ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬೇಡಿಕೆಗೆ ತಕ್ಕಂತೆ ಸ್ಥಾಪನೆಗಿಲ್ಲ ಆದ್ಯತೆ

Last Updated 25 ಸೆಪ್ಟೆಂಬರ್ 2021, 4:41 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಪ್ರಸ್ತುತ ಇರುವ ವಿದ್ಯಾರ್ಥಿನಿಲಯಗಳು ವಿದ್ಯಾರ್ಥಿಗಳ ಬೇಡಿಕೆಗೆ ಸಾಲುತ್ತಿಲ್ಲ.

ಬೇಡಿಕೆ ಇದ್ದರೂ ಹೊಸದಾಗಿ ವಿದ್ಯಾರ್ಥಿನಿಲಯಗಳ ಸ್ಥಾ‍ಪನೆಗೆ ಸರ್ಕಾರ ಒಲವು ತೋರುತ್ತಿಲ್ಲ. ಪರಿಣಾಮ, ಅರ್ಜಿ ಹಾಕುವ ಎಲ್ಲರಿಗೂ ಅವಕಾಶ ದೊರೆಯುತ್ತಿಲ್ಲ. ಆರ್ಥಿಕ ಸ್ಥಿತಿಗಿಂತಲೂ ಅತಿ ಹೆಚ್ಚು ಅಂಕ ಗಳಿಸಿದವರಿಗಷ್ಟೆ ಪ್ರವೇಶ ಕೊಡಲಾಗುತ್ತಿದೆ.

ಬಹುತೇಕ ಹಾಸ್ಟೆಲ್‌ಗಳ ಕಟ್ಟಡಗಳನ್ನು ಹೊರವಲಯದಲ್ಲಿ ನಿರ್ಮಿಸಲಾಗಿದೆ. ಅಂತಹ ಕಡೆಗಳಲ್ಲಿ ಭದ್ರತೆಯ ಕೊರತೆಯೂ ಇದೆ. ಸೊಳ್ಳೆ ಪರದೆ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸುವ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳಿವೆ.

ಕೋವಿಡ್ ಕಾರಣದಿಂದಾಗಿ ವಿದ್ಯಾರ್ಥಿನಿಲಯಗಳನ್ನು ಮುಚ್ಚಲಾಗಿತ್ತು. ಇದೀಗ, ಬಹುತೇಕ ತರಗತಿಗಳ ಆರಂಭಕ್ಕೆ ಅವಕಾಶ ದೊರೆತಿರುವುದರಿಂದಾಗಿ, ಹಾಸ್ಟೆಲ್‌ಗಳಲ್ಲೂ ಪ್ರವೇಶಾತಿ ಶುರುವಾಗಿದೆ.

ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಇರುವವರು 94 ಹಾಸ್ಟೆಲ್‌ಗಳು ಮಾತ್ರ. ಅಲ್ಲಿ ಸರಾಸರಿ 50ರಿಂದ 100 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಮೆಟ್ರಿಕ್ ನಂತರದ ಹಾಸ್ಟೆಲ್‌ಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಅದರಲ್ಲೂ ನಗರದಲ್ಲಿ ಸ್ಥಾಪನೆಗೆ ಬೇಡಿಕೆ ಜಾಸ್ತಿ ಇದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ಪ್ರವೇಶಕ್ಕೂ ನಿರೀಕ್ಷೆಗಿಂತ ಹೆಚ್ಚಿನ ಪ್ರತಿಕ್ರಿಯೆ ಇದೆ.

‘ಬೇಡಿಕೆ ಇರುವುದು ನಿಜ. ಆದರೆ, ಹೊಸದಾಗಿ ನಮ್ಮಲ್ಲಿ ಯಾವುದೇ ಕಡೆಗೆ ಮಂಜೂರಾಗಿಲ್ಲ. ಪ್ರಸ್ತಾವವೂ ಇಲ್ಲ. ಲಭ್ಯವಿರುವ ಹಾಸ್ಟೆಲ್‌ಗಳಲ್ಲೆ ವಿದ್ಯಾರ್ಥಿಗಳಿಗೆ ಮೆರಿಟ್ ಆಧರಿಸಿ ಪ್ರವೇಶ ಕೊಡಲಾಗುತ್ತಿದೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 13 ಹಾಸ್ಟೆಲ್‌ಗಳಿವೆ. ಹೊಸದಾಗಿ ನಗರಕ್ಕೆ ಒಂದು ಮಂಜೂರಾಗಿದೆ. ಕಟ್ಟಡ ಸಿದ್ಧವಿದೆ. ವಿದ್ಯಾರ್ಥಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನಿರ್ವಹಣೆಗೆ ಮತ್ತು ಅಗತ್ಯ ಸೌಲಭ್ಯ ಕಲ್ಪಿಸುವುದಕ್ಕೆ ಹಣಕಾಸಿನ ತೊಂದರೆ ಇಲ್ಲ. ಮಾದರಿಯಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಬ್ದುಲ್ ರಶೀದ್ ಮಿರ್ಜಣ್ಣವರ ಮಾಹಿತಿ ನೀಡಿದರು.

ಕೊರತೆಯಿಂದ ಅನಾನುಕೂಲ

ಚಿಕ್ಕೋಡಿ: ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗಳಿಂದ ಹಲವು ಕಡೆಗಳಲ್ಲಿ ಬಾಲಕ ಮತ್ತು ಬಾಲಕಿಯರ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿನಿಲಯಗಳನ್ನು ನಡೆಸಲಾಗುತ್ತಿದೆ. ಆದರೆ, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಸತಿನಿಲಯಗಳ ಕೊರತೆ ಉಂಟಾಗುತ್ತಿದೆ. ಇದರಿಂದಾಗಿ ಬಡ–ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗುತ್ತಿದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಲ್ಲಿ ಒಟ್ಟು 16 ಹಾಸ್ಟೆಲ್‌ಗಳಿವೆ. ಕಳೆದ ವರ್ಷ ಒಟ್ಟು 1,200 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಪ್ರಸಕ್ತ ವರ್ಷ ಇನ್ನೂ ಪ್ರವೇಶ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸರ್ಕಾರದ ಆದೇಶದಂತೆ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಪ್ರವೇಶ ನೀಡಲಾಗುತ್ತಿದೆ. ಇತರ ದ್ಯಾರ್ಥಿಗಳಿಗೆ ಮೆರಿಟ್ ಮತ್ತು ಜಾತಿ ಮೀಸಲಾತಿ ಅನ್ವಯ ಪ್ರವೇಶ ನೀಡಲಾಗುತ್ತಿದೆ.

ಮಜಲಟ್ಟಿಯಲ್ಲಿ ಮೆಟ್ರಿಕ್ ನಂತರದ ಹಾಸ್ಟೆಲ್‌ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇಲಾಖೆಯಿಂದ ನಿಪ್ಪಾಣಿ ತಾಲ್ಲೂಕಿನಲ್ಲಿ ಕೇವಲ 5 ಹಾಸ್ಟೆಲ್‌ಗಳಿವೆ. ಅಲ್ಲಿಯೂ ವಿವಿಧೆಡೆ ಹಾಸ್ಟೇಲ್ ತೆರೆಯಲು ಬೇಡಿಕೆ ಇದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

‘ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಿಂದ 17 ಹಾಸ್ಟೆಲ್‌ಗಳನ್ನು ನಡೆಸಲಾಗುತ್ತಿದೆ. 1,100 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿದೆ’ ಎನ್ನುತ್ತಾರೆ ಇಲಾಖೆಯ ಸಹಾಯಕ ನಿರ್ದೇಶಕ ಸೌದಾಗರ.

‘ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇನ್ನೂ ಹೆಚ್ಚು ಹಾಸ್ಟೆಲ್‌ಗಳನ್ನು ತೆರೆಯಬೇಕು’ ಎನ್ನುವುದು ವಿದ್ಯಾರ್ಥಿಗಳು ಮತ್ತು ಪೋಷಕರ ಒತ್ತಾಯವಾಗಿದೆ.

ಕೊರೊನಾದಿಂದ ಕ್ಷೀಣಿಸಿದ ಸಂಖ್ಯೆ

ಚನ್ನಮ್ಮನ ಕಿತ್ತೂರು: ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಎರಡು ಹಾಸ್ಟೆಲ್‌ಗಳಿವೆ. ಇದರಲ್ಲಿ ಪರಿಶಿಷ್ಟ ಜಾತಿ ಹಾಸ್ಟೆಲ್ ಸಂಪೂರ್ಣ ಬಂದ್‌ ಆಗಿ ಅನೇಕ ವರ್ಷಗಳು ಕಳೆದಿವೆ.

ಇರುವ ಒಬಿಸಿ ಹಾಸ್ಟೆಲ್‌ನಲ್ಲಿ ಕೇವಲ 12 ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಉಳಿದುಕೊಂಡಿದೆ. ಈ ಹಿಂದೆ ಮೂವತ್ತು ವಿದ್ಯಾರ್ಥಿಗಳು ಇದ್ದರು. ಕೊರೊನಾ ಬಂದ ಮೇಲೆ ಇಲ್ಲಿನ ವಿವಿಧ ಶಾಲೆಗಳಲ್ಲಿ ಓದುತ್ತಿದ್ದ ಹಲವಾರು ಮಕ್ಕಳ ಪಾಲಕರು ವರ್ಗಾವಣೆ ಪತ್ರ ತೆಗೆದುಕೊಂಡು ಹೋದರು ಎಂದು ಹಾಸ್ಟೆಲ್ ಸಿಬ್ಬಂದಿ ಹೇಳುತ್ತಾರೆ.

ಉಳಿದಂತೆ ಪ್ರವೇಶ ಪರೀಕ್ಷೆ ಮೂಲಕ ಸೇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದೆ. ಅದು ಅಂಬಡಗಟ್ಟಿ ಬಳಿ ಇದ್ದು ಉತ್ತಮ ಪರಿಸರದಲ್ಲಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಅಲ್ಲಿ ಹೆಚ್ಚಿದೆ.

ಬೇಕಿವೆ ಸೌಲಭ್ಯಗಳು

ತೆಲಸಂಗ: ಕೊರೊನಾದಿಂದಾಗಿ ಬಂದ್ ಆಗಿದ್ದ ಗ್ರಾಮೀಣ ಪ್ರದೇಶದಲ್ಲಿನ ಮೆಟ್ರಿಕ್‌ ಪೂರ್ವ ಬಾಲಕರ ವಸತಿನಿಲಯಗಳು ಇದೀಗ ಪ್ರಾರಂಭವಾಗುತ್ತಿವೆ. ಹೋಬಳಿ ವ್ಯಾಪ್ತಿಯಲ್ಲಿನ ಬಹುತೇಕ ವಸತಿನಿಲಯಗಳಿಗೆ ಇನ್ನೂ ಹೊಸ ವಿದ್ಯಾರ್ಥಿಗಳು ಬಂದಿಲ್ಲ.

ಇಲ್ಲಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ವಸತಿನಿಲಯದಲ್ಲಿ 25 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಹೊಸದಾಗಿ ಪ್ರವೇಶವನ್ನು ಇನ್ನಷ್ಟೆ ಆರಂಭವಾಗಬೇಕಿದೆ. ಒಟ್ಟು 45 ವಿದ್ಯಾರ್ಥಿಗಳ ಈ ವಸತಿನಿಲಯಕ್ಕೆ ಆಧುನಿಕತೆಯ ಸ್ಪರ್ಶ ಕೊಡಬೇಕಿದೆ.

ಇಲ್ಲಿ ಸೊಳ್ಳೆಗಳ ಕಾಟವಿದೆ. ಆದರೆ, ಮಕ್ಕಳಿಗೆ ಸೊಳ್ಳೆ ಪರದೆ ಕೊಟ್ಟಿಲ್ಲ. ಅಥಣಿ ತಾಲ್ಲೂಕಿನ ಪೂರ್ವ ಭಾಗದ ಬಹುತೇಕ ವಸತಿನಿಲಯಗಳು ಗ್ರಾಮದ ಹೊರವಲಯದಲ್ಲೇ ಇವೆ.

‘ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸರ್ಕಾರದಿಂದ ಅನುಮತಿ ಇನ್ನೂ ಬಂದಿಲ್ಲ. ಸೊಳ್ಳೆ ಪರದೆಗಳು ಪೂರೈಕೆಯಾದ ತಕ್ಷಣ ನೀಡಲಾಗುವುದು. ಸದ್ಯಕ್ಕೆ ವಸತಿನಿಲಯದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲ’ ಎಂದು ಇಲ್ಲಿನ ಹಾಸ್ಟೆಲ್‌ನ ಮೇಲ್ವಿಚಾರಕ ವೆಂಕಟೇಶ ದೇಶಪಾಂಡೆ ತಿಳಿಸಿದರು.

ವಿದ್ಯಾರ್ಥಿಗಳ ಪಾಲಿಗೆ ಗಗನಕುಸುಮ

ಖಾನಾಪುರ: ತಾಲ್ಲೂಕಿನಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಬೆರಳೆಣಿಕೆಯಷ್ಟು ಸರ್ಕಾರಿ ವಿದ್ಯಾರ್ಥಿನಿಲಯಗಳು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗಾಗಿ ಮಾತ್ರ ಮೀಸಲಿವೆ. ಹೀಗಾಗಿ ತಾಲ್ಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಮರಾಠಾ, ಲಿಂಗಾಯತ ಹಾಗೂ ಇತರ ಸಮುದಾಯಗಳ ವಿದ್ಯಾರ್ಥಿಗಳ ಪಾಲಿಗೆ ಅವು ಗಗನಕುಸುಮಗಳಂತಾಗಿವೆ.

ತಾಲ್ಲೂಕಿನಲ್ಲಿ ಸದ್ಯ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಣೆಗೊಳಪಟ್ಟ ಮೂರು ಮೆಟ್ರಿಕ್ ಪೂರ್ವ ವಸತಿನಿಲಯಗಳಿವೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ತಲಾ ಒಂದು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿನಿಲಯಗಳಿವೆ. ಅಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸೇರಿರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಇತರ ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಯಾವುದೇ ವಸತಿನಿಲಯದ ಸೌಲಭ್ಯಗಳನ್ನು ಒದಗಿಸಲಾಗಿಲ್ಲ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಪಟ್ಟಣದ ಮೆಟ್ರಿಕ್ ನಂತರದ ಡಿ.ದೇವರಾಜ ಅರಸು ಬಾಲಕಿಯರ ವಸತಿ ನಿಲಯ ಹೊರತುಪಡಿಸಿದರೆ ತಾಲ್ಲೂಕಿನಲ್ಲಿರುವ ಉಳಿದ ವಸತಿನಿಲಯಗಳು ಸರ್ಕಾರಿ ಕಟ್ಟಡ ಹೊಂದಿವೆ. ಪಟ್ಟಣದ ಕೆ.ಎಸ್.ಆರ್.ಪಿ ರಸ್ತೆಯ ದುರ್ಗಾನಗರ ಬಡಾವಣೆಯಲ್ಲಿ ಇದ್ದು, ಮೂರಂತಸ್ತಿನ ಕಟ್ಟಡದ 8 ಇಕ್ಕಟ್ಟಾದ ಕೊಠಡಿಗಳಲ್ಲಿ ವಿದ್ಯಾರ್ಥಿನಿಯರು ಇರಬೇಕಾಗಿದೆ. ಒಂದು ಕೊಠಡಿ ಮೇಲ್ವಿಚಾರಕರ ಕಚೇರಿ ಮತ್ತೊಂದು ಅಡುಗೆ ಮನೆ ಸೇರಿದಂತೆ ಒಟ್ಟು 10 ಕೊಠಡಿಗಳಲ್ಲಿ ವಸತಿನಿಲಯ ಕಾರ್ಯನಿರ್ವಹಿಸುತ್ತಿದೆ.

ಖಾನಾಪುರ ತಾಲ್ಲೂಕು ಗುಡ್ಡಗಾಡು ಮತ್ತು ಅರಣ್ಯ ಪ್ರದೇಶದಿಂದ ಕೂಡಿದ ಪ್ರದೇಶವಾಗಿದೆ. ತಾಲ್ಲೂಕಿನಾದ್ಯಂತ 100ಕ್ಕೂ ಹೆಚ್ಚು ಸಣ್ಣ-ಸಣ್ಣ ಗ್ರಾಮಗಳಿವೆ. ಈ ಗ್ರಾಮಗಳಲ್ಲಿ 5ನೇ ತರಗತಿಯ ನಂತರದ ಶಿಕ್ಷಣಕ್ಕೆ ವ್ಯವಸ್ಥೆ ಇಲ್ಲ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ವಸತಿನಿಲಯಗಳಲ್ಲಿ ಇರಿಸಿ ಶಿಕ್ಷಣ ನೀಡಲು ಬಯಸುತ್ತಾರೆ. ಬಡ ಹಾಗೂ ಮಧ್ಯಮ ವರ್ಗಕ್ಕೆ ಸೇರಿದ ಇತರ ಸಮುದಾಯದ ವಿದ್ಯಾರ್ಥಿಗಳಿಗೂ ಹಾಸ್ಟೆಲ್‌ ಸ್ಥಾಪನೆಗೆ ಸರ್ಕಾರ ಗಮನಹರಿಸಬೇಕು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು ಎನ್ನುವುದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಬೆನಕಟ್ಟಿ ಅವರ ಆಗ್ರಹವಾಗಿದೆ.

(ಪ್ರಜಾವಾಣಿ ತಂಡ: ಎಂ.ಮಹೇಶ, ಸುಧಾಕರ ತಳವಾರ, ಪ್ರದೀಪ ಮೇಲಿನಮನಿ, ಪ್ರಸನ್ನ ಕುಲಕರ್ಣಿ, ಜಗದೀಶ ಖೊಬ್ರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT