ಶನಿವಾರ, ಡಿಸೆಂಬರ್ 3, 2022
20 °C
ಕರ್ನಾಟಕ– ಮಹಾರಾಷ್ಟ್ರ ಗಡಿಯಲ್ಲಿ ಕೃಷಿ, ಶೈಕ್ಷಣಿಕ, ಔದ್ಯೋಗಿಕ ಸಮಸ್ಯೆಗಳು ನೂರಾರು

ರಾಜ್ಯಪಾಲರುಗಳ ಸಭೆ: ಹೆಚ್ಚಿದ ನಿರೀಕ್ಷೆ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೊಲ್ಹಾ‍ಪುರದಲ್ಲಿ ಶುಕ್ರವಾರ (ನ.4) ನಡೆಯಲಿರುವ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರ ಸಭೆ ಗಡಿ ಭಾಗದ ಜನರಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ. ಗಡಿ ವಿವಾದದ ಕಾರಣ ಕಳೆದ ಐದು ದಶಕಗಳಿಂದ ತತ್ತರಿಸಿದ ಎರಡೂ ರಾಜ್ಯಗಳ ಹಳ್ಳಿಗಳ ಜನ ಕುತೂಹಲದಿಂದ ಕಾಯುವಂತಾಗಿದೆ.

ವಿಶೇಷವಾಗಿ ಕುಡಿಯುವ ನೀರು, ರಸ್ತೆ, ಶೈಕ್ಷಣಿಕ ಸಮಸ್ಯೆ ಹಾಗೂ
ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯಪಾಲರು– ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ ಎಂದು  ಮೂಲಗಳು ತಿಳಿಸಿವೆ.

ರಾಜ್ಯದ ಸಮಸ್ಯೆಗಳೇನು?:

1) ನಮ್ಮ 855 ಹಳ್ಳಿಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿವೆ. ಮಹಾರಾಷ್ಟ್ರ ಸರಹದ್ದು ದಾಟಿ ಕನ್ನಡದ ಹಳ್ಳಿಗಳು, ಕರ್ನಾಟಕದ ಸೀಮೆ ದಾಟಿ ಮಹಾರಾಷ್ಟ್ರದ ಹಳ್ಳಿಗಳಿಗೆ ಹೋಗುವ ಸ್ಥಿತಿ ಇದೆ. ಅಲ್ಲಿ ನೀರು, ಸಾರಿಗೆ, ಬಸ್‌ಪಾಸ್‌ಗೆ ಹಲವು ಸಮಸ್ಯೆಗಳಿವೆ.

2) ಹಳ್ಳಿ ಕರ್ನಾಟಕದಲ್ಲಿದ್ದರೂ ಹೊಲಗಳು ಮಹಾರಾಷ್ಟ್ರದಲ್ಲಿವೆ. ಆ ರೈತರ ನೀರಾವರಿಗೆ ತಾಂತ್ರಿಕ ಸಮಸ್ಯೆಗಳು ನೂರಾರು. ಕೊಳವೆಬಾವಿ, ಬಾವಿ ಕೊರೆಯಿಸುವುದಕ್ಕೂ ದಾಖಲೆಗಳು ಅಡ್ಡಿಯಾಗುತ್ತವೆ.

3) ರೈತರು ಕಬ್ಬನ್ನು ಮಹಾರಾಷ್ಟ್ರದ ಕಾರ್ಖಾನೆಗಳಿಗೆ ಸಾಗಿಸುತ್ತಾರೆ. ಬಿಲ್‌ ಸಿಗದೇ ಇದ್ದಾಗ ಆ ಕಾರ್ಖಾನೆಗಳ
ಮೇಲೆ ಕ್ರಮ ವಹಿಸಬೇಕಾದವರು ಯಾರು ಎಂಬ ಚಿಂತೆ ಪ್ರತಿ ವರ್ಷ ಕಾಡುತ್ತದೆ.

4) ರಾಜ್ಯದ ಗಡಿ ಪ್ರದೇಶದಲ್ಲಿ ಕನ್ನಡ ಶಾಲೆಗಳು ಇಲ್ಲದ ಕಾರಣ ಕನ್ನಡ ಮಕ್ಕಳು ಕೂಡ ಮರಾಠಿ ಮಾಧ್ಯಮದಲ್ಲೇ ಕಲಿಯುವ ಅನಿವಾರ್ಯ. ಮಹಾರಾಷ್ಟ್ರದ ಕನ್ನಡಿಗರು ಶಿಕ್ಷಣಕ್ಕಾಗಿ ಪರದಾಡುವುದು ನಿಂತಿಲ್ಲ. ಕೊಲ್ಹಾಪುರ, ಜತ್ತ, ಸಾಂಗ್ಲಿ ಕಡೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ವಲಸೆ ಬರುವಂತಾಗಿದೆ.

5) ಮಹಾರಾಷ್ಟ್ರದಲ್ಲಿ ಕನ್ನಡಿಗರು ಯಾವುದೇ ಪದವಿ ಪಡೆದರೂ ‘ಮರಾಠಿ ಭಾಷಾ ಪರೀಕ್ಷೆ’ಯಲ್ಲಿ ತೇರ್ಗಡೆ ಹೊಂದಬೇಕು. ಇಲ್ಲದಿದ್ದರೆ ಅಲ್ಲಿನ ಸರ್ಕಾರಿ ನೌಕರಿಗೆ ಅನರ್ಹ. ಆದರೆ, ಕರ್ನಾಟಕದಲ್ಲಿ ಇಂಥ ಕಟ್ಟಳೆ ಇಲ್ಲ. ಈ ಔದಾರ್ಯವನ್ನು ಮಹಾರಾಷ್ಟ್ರ ಇನ್ನೂ ತೋರಿಲ್ಲ.

6) ಕರ್ನಾಟಕ– ಮಹಾರಾಷ್ಟ್ರ ಎರಡೂ ಕಡೆ ಕನ್ನಡ ಶಿಕ್ಷಕರ ಕೊರತೆ ದೊಡ್ಡ ಪ್ರಮಾಣದಲ್ಲಿದೆ. 6,000 ಕನ್ನಡ ಶಿಕ್ಷಕರ ಕೊರತೆ ಗಡಿ ಗ್ರಾಮಗಳಲ್ಲಿದೆ.

7) ಸ್ಥಳೀಯ ಸಂಸ್ಥೆಗಳ ಎಲ್ಲ ದಾಖಲೆ
ಗಳನ್ನೂ ಮರಾಠಿಯಲ್ಲಿ ನೀಡಬೇಕು ಎಂದು ಮರಾಠಿಗರು ಹೋರಾಡುತ್ತಾರೆ. ಆದರೆ, ಮಹಾರಾಷ್ಟ್ರದಲ್ಲಿ ಖಾಲಿ ಕಾಗದದ ಮೇಲೂ ಕನ್ನಡ ಅಕ್ಷರಗಳು ಕಾಣದಂತೆ ಎಚ್ಚರಿಕೆ ವಹಿಸುತ್ತಾರೆ. ಮನೆ– ಅಂಗಡಿಗಳ ಮೇಲೆ ಕನ್ನಡ ಬರೆಯುವಂತಿಲ್ಲ. ಬಸ್‌ಗಳಿಗೂ ಫಲಕ ಹಾಕುವಂತಿಲ್ಲ.

8) ಮಹಾರಾಷ್ಟ್ರದ ಬಹುಪಾಲು ಜಲಾಶಯಗಳಿಂದ ರಾಜ್ಯಕ್ಕೆ ನೀರು ಹರಿಸಿ, ನೆರೆ ಸೃಷ್ಟಿಯಾಗುತ್ತದೆ. 2019ರಲ್ಲಿ 8 ಲಕ್ಷ ಕ್ಯುಸೆಕ್‌ ನೀರನ್ನು ಕೊಯ್ನಾದಿಂದ ಮುನ್ಸೂಚನೆ ಇಲ್ಲದೆ ಬಿಡಲಾಯಿತು. ಆ ಪ್ರವಾಹಕ್ಕೆ ಜಿಲ್ಲೆಯಲ್ಲೇ ₹ 35 ಸಾವಿರ ಕೋಟಿಯ ಬೆಳೆ ನಾಶವಾಯಿತು. ಈ ನಷ್ಟ ಭರಿಸುವುದು ಯಾರು? ಜಿಲ್ಲೆಯ ಜನ ಇದನ್ನು ‘ಹುಚ್ಚಾಟ’ ಎಂದೂ ಖಂಡಿಸಿದರು. ಇಂಥ ಸಂದಿಗ್ಧ ಸಂದರ್ಭ ಮತ್ತೆ ಬರದಂತೆ ಎರಡೂ ರಾಜ್ಯಗಳ ಅಧಿಕಾರಿಗಳ ಮಧ್ಯೆ ಸಂವಹನ ಸೇತುವೆ ಕಟ್ಟಬೇಕಿದೆ.

9) ಕೊಲೆ, ಕಳವು, ಗರ್ಭಪಾತದಂಥ ಕೃತ್ಯಗಳಲ್ಲಿ ತೊಡಗಿದವರು ನೆರೆ ರಾಜ್ಯದಲ್ಲಿ ತಲೆಮರೆಸಿಕೊಳ್ಳುತ್ತಾರೆ. ಇಂಥ ಅಪರಾಧಗಳ ನಿಯಂತ್ರಣಕ್ಕೆ ಪೊಲೀಸರ ಮಧ್ಯೆ ಸಹಕಾರ ಏರ್ಪಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು