ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂ‍ಪೂರ್ಣ ಲಾಕ್‌ಡೌನ್‌: ಉತ್ತಮ ಸ್ಪಂದನೆ

Last Updated 29 ಮೇ 2021, 14:06 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ಸೋಂಕಿನ ಸರಪಳಿ ತುಂಡರಿಸುವ ಉದ್ದೇಶದಿಂದ ಜಿಲ್ಲಾಡಳಿತ ಘೋಷಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಮೊದಲ ದಿನವಾದ ಶನಿವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಶನಿವಾರ ಬೆಳಿಗ್ಗೆ 6ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಅದರಂತೆ ಪೊಲೀಸರು ಅನುಷ್ಠಾನಕ್ಕೆ ಕ್ರಮ ವಹಿಸಿದರು. ಬ್ಯಾರಿಕೇಡ್‌ಗಳನ್ನು ಹೆಚ್ಚಿಸಿ ಸಂಚಾರ ನಿರ್ಬಂಧಿಸಿದರು. ಜನರಲ್ಲಿ ಬಹುತೇಕರು ಮನೆಗಳಲ್ಲೇ ಉಳಿದು ಸಹಕರಿಸಿದ್ದರಿಂದ ಜಿಲ್ಲೆಯು ಸ್ತಬ್ಧವಾಗಿತ್ತು. ಜನರು ಹಾಗೂ ವಾಹನಗಳ ಸಂಚಾರವಿಲ್ಲದೆ ಹಲವು ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಎಪಿಎಂಸಿ ಮಾರುಕಟ್ಟೆ ಹಾಗೂ ಅಲ್ಲಲ್ಲಿ ಆರಂಭಿಸಿದ್ದ ತಾತ್ಕಾಲಿಕ ಸಗಟು ತರಕಾರಿ ಮಾರುಕಟ್ಟೆಗಳನ್ನು ಕೂಡ ಬಂದ್ ಮಾಡಿಸಲಾಗಿತ್ತು. ಇದರಿಂದ ರೈತರು ತೊಂದರೆ ಅನುಭವಿಸಿದರು. ಮಾರುಕಟ್ಟೆಗಳಲ್ಲಿ ಚಟುವಟಿಕೆ ಇರಲಿಲ್ಲ. ರಸ್ತೆಬದಿಗಳಲ್ಲಾಗಲೀ, ತಳ್ಳುಗಾಡಿಗಳಲ್ಲಾಗಲಿ ತರಕಾರಿ ಅಥವಾ ಹಣ್ಣುಗಳನ್ನು ಮಾರುವುದಕ್ಕೂ ಅವಕಾಶ ಇರಲಿಲ್ಲ.

ಲಾಕ್‌ಡೌನ್‌ ನಡುವೆಯೂ ಅನವಶ್ಯವಾಗಿ ಸಂಚರಿಸುತ್ತಿದ್ದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದರು. ವಾಹನಗಳನ್ನು ಜಪ್ತಿ ಮಾಡಿದರು.

ಲಾಕ್‌ಡೌನ್‌ ಪರಿಸ್ಥಿತಿಯನ್ನು ಡಿಸಿಪಿ ವಿಕ್ರಂ ಅಮಟೆ ಪರಿಶೀಲಿಸಿದರು. ಭಾನುವಾರವೂ ಸಂಪೂರ್ಣ ಲಾಕ್‌ಡೌನ್‌ ಮುಂದುವರಿಯಲಿದೆ.

ತೆಲಸಂಗ ವರದಿ:

ಸಂಪೂರ್ಣ ಲಾಕ್‍ಡೌನ್‍ನಿಂದ ತೆಲಸಂಗ ಸೇರಿದಂತೆ ಬಹುತೇಕ ಹೋಬಳಿ ಗ್ರಾಮಗಳು ಶನಿವಾರ ಸಂಪೂರ್ಣ ಸ್ತಬ್ಧಗೊಂಡಿದ್ದವು. ಬೆಳಿಗ್ಗೆ ರೈತರು ಮತ್ತು ಕೂಲಿಕಾರರು ಹೊಲಗಳಿಗೆ ತೆರಳಿದ್ದನ್ನು ಬಿಟ್ಟರೆ ಇತರ ಓಡಾಟಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ಸರಕು ಸಾಗಣೆ ವಾಹನ ಹೊರತುಪಡಿಸಿ ಇತರ
ವಾಹನಗಳವರಿಗೆ ಪೋಲಿಸರು ದಂಡದ ಬಿಸಿ ಮುಟ್ಟಿಸಿದರು. ರಸ್ತೆಗಳು ಜನ ಮತ್ತು ವಾಹನಗಳಿಲ್ಲದೆ ಬಿಕೋ ಎನ್ನುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT