ಬುಧವಾರ, ಸೆಪ್ಟೆಂಬರ್ 29, 2021
20 °C

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಎನ್‌ಇಪಿ ಪೂರಕ: ಪ್ರೊ.ಎಸ್.ಸಿ. ಶರ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಶಿಕ್ಷಣ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ಹಾಗೂ ಸುಧಾರಣೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸಹಕಾರಿಯಾಗಿದೆ’ ಎಂದು ‘ನ್ಯಾಕ್‌’ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ತಿಳಿಸಿದರು.

ಇಲ್ಲಿನ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ)ದಲ್ಲಿ ಬುಧವಾರ ನಡೆದ ಸ್ವಾಯತ್ತ ಪಠ್ಯಕ್ರಮದ 5ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

‘ನೀತಿಯು ಯುವಜನರಲ್ಲಿ ಕೌಶಲ ಬೆಳೆಸುವುದಲ್ಲದೆ, ಜಾಗತಿಕ ಮಟ್ಟದಲ್ಲಿ ಉದ್ಯೋಗ ಅವಕಾಶಗಳನ್ನು ಕೂಡ ಕಲ್ಪಿಸುತ್ತದೆ. ಹೊಸ ಜಗತ್ತಿನಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ನಿಟ್ಟಿನಲ್ಲಿ ಯುವಜನಾಂಗದ ವ್ಯಕ್ತಿತ್ವ ಹಾಗೂ ನಡತೆಯನ್ನು ಮರು ರೂಪಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಪ್ರಸ್ತುತ ವಿದ್ಯಾರ್ಥಿಗಳು ನವೀನ ಶಿಕ್ಷಣದ ಸಾಧನಗಳನ್ನು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಂಡು ಮನುಕುಲದ ಸಂಕಷ್ಟಗಳನ್ನು ನಿವಾರಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಅನಿರೀಕ್ಷಿತ ಸವಾಲು: ‘ಕೊರೊನಾ ಸಾಂಕ್ರಾಮಿಕವು ನೇರವಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮಾತ್ರವಲ್ಲದೆ ಸಂಪೂರ್ಣ ಶಿಕ್ಷಣ ವ್ಯವಸ್ಥೆಗೆ ಹಲವಾರು ಅನಿರೀಕ್ಷಿತ ಸವಾಲುಗಳನ್ನು ಒಡ್ಡಿದೆ. ಈ ಸವಾಲುಗಳನ್ನು ನಿರ್ವಹಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು. ಸಂಕಷ್ಟ ನಿರ್ವಹಣೆಯ ಈ ಹಾದಿಯಲ್ಲಿ ಸವಾಲುಗಳೊಂದಿಗೆ ಅವಕಾಶಗಳೂ ಇದ್ದು, ಅವುಗಳನ್ನು ಬಳಸಿಕೊಳ್ಳಬೇಕು’ ಎಂದರು.

‘ಪ್ರತಿ ವಿದ್ಯಾರ್ಥಿಯೂ ರಾಷ್ಟ್ರೀಯ ಏಕತೆಯ ಮನೋಭಾವ ಹೊಂದಬೇಕು. ಜೀವನದಲ್ಲಿ ಏನೇ ಆದರೂ, ಎಷ್ಟೇ ಗಳಿಸಿದರೂ ರಾಷ್ಟ್ರೀಯ ಏಕತೆಯನ್ನು ಬಿಡಬಾರದು. ಈ ನಿಟ್ಟಿನಲ್ಲಿ ಜಿಐಟಿಯು ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ. ಇಲ್ಲಿ ವಾಣಿಜ್ಯ ಉದ್ದೇಶವಿಲ್ಲ. ಇದು ಮಾದರಿಯಾಗಿದೆ. ಕ್ಯಾಂಪಸ್‌ನಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಇದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾಸ್ಥ್ಯ ಸುಧಾರಿಸಲು: ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿ, ‘ಶಿಕ್ಷಣ ಸಂಸ್ಥೆಯಗಳು ಸಾಮಾಜಿಕ ಅಗತ್ಯಗಳನ್ನು ಪೂರೈಸುವ ಮೂಲಕ ಸಮಾಜದ ಸ್ವಾಸ್ಥ್ಯ ಸುಧಾರಿಸುವ ಗುರಿ ಹೊಂದಿರಬೇಕು. ಜ್ಞಾನಯುತ, ಕೌಶಲ ಮತ್ತು ಆರೋಗ್ಯಕರ ಸಮಾಜ ರೂಪಿಸುವಲ್ಲಿ ಎಂಜಿನಿಯರಿಂಗ್ ಮೊದಲಾದ ಪದವೀಧರರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಯಾವುದೇ ದೇಶದ ಕಾರ್ಯಕ್ಷಮತೆಯನ್ನು ‘ಸಂತೋಷದ ಸೂಚ್ಯಂಕ’ದಲ್ಲಿ ಅಳೆಯಲಾಗುತ್ತದೆ. ಇದನ್ನು ಉತ್ತಮ ಶಿಕ್ಷಣದಿಂದ ಮಾತ್ರ ಸಾಧಿಸಬಹುದು’ ಎಂದು ಹೇಳಿದರು.

‘ರಾಷ್ಟ್ರೀಯ ಶಿಕ್ಷಣ ನೀತಿ–2020ರ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಶಿಕ್ಷಣ ಸಂಸ್ಥೆಗಳೂ ಕೈಜೋಡಿಸಬೇಕಾಗಿದೆ’ ಎಂದರು.

ಬಿ.ಇ., ಬಿ.ಆರ್ಕ್‌, ಎಂ.ಬಿ.ಎ., ಎಂಸಿಎ ಹಾಗೂ ಎಂ.ಟೆಕ್. ಕೋರ್ಸ್‌ಗಳ 43 ರ‍್ಯಾಂಕ್‌ ವಿಜೇತರು ಸೇರಿ 1,211 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಿಟಿಯು ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ ಉಪಸ್ಥಿತರಿದ್ದರು. ಕೆಎಲ್‌ಎಸ್–ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಜಯಂತ ಕೆ. ಕಿತ್ತೂರ ವರದಿಯನ್ನು ಮಂಡಿಸಿದರು.

ಬಳಸಿಕೊಳ್ಳಬೇಕು

ಕರ್ನಾಟಕ ಕಾನೂನು ಸೊಸೈಟಿಯ ಕಾರ್ಯಾಧ್ಯಕ್ಷ ಪ್ರದೀಪ ಸಾವಕಾರ, ‘ವಿದ್ಯಾರ್ಥಿಗಳು ಸಮಾಜದ ಹಿತಕ್ಕೆ, ಕಲಿತ ಕಾಲೇಜಿಗೆ ಮತ್ತು ಮಾತೃಭೂಮಿಗೆ ಕೊಡುಗೆ ನೀಡಬೇಕು. ಕೋವಿಡ್ ಕಾರಣದಿಂದಾಗಿ ನಾವು ಹೆಚ್ಚಿನ ಅನಿಶ್ಚಿತತೆಯನ್ನು ಎದುರಿಸುತ್ತಿದ್ದೇವೆ. ಇದು ಶಾಶ್ವತ ಪರಿಸ್ಥಿತಿಯಲ್ಲದ ಕಾರಣ ನಿರಾಶೆಗೊಳ್ಳುವ ಅಗತ್ಯವಿಲ್ಲ. ಸಾಂಕ್ರಾಮಿಕ ರೋಗವು ಕಡಿಮೆಯಾಗಲಿದೆ ಮತ್ತು ಆರ್ಥಿಕತೆಯು ಕ್ರಮೇಣವಾಗಿ ಖಂಡಿತವಾಗಿಯೂ ಸುಧಾರಿಸಲಿದೆ. ಈ ವೇಳೆಯನ್ನು ನಾವು ಉತ್ತಮಗೊಳಿಸಲು ಮತ್ತು ಭವಿಷ್ಯದ ಅವಕಾಶಗಳಿಗೆ ಸಜ್ಜಾಗಲು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾನೂನು ಸೊಸೈಟಿಯ ಅಧ್ಯಕ್ಷ ಅನಂತ ಮಂಡಗಿ, ‘ವಿದ್ಯಾರ್ಥಿಗಳು ಪದವಿ ಪಡೆಯುವುದು, ಉದ್ಯೋಗ ಗಳಿಸುವುದಕ್ಕೆ  ಸೀಮಿತವಾಗದೆ ಸರ್ ಎಂ. ವಿಶ್ವೇಶ್ವರಯ್ಯ, ವಿವೇಕಾನಂದ ಅವರಂತೆ ಸಾಧನೆ ತೋರಬೇಕು. ಕಿರಿಯರಿಗೆ ಅವಕಾಶ ಒದಗಿಸಬೇಕು ಮತ್ತು ನೆರವಾಗಬೇಕು’ ಎಂದು ತಿಳಿಸಿದರು.

ಉತ್ತಮ ಕಾಲೇಜು

ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಯಿಂದಾಗಿ ಕೆಎಲ್‌ಎಸ್‌–ಜಿಐಟಿಯು ವಿಟಿಯು ಸೂರಿನಲ್ಲಿರುವ ಉತ್ತಮ ಕಾಲೇಜಾಗಿದೆ.

–ಪ್ರೊ.ಕರಿಸಿದ್ದಪ್ಪ, ಕುಲಪತಿ, ವಿಟಿಯು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು