ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು ಉತ್ಸವ ಆಕರ್ಷಣೆ: ಹೆಲಿ ಟೂರಿಸಂ

Last Updated 20 ಅಕ್ಟೋಬರ್ 2018, 13:35 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಇದೇ ತಿಂಗಳ 23ರಿಂದ 25ವರೆಗೆ ನಡೆಯಲಿರುವ ಕಿತ್ತೂರು ಉತ್ಸವವದಲ್ಲಿ ಮೂರೂ ದಿನಗಳ ಕಾಲ ಹೆಲಿ ಟೂರಿಸಂ ಏರ್ಪಡಿಸಲಾಗಿದ್ದು, ಇದು ಈ ಬಾರಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.

ಸುಮಾರು 8 ರಿಂದ 10 ನಿಮಿಷಗಳ ಕಾಲ ಹಾರಾಟ ನಡೆಸುವ ಕಾಪ್ಟರ್, ಕಿತ್ತೂರು ಕೋಟೆ ಮತ್ತು ಕಿತ್ತೂರು ನಗರವನ್ನು ಆಕಾಶದಿಂದ ನೋಡುವ ಅವಕಾಶವನ್ನು ಪ್ರವಾಸಿಗರಿಗೆ ಒದಗಿಸಲಿದೆ. ಮೈಸೂರು ದಸರಾ, ಹಂಪಿ ಉತ್ಸವ ಮತ್ತು ಗದಗ ಉತ್ಸವದಲ್ಲಿ ಹೆಲಿಕಾಪ್ಟರ್‌ ಹಾರಾಡಿಸಿದ್ದ ಹುಬ್ಬಳ್ಳಿಯ ಬಾಹುಬಲಿ ಟೂರಿಸಂ ಸಂಸ್ಥೆ ಇಲ್ಲಿಯೂ ಹಾರಾಟ ನಡೆಸಲಿದೆ.

ಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಲಿಟೂರಿಸಂ ವ್ಯವಸ್ಥೆ ಮಾಡಲಾಗಿದೆ. ಸಚಿವರು, ಗಣ್ಯರು ಹೆಲಿಕಾಪ್ಟರ್‌ನಲ್ಲಿ ಬರುವಾಗ ಜನರು ತಲೆ ಎತ್ತಿ ನೋಡುತ್ತಿದ್ದರು. ಅಲ್ನೋಡು ಹೆಲಿಕಾಪ್ಟರ್ ಎಂದು ಕುತೂಹಲದಿಂದ ಹೇಳುತ್ತಿದ್ದರು. ಈಗ ಅದೇ ಜನರಿಗೆ ಅದರಲ್ಲಿ ಕುಳಿತು ಪ್ರಯಾಣ ಮಾಡಲು ಹಾಗೂ ಅದರ ಅನುಭವ ಸವಿಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಬಾಹುಬಲಿ ಧರೆಪ್ಪನವರ ತಿಳಿಸಿದರು.

ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಹೆಲಿಕಾಪ್ಟರ್‌ ಹಾರಾಟ ನಡೆಸಲಿದೆ. ಭದ್ರತೆ ದೃಷ್ಟಿಯಿಂದ ಎಲ್ಲ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲಾಡಳಿತ, ಉತ್ಸವ ಸಮಿತಿ, ಪೊಲೀಸರು ಎಲ್ಲರೂ ಸಹಕಾರ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಹೆಲಿಕಾಪ್ಟರ್ ನಲ್ಲಿ 4 ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯಿದೆ. ಬಾಹುಬಲಿ ಹೆಲಿಟೂರಿಸಂ ವತಿಯಿಂದ 20 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ವಯಸ್ಸಾದವರು, ತೀರಾ ದಪ್ಪವಿದ್ದ ಪ್ರಯಾಣಿಕರನ್ನು ಈ ಸಿಬ್ಬಂದಿಯೇ ಹತ್ತಿಸುವ ಬೆಲ್ಟ್ ಹಾಕುವ ಮತ್ತು ಇಳಿಸುವ ಹೊಣೆಯನ್ನು ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು. ಭದ್ರತೆ ಮತ್ತು ಸುರಕ್ಷಿತ ದೃಷ್ಟಿಯಿಂದ ಇದರಲ್ಲಿ ಪ್ರಯಾಣ ಬೆಳೆಸುವವರಿಗೆ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಇವರಿಗೆ ವಿಮೆ ಸೌಲಭ್ಯ ಕೂಡ ಇದೆ ಎಂದು ಹೇಳಿದರು.

ಸಮೀಪದ ಡೊಂಬರಕೊಪ್ಪ ಪ್ರವಾಸಿ ಮಂದಿರದ ಬಳಿ ಕಾಪ್ಟರ್ ತಂಗುವ ವ್ಯವಸ್ಥೆ ಮಾಡಲಾಗಿದೆ. 23ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಮಹಾಂತೇಶ ದೊಡಗೌಡರ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಹಾಗೂ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರು ಹಾರಾಟ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಅವರು ತಿಳಿಸಿದರು.

8ರಿಂದ 10 ನಿಮಿಷದ ಹಾರಾಟಕ್ಕೆ ₹ 3 ಸಾವಿರ ನಿಗದಿ ಪಡಿಸಲಾಗಿದೆ ಎಂದೂ ಹೇಳಿದರು. ಸಂಪರ್ಕ ಸಂಖ್ಯೆ: 97406-68512

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT