ಜಮೀನು ಜಲಾವೃತಗೊಂಡು ಬೆಳೆಯೆಲ್ಲವೂ ಮುಳುಗಿದ್ದು, ರೈತರ ಬಾಳು ಅಕ್ಷರಶಃ ಬೀದಿಗೆ ಬಂದಿದೆ.

ನಿರಾಶ್ರಿತರ ಸಲುವಾಗಿ ತಾಲ್ಲೂಕಿನ ಗ್ರಾಮಗಳು ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಂದ ಆಹಾರ ಸಿದ್ಧಪಡಿಸಿಕೊಂಡು ಪೂರೈಕೆ ಮಾಡುತ್ತಿದ್ದಾರೆ. ಕೆಲವರು ಆಹಾರ ಸಾಮಗ್ರಿ, ಹಾಸಿಗೆ ಹೊದಿಕೆ ಸೇರಿದಂತೆ ವಿವಿಧ ಜೀವನಾಶ್ಯ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಆದರೆ ನಿರಾಶ್ರಿತರು ಕೆಲವಡೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆರು ದಿನಗಳಿಂದ ಪಟ್ಟಣವೂ ಸೇರಿ ತಾಲ್ಲೂಕಿನ 29 ಗ್ರಾಮಗಳು ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿದ್ದವು. ಸೋಮವಾರ ಎಲ್ಲ ರಸ್ತೆಗಳಲ್ಲೂ ಸಂಚಾರ ಆರಂಭವಾಗಿದೆ. ರಾಮದುರ್ಗದಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಮಲಪ್ರಭೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು. ರಸ್ತೆಯಲ್ಲಿ ಆಳೆತ್ತರದ ಕೊರಕಲು ಉಂಟಾಗಿತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ. ಇದರಿಂದ ಜಲಾವೃತಗೊಂಡ ಗ್ರಾಮಗಳ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಬಹುತೇಕ ಮನೆಗಳು ನೆಲಕಚ್ಚಿವೆ. ಪ್ರವಾಹ ಕಡಿಮೆಯಾಗಿದೆ ಎಂದು ಮನೆಗಳ ಬಳಿ ಹೋದರೆ ದುರ್ವಾನೆ ತಾಳಿಕೊಳ್ಳಲಾಗುತ್ತಿಲ್ಲ. ತ್ಯಾಜ್ಯ ಎಲ್ಲೆಂದರಲ್ಲಿ ಸಿಕ್ಕುಕೊಂಡು ಮನೆಯೆಲ್ಲಾ ಗಲೀಜಾಗಿವೆ. ಎಲ್ಲಿ ನೋಡಿದರಲ್ಲಿ ನಿರಾಶ್ರಿತ ಕೇಂದ್ರಗಳಿಗೆ ಸಾಮಗ್ರಿ ಸಾಗಿಸುವ ದೃಶ್ಯ ಸಾಮಾನ್ಯವಾಗಿದೆ. ಸರ್ಕಾರಿ ಶಾಲೆಗಳ ಕೊಠಡಿಗಳಿಗೆ ನುಗ್ಗಿರುವ ಪ್ರವಾಹದ ನೀರು ಶಾಲಾ ಸಾಮಗ್ರಿ ಮಲಪ್ರಭೆಯ ನೀರಿನಲ್ಲಿ ಮುಳುಗಿವೆ. ಮಕ್ಕಳ ಕಲಿಕಾ ಸಾಮಗ್ರಿಗಳೂ ನೀರು ಪಾಲಾಗಿವೆ.

ಕಿಲ್ಲಾ ತೊರಗಲ್‍ದ ಸಮೀಪ ಶೆಟ್ಟೆವ್ವನ ಮರದ ಹತ್ತಿರ ₹ 4 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ತೂಗುಸೇತುವೆ ಕೊಚ್ಚಿಕೊಂಡು ಹೋಗಿದೆ. ಪ್ರವಾಸಿ ತಾಣವಾಗಿದ್ದ ಸ್ಥಳವೀಗ ಹಾಳುಕೊಂಪೆಯಾಗಿದೆ. ನದಿ ಆಚೆಗಿನ ಜಾಫರ್‌ನಗರದ ಜನ ಸಂಪರ್ಕ ಇಲ್ಲದೇ ಸುತ್ತಿಬಳಸಿ ಸಂಚರಿಸಬೇಕಾಗಿದೆ.

Post Comments (+)