ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮವಾಸ್ತವ್ಯ: ವೀರಾಪುರಕ್ಕೆ ಬಸ್‌ನಲ್ಲಿ ತೆರಳಿದ ಅಧಿಕಾರಿಗಳ ತಂಡ

Last Updated 16 ಅಕ್ಟೋಬರ್ 2021, 6:57 IST
ಅಕ್ಷರ ಗಾತ್ರ

ಬೆಳಗಾವಿ: ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಮೂಲಕ ಜನರ ಅಹವಾಲುಗಳನ್ನು ಆಲಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ನಲ್ಲಿ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ ತೆರಳಿದ್ದು ವಿಶೇಷವಾಗಿತ್ತು.ಸರ್ಕಾರದ ಆದೇಶದಂತೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಸ್ವತಃ ಪುಸ್ತಕ-ಪೆನ್ನು ಹಿಡಿದು ಮನೆ ಮನೆಗೆ ತೆರಳಿ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡರು.

ಊರಿಗೆ ಬಂದ ಜಿಲ್ಲಾಧಿಕಾರಿಗೆ ಚಿಣ್ಣರ ಸ್ವಾಗತ:ಕೇದಾರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿಗೆ ಊರಿನ ಮುಖಂಡರು ಹಾಗೂ ಮಕ್ಕಳು ಸಂಭ್ರಮದ ಸ್ವಾಗತ ಕೋರಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ವಾದ್ಯಮೇಳದೊಂದಿಗೆ ಬರಮಾಡಿಕೊಂಡರು.

ನಂತರ ಜಿಲ್ಲಾಧಿಕಾರಿ ಸತ್ಯೆಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಹಿರಿಯರೊಂದಿಗೆ ದರ್ಶನ ಪಡೆದರು. ಸರ್ಕಾರಿ ಪ್ರೌಢಶಾಲೆಯ ಗ್ರಂಥಾಲಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದರು. ನಂತರ ಅಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಅಂಗನವಾಡಿ ಕೇಂದ್ರಕ್ಕೆ ತೆರಳಿದ ಜಿಲ್ಲಾಧಿಕಾರಿಯನ್ನು ಅಲ್ಲಿನ ಮಕ್ಕಳು ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಮಕ್ಕಳಿಗೆ ನೀಡಲಾಗುತ್ತಿವ ಪೌಷ್ಟಿಕ ಆಹಾರ, ಹಾಲು ಹಾಗೂ ಮೊಟ್ಟೆಯ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದರು. ಮಕ್ಕಳಿಗೆ ಸ್ವತಃ ಹಾಲು ವಿತರಿಸಿದರು.

ಬಳಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿದರು. ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿ ನೆಟ್ಟರು. ‌ವಿಜ್ಞಾನ ರಂಗೋಲಿ, ಪಾಠೋಪಕರಣ ಕೇಂದ್ರವನ್ನು ವೀಕ್ಷಿಸಿದರು.

ಕಿತ್ತೂರು ತಾಲ್ಲೂಕಿನ ವೀರಾಪುರದ ತಮ್ಮ ಮನೆಯ ಬಳಿ ರಸ್ತೆ ಮತ್ತು ಗಟಾರ ನಿರ್ಮಿಸಿಕೊಡುವಂತೆ ಚಂದ್ರವ್ವ ತಾಳೆಕರ ಅವರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಒತ್ತಾಯಿಸಿದರು.
ಕಿತ್ತೂರು ತಾಲ್ಲೂಕಿನ ವೀರಾಪುರದ ತಮ್ಮ ಮನೆಯ ಬಳಿ ರಸ್ತೆ ಮತ್ತು ಗಟಾರ ನಿರ್ಮಿಸಿಕೊಡುವಂತೆ ಚಂದ್ರವ್ವ ತಾಳೆಕರ ಅವರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಒತ್ತಾಯಿಸಿದರು.

ಗ್ರಾಮಸಂಚಾರ:ಪರಿಶಿಷ್ಟರ ಕೇರಿಯಿಂದ ಗ್ರಾಮಸಂಚಾರ ಆರಂಭಿಸಿದ ಜಿಲ್ಲಾಧಿಕಾರಿ ಮನೆ ಮನೆಗೆ‌ ತೆರಳಿ ಜನರ‌ ಸಮಸ್ಯೆಗಳನ್ನು ಆಲಿಸಿದರು. ಸ್ವತಃ ಜಿಲ್ಲಾಧಿಕಾರಿಯೇ ಮನೆಬಾಗಿಲಿಗೆ ಬಂದಾಗ ಸಂತಸಗೊಂಡ ಜನರು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಆಯಾ ಕುಟುಂಬದ ಮುಖ್ಯಸ್ಥರ ಹೆಸರು ಹಾಗೂ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಪಟ್ಟಿ ಮಾಡಿಕೊಂಡರು. ಚನ್ನಪ್ಪ ಗಂಗಪ್ಪ ತಳವಾರ, ರಸ್ತೆ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡರು. ಪಕ್ಕದ ಮನೆಯ ಕಮಲವ್ವ ತಳವಾರ ಅವರು, "ಮನೆಯ ಗೋಡೆ ಕುಸಿತಗೊಂಡಿದೆ. ರಾತ್ರಿ ನೆಮ್ಮದಿಯ ನಿದ್ರೆ ಸಾಧ್ಯವಾಗುತ್ತಿಲ್ಲ" ಎಂದರು. ಇದಕ್ಕೆ‌ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಸಮೀಕ್ಷೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬಸ್ಸವ್ವ ಶಿವಪ್ಪ ತಳವಾರ ಅವರ ಮನೆಗೆ ತೆರಳಿ ವೃದ್ಧಾಪ್ಯ ವೇತನ ಮಂಜೂರಾತಿ ಪತ್ರವನ್ನು ಜಿಲ್ಲಾಧಿಕಾರಿ ವಿತರಿಸಿದರು.

ನಿಂಗಪ್ಪ ತಳವಾರ ಅವರ ಮನೆಗೆ ತೆರಳಿದ ಅವರು, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಬೇಕು ಎಂದು ತಿಳಿಸಿದರು. ಮನೆ ಒದಗಿಸುವಂತೆ ಕುಟುಂಬದವರು ಮನವಿ ಮಾಡಿಕೊಂಡರು.

ಗದಿಗೆಪ್ಪ ಕಮಲವ್ವ ತಳವಾರ ಮನೆಯೊಳಗೆ ತೆರಳಿ ಪರಿಶೀಲಿಸಿದ ಅವರು, ನಲವತ್ತು ವರ್ಷಗಳ ಹಳೆಯ‌ ಮನೆಯ‌ ಗೋಡೆ ಕುಸಿದಿರುವುದನ್ನು ಪರಿಶೀಲಿಸಿದರು. ಈ ಬಗ್ಗೆ ಕೂಡಲೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಅಶೋಕ ಕೊಳ್ಳಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿಬಉಮಾ ಸಾಲಿಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT