ಶನಿವಾರ, ಮಾರ್ಚ್ 25, 2023
22 °C

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ: ಸತೀಶ ಜಾರಕಿಹೊಳಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮತ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.

ಕ್ಷೇತ್ರದ ಮುಚ್ಚಂಡಿ ಗ್ರಾಮದ ಸರ್ಕಾರಿ ಕನ್ನಡ ಹಾಗೂ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಸರ್ಕಾರದ ಅನುದಾನದಲ್ಲಿ ಶಾಲೆಗಳ ಉನ್ನತೀಕರಣಕ್ಕೆ ಹೆಚ್ಚು ಆದ್ಯತೆ ಕೊಡಲಾಗುತ್ತಿದೆ. ಮುಚ್ಚಂಡಿಯಲ್ಲಿ ಕನ್ನಡ ಹಾಗೂ ಮರಾಠಿ ಸರ್ಕಾರಿ ಶಾಲೆಯಲ್ಲಿ ₹ 90 ಲಕ್ಷ ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶೌಚಾಲಯ, ಶಾಲಾ ಕೊಠಡಿ, ಆಟದ ಮೈದಾನವನ್ನು ನಿರ್ಮಿಸಲಾಗುವುದು’ ಎಂದು ಹೇಳಿದರು.

‘ಗ್ರಾಮಸ್ಥರ ಕೋರಿಕೆಯಂತೆ ಗ್ರಾಮದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ, ಬೀದಿದೀಪ ಅಳವಡಿಕೆ ಸೇರಿ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಮೂರು ವರ್ಷಗಳಿಂದ ಕ್ಷೇತ್ರಕ್ಕೆ ಯಾವುದೇ ಹೊಸ ಮನೆಗಳು ಮಂಜೂರಾಗಿಲ್ಲ. ಹಳೆಯ ಮನೆಗಳ ಬಾಕಿ ಬಿಲ್ ಕೂಡ ಸರ್ಕಾರದಿಂದ ಬಿಡುಗಡೆ ಆಗಿಲ್ಲ. ಮನೆಗಳನ್ನು ಮಂಜೂರು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಅವುಗಳನ್ನು ಅರ್ಹರಿಗೆ ಹಂಚಿಕೆ ಮಾಡಲಾಗುವುದು’ ಎಂದರು.

ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಇದಕ್ಕೂ ಮುನ್ನ ಗ್ರಾಮದಲ್ಲಿ ₹ 90 ಲಕ್ಷ ವೆಚ್ಚದಲ್ಲಿ ಪಾದಚಾರಿ ಮಾರ್ಗ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಪೂಜೆ ನೆರವೇರಿಸಿದರು. ಎನ್‌ಎಸ್‌ಎಫ್‌ (ನಾಯಕ್‌ ಸ್ಟೂಡೆಂಟ್ ಫೆಡರೇಷನ್‌) ಸಿದ್ದಾರೂಢ ಕನ್ನಡ ಪ್ರೌಢಶಾಲೆಯಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಚಾಲನೆ ನೀಡಿದರು.

‘ಶಾಲೆಯಲ್ಲಿ ನಿರ್ಮಾಣವಾಗಲಿರುವ ಮೈದಾನದಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಸಮಾವೇಶ ಆಯೋಜಿಸಬೇಕು ಹಾಗೂ ಅಂತರರಾಜ್ಯ ಕಬಡ್ಡಿ ಟೂರ್ನಿ ನಡೆಸಬೇಕು’ ಎಂದು ಶಿಕ್ಷಕರು ಶಾಸಕರಿಗೆ ಮನವಿ ಮಾಡಿದರು. ‘ಶೀಘ್ರವೇ ಇದಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಸತೀಶ ಭರವಸೆ ನೀಡಿದರು.

ಬಳಿಕ ಅಷ್ಟೆ ಹಾಗೂ ಚಂದಗಡ ಗ್ರಾಮಗಳಲ್ಲಿ ₹ 60 ಲಕ್ಷ ವೆಚ್ಚದಲ್ಲಿ ಚರಂಡಿ (500 ಮೀ.) ನಿರ್ಮಾಣ, ಅಷ್ಟೆ ಗ್ರಾಮದಲ್ಲಿ ₹11 ಲಕ್ಷ ವೆಚ್ಚದಲ್ಲಿ ಕನ್ನಡ ಶಾಲೆ ಕೊಠಡಿ ನಿರ್ಮಾಣ ಹಾಗೂ ₹ 95 ಲಕ್ಷ ವೆಚ್ಚದಲ್ಲಿ ಹುದಲಿ ಬೈಪಾಸ್ (2 ಕಿ.ಮೀ.) ವಿಸ್ತರಣೆ ಕಾಮಗಾರಿಗಳಿಗೆ ಚಾಲನೆ ನೀಡಿದರು. ಚಂದಗಡ ಹಾಗೂ ಮುಚ್ಚಂಡಿ ಗ್ರಾಮಗಳ ಪ್ರೌಢಶಾಲೆ ಆವರಣದಲ್ಲಿ ಓಟದ ಟ್ರ್ಯಾಕ್‌ ನಿರ್ಮಾಣಕ್ಕೆ ಪೂಜೆ ನೆರವೇರಿಸಿದರು.

ಲೋಕೋಪಯೋಗಿ ಇಲಾಖೆಯ ಇಇ ಸಂಜೀವಕುಮಾರ ಹುಲಕಾಯಿ, ಎಇಇ ಸುಭಾಷ ನಾಯಿಕ, ಎಇ ಮುಕುಂದ ವಾಳವೇಕರ, ಗುತ್ತಿಗೆದಾರರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು