ಮಂಗಳವಾರ, ಮಾರ್ಚ್ 9, 2021
32 °C

ಮತಗಟ್ಟೆಗೆ ರಿವಾಲ್ವರ್‌ ತಂದ ಮತದಾರ: ಗ್ರಾಮ ಪಂಚಾಯಿತಿ ಚುನಾವಣೆ ವಿಶೇಷಗಳಿವು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ತಾಲ್ಲೂಕಿನ ದೇಸೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ವ್ಯಕ್ತಿ ತನ್ನ ಜೊತೆಯಲ್ಲಿ ರಿವಾಲ್ವರ್ ತಂದಿದ್ದು ಕುತೂಹಲಕ್ಕೆ ಕಾರಣವಾಯಿತು.

ಸುಲೇಮಾನ್ ಸನದಿ ಎನ್ನುವವರು ಲೋಡೆಡ್ ರಿವಾಲ್ವಾರ್‌ ತಂದಿದ್ದನ್ನು ಗಮನಿಸಿದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೇಂದ್ರಕ್ಕೆ ತೆರಳಿದ ಪೋಲಿಸ್ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದರು.

‘ಕ್ರೇಜ್‌ಗಾಗಿ ತಂದಿದ್ದೆ ಎಂದು ಅವರು ತಿಳಿಸಿದ್ದಾರೆ. ಅವರನ್ನು ಚುನಾವಣಾ ಕೆಲಸದಿಂದ ಬಿಡುಗಡೆ ಮಾಡಿ ಬೇರೆಯವರನ್ನು ನಿಯೋಜಿಸಲಾಯಿತು. ರಿವಾಲ್ವಾರ್ ಹೊಂದಲು ಅವರು ಪರವಾನಗಿ ಪಡೆದಿದ್ದಾರೆ’ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದರು.

‘ಈ ಬಗ್ಗೆ ವಿಚಾರಣೆಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪ್ರತಿಕ್ರಿಯಿಸಿದರು.

* ಕಿತ್ತೂರು ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಗ್ರಾಮಸ್ಥರು ಮತಪೆಟ್ಟಿಗೆಗೆ ಪೂಜೆ ಮಾಡಿ ಮತದಾನ ಆರಂಭಿಸಿದರು.

* ಬೆಳಗಾವಿ ತಾಲ್ಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿಯ ಸದಸ್ಯೆ ಸರಸ್ವತಿ ಪಾಟೀಲ ಅವರು ಮತಗಟ್ಟೆಗೆ ಬಂದು ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕುವಂತೆ ಪ್ರಚಾರ ನಡೆಸುತ್ತಿದ್ದರು. ಇದಕ್ಕೆ ಅವಕಾಶವಿಲ್ಲ ಎಂದು ತಿಳಿಸಿ ತಡೆಯಲು ಬಂದ ಪೊಲೀಸರೊಂದಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಈ ಸದಸ್ಯೆ ವಾಗ್ವಾದ ನಡೆಸಿದರು. ಕೊನೆಗೂ ಅವರನ್ನು ಪೊಲೀಸರು ಮತಗಟ್ಟೆಯಿಂದ ಹೊರಕಳುಹಿಸಿದರು. ಈ ವೇಳೆ ಹೊರಗೆ ಗುಂಪು ಸೇರಿದ್ದವರನ್ನು ಕೂಡ ಪೊಲೀಸರು ಲಾಠಿ ಬೀಸಿ ಚದುರಿಸಿದರು.

* ಕೊಲೆ ಪ್ರಕರಣದ ಆರೋಪಿ, ಸದ್ಯ ಹಿಂಡಲಗಾ ಜೈಲಲ್ಲಿರುವ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿ ಗಮನಸೆಳೆದಿದ್ದಾರೆ. ತಾಲ್ಲೂಕಿನ ಮುಚ್ಚಂಡಿ ಗ್ರಾಮದ ನಿವಾಸಿ ಹಾಗೂ ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆಯ ಪರಶರಾಮ ಭರಮಾ ಪಾಖರೆ (37) ಆ ಅಭ್ಯರ್ಥಿ. ಅವರು ಮುಚ್ಚಂಡಿ ಗ್ರಾಮದ 1ನೇ ವಾರ್ಡ್‌ನಿಂದ ಕಣಕ್ಕಿಳಿದಿದ್ದಾರೆ. ಅವರಿಗೆ ಆಟೊರಿಕ್ಷಾ ಚಿಹ್ನೆ ಹಂಚಿಕೆಯಾಗಿದೆ. ಅದೇ ಗ್ರಾಮದ ಮಹೇಶ ಅವ್ವಾನೆ ಎನ್ನುವವರ ಕೊಲೆ ಪ್ರಕರಣದಲ್ಲಿ, 4ನೇ ಆರೋಪಿಯಾದ ಅವರು ಎರಡು ತಿಂಗಳ ಹಿಂದೆ ಬಂಧಿತರಾಗಿದ್ದಾರೆ. ಅವರ ಪರವಾಗಿ ಸ್ನೇಹಿತರು ಪ್ರಚಾರ ನಡೆಸಿದರು.

* ಬೆಳಗಾವಿ ತಾಲ್ಲೂಕಿನ ವಿರಪನಕೊಪ್ಪ ಗ್ರಾಮದ ಅಭ್ಯರ್ಥಿಯೊಬ್ಬರು 200 ಮತದಾರರನ್ನು ದಾಂಡೇಲಿಯ ರೆಸಾರ್ಟ್ಗೆ ಕಳುಹಿಸಿಕೊಟ್ಟಿದ್ದರು. ಅವರು ಮಂಗಳವಾರ ಉಳವಿ ಚನ್ನಬಸವೇಶ್ವರ ದರ್ಶನ ಪಡೆದು ಮತದಾನ ಮಾಡಲು 4 ಮಿನಿ ಬಸ್‌ಗಳಲ್ಲಿ ಗ್ರಾಮಕ್ಕೆ ಬಂದರು ಎಂದು ತಿಳಿದುಬಂದಿದೆ.

* ಗೋಕಾಕ ತಾಲ್ಲೂಕಿನ ಪಾಮಲದಿನ್ನಿಯಲ್ಲಿ ಮತ ಚಲಾಯಿಸಿದ ವ್ಯಕ್ತಿಯೊಬ್ಬ ಮತಪತ್ರದ ಫೋಟೊ ತೆಗೆದು ವಾಟ್ಸ್‌ಆ್ಯಪ್‌ ಗ್ರೂಪಲ್ಲಿ ಹರಿಬಿಟ್ಟಿರುವುದು, ಚರ್ಚೆಗೆ ಗ್ರಾಸವಾಗಿದೆ. ಮತಗಟ್ಟೆಗೆ ಮೊಬೈಲ್ ಪ್ರವೇಶ ನಿಷೇಧಿಸಿದ್ದರೂ ಫೋಟೊ ತೆಗೆದಿದ್ದು ಹೇಗೆ? ಈ ವಿಷಯದಲ್ಲಿ ಮತಗಟ್ಟೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದರೇ ಎನ್ನುವ ಅನುಮಾನವೂ ವ್ಯಕ್ತವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು