ಮಂಗಳವಾರ, ಮಾರ್ಚ್ 2, 2021
31 °C
ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ

ಪ್ರವಾಹ: ಮುಂಜಾಗ್ರತೆ ವಹಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚಿಸಿದ್ದಾರೆ.

‘ಅತಿವೃಷ್ಠಿಯಿಂದ ಯಾವುದೇ ತೊಂದರೆಯಾಗುವ ಸಂಭವವಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಥವಾ ಕಾರ್ಯದರ್ಶಿಗಳು ಸಾರ್ವಜನಿಕರಿಗೆ ಎಚ್ಚರಿಕೆ ಕೊಡುತ್ತಿರಬೇಕು. ಮಳೆಯಿಂದ ತೊಂದರೆ ಸಂಭವಿಸುವ ಪ್ರಸಂಗ ಬಂದಲ್ಲಿ ಜನರನ್ನು ಸಾಗಿಸಲು ಎತ್ತರದ ಸ್ಥಳ, ಸಮುದಾಯ ಭವನ ಹಾಗೂ ದೊಡ್ಡ ಕಟ್ಟಡಗಳನ್ನು ಗುರುತಿಸಿಕೊಳ್ಳಬೇಕು. ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆಯಲು ಮತ್ತು ಅಡುಗೆ ಸಾಮಾನುಗಳ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದ್ದಾರೆ.

‘ನದಿಗಳಲ್ಲಿ ನೀರು ಉಕ್ಕಿ ಹರಿದಲ್ಲಿ ನದಿ ತೀರದ ಹಳ್ಳಿಗಳಲ್ಲಿಯ ಜನರ ಸಂರಕ್ಷಣೆಗೆ ಎಲ್ಲಿ ಬೋಟುಗಳ ಅವಶ್ಯಕತೆ ಇದೆಯೇ ಎನ್ನುವುದನ್ನು ಪರಿಶೀಲಿಸಿ, ಅಗತ್ಯವಾದಷ್ಟು ಬೋಟುಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಹೋಮ್‌ ಗಾರ್ಡ್ ಸಿಬ್ಬಂದಿ ಸಂಪರ್ಕದಲ್ಲಿಟ್ಟುಕೊಂಡು, ಜನರ ಸಂರಕ್ಷಣೆಗೆ ಉಪಯೋಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಹೋಂಗಾರ್ಡ್‌ ಮತ್ತು ಅನುಭವಿ ಈಜುಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ. 

‘ಪ್ರತಿ ಇಲಾಖೆಗಳ, ಉಪ ವಿಭಾಗಾಧಿಕಾರಿಗಳ ಹಾಗೂ ಎಲ್ಲ ತಹಶೀಲ್ದಾರರ ಕಾರ್ಯಾಲಯದಲ್ಲಿ (ರಜೆ ದಿನಗಳು ಸೇರಿದಂತೆ) ಕಂಟ್ರೋಲ್ ರೂಂಗಳನ್ನು ತೆಗೆದು 24 ಗಂಟೆಗಳ ಕಾಲ ಸಿಬ್ಬಂದಿ ನೇಮಿಸಬೇಕು. ಜಿಲ್ಲಾ ಕಂಟ್ರೋಲ್ ರೂಂಗೆ (ದೂ: 0831– 2407290) ಪ್ರತಿ ದಿನ ಮಳೆಯ ಬಗ್ಗೆ ವರದಿಯನ್ನು ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನಸಾಮಾನ್ಯರ ಆರೋಗ್ಯಕ್ಕೆ ಬೇಕಾಗುವ ಔಷಧಿಗಳ ಹಾಗೂ ಜಾನುವಾರುಗಳಿಗೆ ಬೇಕಾಗುವ ಮೇವು, ಔಷಧಿಗಳ ವ್ಯವಸ್ಥೆ ಮಾಡಿಕೊಳ್ಳಲು ಸಂಬಂಧಿತ ಇಲಾಖೆಗಳಿಗೆ ತಿಳಿಸಬೇಕು’ ಎಂದು ಹೇಳಿದ್ದಾರೆ.

‘ಪ್ರವಾಹ ಬಂದ ಸಂದರ್ಭದಲ್ಲಿ ಸಂಚಾರಕ್ಕೆ ಸುರಕ್ಷಿತ ಮಾರ್ಗದ ಏರ್ಪಾಡು ಮಾಡಿಕೊಳ್ಳಬೇಕು. ಜಿಲ್ಲೆಯ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿಯ ಜಲಾಶಯಗಳಲ್ಲಿಯ ನೀರಿನ ಪ್ರಮಾಣ, ಅಚ್ಚುಕಟ್ಟು ಪ್ರದೇಶಗಳಲ್ಲಿ ಆಗುವ ಅತಿವೃಷ್ಟಿಯಿಂದ ಸಂಗ್ರಹವಾಗುವ ನೀರಿನ ಪ್ರಮಾಣ ಹಾಗೂ ಜಲಾಶಯಗಳಿಂದ ಹರಿಬಿಡುವ ನೀರಿನ ಪ್ರಮಾಣದ ಬಗ್ಗೆ ನಿರಂತರ ಮಾಹಿತಿ ಪಡೆಯಬೇಕು. ಅದಕ್ಕೆ ತಕ್ಕಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಜ್ಜಾಗಬೇಕು’ ಎಂದು ತಾಕೀತು ಮಾಡಿದ್ದಾರೆ.

‘ಪ್ರವಾಹ ಹಾಗೂ ಜಲಾಶಯಗಳ ಹಿನ್ನೀರಿನಿಂದ ಮುಳುಗಡೆ ಆಗಬಹುದಾದ ಪ್ರದೇಶಗಳನ್ನು ಗುರುತಿಸಿಕೊಂಡು, ಅಂತಹ ಪ್ರದೇಶದಲ್ಲಿ ವಾಸಿಸುತ್ತಿರುವ ಸಾರ್ವಜನಿಕರನ್ನು ಮುಂಚಿತವಾಗಿಯೇ ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಬೇಕು. ಆಲಮಟ್ಟಿ ಜಲಾಶಯ, ಹಿಪ್ಪರಗಿ ಬ್ಯಾರೇಜ್‌ ಹಿನ್ನೀರಿನಿಂದ ತೊಂದರೆಗೆ ಒಳಗಾಗಬಹುದಾದ ಪ್ರದೇಶದಲ್ಲಿನ ಜನರ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಲು ಅವಶ್ಯವಿರುವ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.