ಬುಧವಾರ, ನವೆಂಬರ್ 25, 2020
19 °C
ಜಿಲ್ಲಾಡಳಿತದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

ನಾಡು–ನುಡಿ ರಕ್ಷಣೆಗೆ ಸರ್ಕಾರ ಬದ್ಧ: ಸಚಿವ ರಮೇಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕನ್ನಡ ನಾಡು–ನುಡಿ, ನೆಲ–ಜಲ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಸಿಪಿಇಡಿ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭುವನೇಶ್ವರಿ ದೇವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಅಖಂಡ ಕರ್ನಾಟಕ ನಿರ್ಮಾಣದ ಕನಸು ನನಸಾಗಿಸಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈಜೋಡಿಸೋಣ. ಎಲ್ಲರೂ ಒಂದಾಗಿ ಕನ್ನಡ ತೇರನ್ನು ಮುನ್ನಡೆಸೋಣ. ನಾಡನ್ನು ಪ್ರಗತಿಪಥದಲ್ಲಿ ತೆಗೆದುಕೊಂಡು ಹೋಗೋಣ’ ಎಂದು ಆಶಿಸಿದರು.

‘ಬ್ರಿಟಿಷರೊಡನೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಪ್ರಥಮವಾಗಿ ಮಹಿಳಾ  ಸೈನ್ಯವನ್ನು ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿಯಾಗಿದ್ದಾರೆ. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಜಿಲ್ಲೆಯ ಹಲವರು ಕ್ರಿಯಾಶೀಲವಾಗಿ ಪಾಲ್ಗೊಂಡಿದ್ದರು. ಅವರೆಲ್ಲರ ಕೊಡುಗೆ ಅವಿಸ್ಮರಣೀಯವಾಗಿದೆ’ ಎಂದು ಸ್ಮರಿಸಿದರು.

ಜಿಲ್ಲೆಯಲ್ಲಿ ಆಗಸ್ಟ್, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಬೆಳೆಗಳಲ್ಲಿ ನೀರು ನಿಂತಿದ್ದ 1.55 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಬಾಧಿತ ಕ್ಷೇತ್ರವೆಂದು ಅಂದಾಜಿಸಲಾಗಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಬೆಳೆ ಹಾನಿ ಪರಿಹಾರ ಕೋರಿ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಲಿದೆ’ ಎಂದು ತಿಳಿಸಿದರು.

ಪೊಲೀಸ್ ತುಕಡಿಗಳಿಂದ ಪಥಸಂಚಲನ ನಡೆಯಿತು.

ಬಳಿಕ ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಚಿವರು, ವೃತ್ತದ ಕಟ್ಟೆಯ ಸುತ್ತಲೂ ರಾಣಿಯ ಸಾಧನೆ ಬಿಂಬಿಸುವ ಚಿತ್ರಕಲಾಕೃತಿ ಅನಾವರಣಗೊಳಿಸಿದರು.

ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕ ಅನಿಲ ಬೆನಕೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್‌ಹುಸೇನೆ ಪಠಾಣ್, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಐಜಿಪಿ ರಾಘವೇಂದ್ರ ಸುಹಾಸ್, ಜಿಲ್ಲಾ ಪಂಚಾಯಿತಿ ಸಿಇಒ  ದರ್ಶನ್ ಎಚ್‌.ವಿ., ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ನಗರ ‍ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಕನ್ನಡ ಪರ ಸಂಘಟನೆಗಳ ಮುಖಂಡರು ಇದ್ದರು.


ಬೆಳಗಾವಿಯಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಕೊರೊನಾ ಯೋಧರನ್ನು ಸತ್ಕರಿಸಲಾಯಿತು

ಕೊರೊನಾ ಯೋಧರಿಗೆ ಸತ್ಕಾರ

ಕೊರೊನಾ ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡಿರುವ ವಿವಿಧ ಕ್ಷೇತ್ರದ ಯೋಧರನ್ನು ಸತ್ಕರಿಸಲಾಯಿತು.

ಶ್ರೀಕಾಂತ ಹೈಗರ, ದಿಲೀಪ ಕುರಂದವಾಡೆ, ಬಸವರಾಜ ಯರನಾಳ, ಗಂಗಾಧರ ಇ., ಡಾ.ಜಗದೀಶ ಪಾಟ್ನೆ, ಗಿರಿಜಾ ಶಿಂತ್ರೆ, ಸುರೇಖಾ ಪಾಟೀಲ, ಸರೋಜಿನಿ ಚಂದ್ರಗೌಡ, ಎಂ.ವೈ. ಮೆಣಸಿನಕಾಯಿ, ಎಸ್. ಉಷಾ, ಡಾ.ಗಿರೀಶ ಸೋನವಾಲ್ಕರ್, ಶಂಕರ ಪರಸಣ್ಣವರ, ಶಿವಕುಮಾರ ಪಾಟೀಲ, ರಾಜು ಸೇಠ್, ವೀರೇಶ ಕಿವಡಸಣ್ಣವರ, ಶ್ರೀದೇವಿ ಬಳೋಬಾಳ, ವೀರೇಶ ಹಿರೇಮಠ  ಅವರನ್ನು ಗಣ್ಯರು ಸನ್ಮಾನಿಸಿದರು. ಸನ್ಮಾನಕ್ಕೆ ಆಯ್ಕೆಯಾಗಿದ್ದ ವಿಲಾಸ ಜೋಶಿ ಗೈರು ಹಾಜರಾಗಿದ್ದರು.

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸುಮನ ಮಾವಿನಕಟ್ಟಿ, ರಶ್ಮಿ ಹೊಸಟ್ಟಿ, ಲಕ್ಷ್ಮಿ ಗರಗದ, ವೈಶಾಲಿ ತಾನಸಿ ಅವರಿಗೆ ಲ್ಯಾಪ್‌ಟಾಪ್‌ ನೀಡಿ ಪುರಸ್ಕರಿಸಲಾಯಿತು.

ಸೆಲ್ಫಿ ಸ್ಪಾಟ್ ಆದ ಚನ್ನಮ್ಮ ವೃತ್ತ! ‌

ಕೋವಿಡ್ ಕಾರಣದಿಂದಾಗಿ ಈ ಬಾರಿ ರಾಜ್ಯೋತ್ಸವವನ್ನು ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು.

ಸ್ತಬ್ಧಚಿತ್ರಗಳು, ಕಲಾತಂಡಗಳು ಮತ್ತು ರೂಪಕಗಳ ಮೆರವಣಿಗೆ ಇರಲಿಲ್ಲ. ಆದರೆ, ಕನ್ನಡಾಭಿಮಾನಿಗಳು ಚನ್ನಮ್ಮ ವೃತ್ತಕ್ಕೆ ಬಂದು ಅಲ್ಲಿ ಮಾಡಿದ್ದ ಅಲಂಕಾರವನ್ನು ಕಣ್ತುಂಬಿಕೊಂಡರು. ಚನ್ನಮ್ಮ ಪ್ರತಿಮೆ ಸ್ಥಳವು ಸೆಲ್ಫಿ ಹಾಗೂ ಫೋಟೊ ತಾಣವಾಗಿ ಹೋಗಿತ್ತು. ಹಲವರು ಪುಟಾಣಿಗಳನ್ನು ಅಲ್ಲಿ ನಿಲ್ಲಿಸಿ ಫೋಟೊ ತೆಗೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕನ್ನಡ ಪರ ಸಂಘಟನೆಗಳವರು ಹಾಗೂ ಸ್ಥಳೀಯರು ಅಲ್ಲಲ್ಲಿ ರಾಜ್ಯೋತ್ಸವ ಆಚರಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು