ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅಹಿಂಸಾ ತತ್ವ ಪಾಲಿಸಬೇಕು -ಮಹಾಂತೇಶ ಕವಟಗಿಮಠ

ಜಿಲ್ಲಾಡಳಿತದಿಂದ ಗಾಂಧಿ, ಲಾಲ್‌ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
Last Updated 2 ಅಕ್ಟೋಬರ್ 2021, 13:21 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾತ್ಮ ಗಾಂಧೀಜಿ ಹಾಕಿಕೊಟ್ಟ ಅಹಿಂಸಾ ಮಾರ್ಗ ಹಾಗೂ ಅವರ ಜೀವನಶೈಲಿಯು ಇಂದಿನ ಯುವಕರಿಗೆ ಸ್ಫೂರ್ತಿದಾಯಕವಾಗಿದೆ. ಅಹಿಂಸಾ ತತ್ವಗಳನ್ನು ಪಾಲಿಸೋಣ’ ಎಂದು ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ವತಿಯಿಂದ ಇಲ್ಲಿನ ತಿಲಕವಾಡಿಯ ವೀರಸೌಧದಲ್ಲಿ (ಕಾಂಗ್ರೆಸ್‌ ಬಾವಿ) ಶನಿವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನನ್ನ ಜೀವನವೇ ನನ್ನ ಸಂದೇಶ ಎಂದು ಜಗತ್ತಿಗೆ ಸಾರಿದ ಗಾಂಧೀಜಿ ತಮ್ಮ ಸರಳ‌ ಜೀವನ ಹಾಗೂ ಆದರ್ಶಗಳ ಮೂಲಕ ಮಾದರಿಯಾಗಿದ್ದಾರೆ. ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಅವರು ಇತರ ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೂ ಸ್ಫೂರ್ತಿಯಾಗಿದ್ದರು. ಅದೇ ರೀತಿ ಸರಳ ಮತ್ತು ಸೌಜನ್ಯ ನಡವಳಿಕೆ ಹೊಂದಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರೂ ದೇಶದ ಪ್ರಗತಿಗೆ ಶ್ರಮಿಸಿದರು’ ಎಂದು ಸ್ಮರಿಸಿದರು.

ಸಂಸದೆ ಮಂಗಲಾ ಸುರೇಶ ಅಂಗಡಿ‌ ಮಾತನಾಡಿ, ‘ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕು ನಮಗೆಲ್ಲ ದಾರಿದೀಪವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಗಾಂಧೀಜಿಯವರ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ವಿದೇಶಿಗರು ನಮ್ಮನ್ನು ಗಾಂಧಿ ನಾಡಿನವರು ಎಂದು ಗುರುತಿಸುವುದು ಹೆಮ್ಮೆಯ ವಿಷಯವಾಗಿದೆ’ ಎಂದು ಹೇಳಿದರು.

‘ಅಹಿಂಸಾ ಚಳವಳಿಯಿಂದ ಗಾಂಧೀಜಿ ಅವರು ಮಹಾತ್ಮ ಎಂದು ಕರೆಸಿಕೊಂಡರು. ಅವರ ಅಹಿಂಸಾ ತತ್ವದಿಂದ ಪ್ರಭಾವಿತಗೊಂಡ ವಿಶ್ವ ಸಂಸ್ಥೆಯು ಅ.2ನ್ನು ವಿಶ್ವ ಅಹಿಂಸಾ ದಿನ ಎಂದು ಘೋಷಣೆ ಮಾಡಿತು. ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಅವರು ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟರು’ ಸ್ವಾತಂತ್ರ್ಯ ಸೈನಿಕ ಹಾಗೂ ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ರಾಜೇಂದ್ರ ಕಲಘಟಗಿ ತಿಳಿಸಿದರು.

3ನೇ ತರಗತಿ ವಿದ್ಯಾರ್ಥಿನಿ ಅಕ್ಷರಾ ಹಲಗೇಕರ ಗಾಂಧೀಜಿ ಕುರಿತು ಮಾತನಾಡಿದಳು. ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಪಾಲಿಕೆಯ ಉಪ ಆಯುಕ್ಷೆ ಲಕ್ಷ್ಮಿ ಸುಳಗೇಕರ ಉಪಸ್ಥಿತರಿದ್ದರು.

ಇದೇ ವೇಳೆ ರಾಜೇಂದ್ರ ಕಲಘಟಗಿ ಅವರು ಸನ್ಮಾನಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಸ್ವಾಗತಿಸಿದರು. ಸಂಗೀತ ಶಿಕ್ಷಕ ವಿನಾಯಕ ಮೋರೆ ಹಾಗೂ ತಂಡ ಮತ್ತು ಮಹಿಳಾ‌ ಮಂಡಳದವರು ಭಜನೆ ಪ್ರಸ್ತುತ‍ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT