ಮಂಗಳವಾರ, ಏಪ್ರಿಲ್ 20, 2021
ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ₹ 25 ಲಕ್ಷ

‍ಮಾರ್ಗಸೂಚಿ ರಚಿಸಿ, ಅನುದಾನ ಬಳಕೆ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮಹಾನಗರ ಪಾಲಿಕೆಯ 2021-22ನೇ ಸಾಲಿನ ಬಜೆಟ್‌ನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಮೀಸಲಿಟ್ಟಿರುವ ₹ 25 ಲಕ್ಷ ಅನುದಾನ ಬಳಕೆಗೆ ಪತ್ರಕರ್ತರು ನೀಡಿರುವ ಸಲಹೆಗಳನ್ನು ಆಧರಿಸಿ ಮಾರ್ಗಸೂಚಿ ರಚಿಸಲಾಗುವುದು’ ಎಂದು ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಇಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೋವಿಡ್–19 ಕಾರಣ ಹಾಗೂ ಮಾರ್ಗಸೂಚಿ ಇಲ್ಲದಿರುವುದರಿಂದ ಹೋದ ಸಾಲಿನ ಅನುದಾನ ಬಳಕೆ ಸಾಧ್ಯವಾಗಲಿಲ್ಲ. ಆದ್ದರಿಂದ ಈ ಬಾರಿ ವರ್ಷದ ಆರಂಭದಲ್ಲೇ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದರು.

ಪತ್ರಕರ್ತ ಮೆಹಬೂಬ್ ಮಕಾನದಾರ, ‘ರಾಜ್ಯಮಟ್ಟದ ಪತ್ರಿಕೆಗಳ ಸಿಬ್ಬಂದಿಗೆ ನೇಮಕಾತಿ ಪತ್ರ, ವಾರ್ತಾ ಇಲಾಖೆಯ ಮಾನ್ಯತಾ ಕಾರ್ಡ್ ಆಧರಿಸಿ ಹಾಗೂ ಸ್ಥಳೀಯ ಪತ್ರಿಕೆಗಳ ಸಿಬ್ಬಂದಿಗೆ ಆಯಾ ಸಂಸ್ಥೆಯ ಶಿಫಾರಸು ಪತ್ರ ಪರಿಗಣಿಸಿ ಸೌಲಭ್ಯ ನೀಡಬೇಕು. ಪತ್ರಕರ್ತರ ಮಕ್ಕಳ ಉನ್ನತ ಶಿಕ್ಷಣಕ್ಕೆ, ಶಸ್ತ್ರಚಿಕಿತ್ಸೆ ಅಗತ್ಯವಿದ್ದವರಿಗೆ ಆರ್ಥಿಕ ನೆರವು ಹಾಗೂ ಪತ್ರಕರ್ತರ ಹೆಣ್ಣು ಮಕ್ಕಳ ಮದುವೆಗೆ ಧನಸಹಾಯ ಕೊಡಬೇಕು’ ಎಂದು ಹೇಳಿದರು.

ಪ್ರಶಸ್ತಿ ನೀಡಿ: ‘₹ 25 ಲಕ್ಷ ಅನುದಾನದಲ್ಲಿ ಕಾರ್ಯನಿರತ ಪತ್ರಕರ್ತರಿಗೆ ವಿವಿಧ ವಿಭಾಗದಲ್ಲಿ ಪ್ರಶಸ್ತಿ ನೀಡಲು ₹ 1 ಲಕ್ಷ ಬಳಸಬೇಕು. ಇದರಲ್ಲಿ ಪತ್ರಕರ್ತೆಯರನ್ನೂ ಪರಿಗಣಿಸಬೇಕು’ ಎಂದು ಪತ್ರಕರ್ತ ಎಂ. ಮಹೇಶ ಸಲಹೆ ನೀಡಿದರು.

‘ಗಡಿ ಕನ್ನಡಿಗ’ ಪತ್ರಿಕೆ ಸಂಪಾದಕ ಮುರುಗೇಶ ಶಿವಪೂಜಿ, ‘ನಗರದಲ್ಲಿ ಪತ್ರಿಕಾ ಭವನ ನಿರ್ಮಿಸಬೇಕು. ಸುದ್ದಿ ಮನೆಯ ಎಲ್ಲ ವಿಭಾಗದವರನ್ನೂ ಸೌಲಭ್ಯಕ್ಕೆ ಪರಿಗಣಿಸಬೇಕು. ತಂದೆ-ತಾಯಿ ಸೇರಿದಂತೆ ಕುಟುಂಬದ ಸದಸ್ಯರಿಗೂ ಪ್ರಯೋಜನ ಸಿಗಬೇಕು. ಸಂಸ್ಥೆಯ ಗುರುತಿನಪತ್ರ ಇಲ್ಲದವರನ್ನು ವಾರ್ತಾ ಇಲಾಖೆ ಮೂಲಕ ಗುರುತಿಸಬೇಕು. ಮಾನ್ಯತಾ ಕಾರ್ಡ್ ಇಲ್ಲದವರಿಗೆ ಮಾಧ್ಯಮ ಸಂಸ್ಥೆಯ ಶಿಫಾರಸು ಪತ್ರವನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಬೇಕು’ ಎಂದು ಕೋರಿದರು.

ಪರಿಹಾರ ಕೊಡಬೇಕು: ಪತ್ರಕರ್ತ ಶ್ರೀಶೈಲ ಮಠದ, ‘ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಮಾತ್ರ‌ ಸೌಲಭ್ಯ ದೊರೆಯಬೇಕು. ಅಪಘಾತದಲ್ಲಿ ಮೃತಪಟ್ಟ ಕಾರ್ಯನಿರತ ಪತ್ರಕರ್ತರ ಅವಲಂಬಿತ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಬೇಕು. ಪತ್ರಿಕಾ ದಿನಾಚರಣೆ ವೇಳೆ ರಾಯಣ್ಣ, ಚನ್ನಮ್ಮ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು’ ಎಂದು ಸಲಹೆ ನೀಡಿದರು.

‘ಬೆಳಗಾವಿ ವರದಿಗಾರರಿಗೆ ಮಾತ್ರ ನಿಧಿ ಬಳಸಬೇಕು’ ಎಂದು ರಾಜಶೇಖರ ಹಿರೇಮಠ, ‘ಪತ್ರಿಕಾಭವನಕ್ಕೆ ಅನುದಾನ ಬಳಸಬೇಕು’ ಎಂದು ಚಂದ್ರಕಾಂತ ಸುಗಂಧಿ ಸಲಹೆ ನೀಡಿದರು. ‘ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮೆ ಕಲ್ಪಿಸಬೇಕು’ ಎಂದು ಸುನೀಲ್‌ ಪಾಟೀಲ ಹೇಳಿದರು.

‘ವೃತ್ತಿಗೆ ಅನುಕೂಲವಾಗುವಂತಹ ಪರಿಕರಗಳ ಖರೀದಿಗೆ ಧನಸಹಾಯ ಒದಗಿಸಬೇಕು’ ಎಂದು ನಾಗರಾಜ್ ಕೋರಿದರು.

ಶ್ರೀಧರ ಕೋಟಾರಗಸ್ತಿ, ಎಸ್. ಸಂಕಪ್ಪಗೋಳ, ಸುರೇಶ ಟೋಪಣ್ಣವರ, ಪಾರೀಶ ಭೋಸಲೆ ಮಾತನಾಡಿದರು.

ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ‘ಪ್ರಸಕ್ತ ಸಾಲಿನಲ್ಲಿ ಅನುದಾನ ಬಳಸಲಾಗುವುದು’ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ, ‘ಪತ್ರಕರ್ತರ ಸಲಹೆ ಮೇರೆಗೆ ಮಾರ್ಗಸೂಚಿ ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು