ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲ್ಲಾಹು ಅಕ್ಬರ್‌’ ಘೋಷಣೆ, ಗೊಂದಲ: ಆರು ಮಂದಿ ವಶಕ್ಕೆ

Last Updated 17 ಫೆಬ್ರುವರಿ 2022, 7:44 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸದಾಶಿವ ನಗರದ ವಿಜಯಾ ಅರೆವೈದ್ಯಕೀಯ ಸಂಸ್ಥೆಯ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡುವಂತೆ ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ಈ ವೇಳೆ ಹೊರಗಿನಿಂದ ಬಂದ ಕೆಲ ಯುವಕರು ‘ಅಲ್ಲಾಹು ಅಕ್ಬರ್‌’ ಘೋಷಣೆ ಕೂಗಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಹಿಜಾಬ್‌ ತೆಗೆದು ಪ್ರವೇಶಿಸಬೇಕು ಎಂದು ಕಾಲೇಜಿನ ಸಿಬ್ಬಂದಿ ತಿಳಿಸಿದ್ದಾರೆ. ಇದಕ್ಕೆ ನಿರಾಕರಿಸಿದ ವಿದ್ಯಾರ್ಥಿನಿಯರು ಸಿಬ್ಬಂದಿ ಹಾಗೂ ಪ್ರಾಂಶುಪಾಲರೊಂದಿಗೆ ವಾಗ್ವಾದ ನಡೆಸಿದ್ದಾರೆ. ‘ಹಿಜಾಬ್ ನಮ್ಮ ಹಕ್ಕು; ಅದಕ್ಕೆ ಅವಕಾಶ ಕೊಡಬೇಕು’ ಎಂದು ಪಟ್ಟುಹಿಡಿದಿದ್ದಾರೆ. ಇದಕ್ಕೆ ಆಡಳಿತ ಮಂಡಳಿಯವರು ಒಪ್ಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಹೊರ ಹೋಗುತ್ತಿದ್ದರು. ತಮ್ಮನ್ನು ತಡೆದ ಪೊಲೀಸರ ಜೊತೆಗೂ ವಿದ್ಯಾರ್ಥಿನಿಯರು ವಾಗ್ವಾದ ನಡೆಸಿದರು. ಹಿಜಾಬ್ ತೆಗೆಯುವುದಿಲ್ಲ; ಕಾಲೇಜಿನ ಒಳಗೆ ಹೋಗುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ, ಕಾಲೇಜಿನತ್ತ ಬಂದ ಯುವಕರ ಗುಂಪೊಂದು, ನಮ್ಮ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ಅವರ ಮನವೊಲಿಕೆಗೆ ಡಿಸಿಪಿ ರವೀಂದ್ರ ಗಡಾದಿ ಯತ್ನಿಸಿದರು. ಈ ಸಂದರ್ಭದಲ್ಲಿ ಗುಂಪಿನಲ್ಲಿದ್ದವರಲ್ಲಿ ಕೆಲವರು ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದರು. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ 6 ಮಂದಿ ಯುವಕರನ್ನು ವಶಕ್ಕೆ ಪಡೆದು ಕರೆದೊಯ್ದರು.

ಸ್ಥಳಕ್ಕೆ ಬಂದ ತಹಶೀಲ್ದಾರ್ ಆರ್.ಕೆ. ಕುಲಕರ್ಣಿ ಆಡಳಿತ ಮಂಡಳಿವರೊಂದಿಗೆ ಚರ್ಚಿಸಿದರು. ನ್ಯಾಯಾಲಯದ ಆದೇಶ ಪಾಲಿಸುವಂತೆ ತಿಳಿಸಿದರು. ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಕರೆದೊಯ್ದರು.

‘ಪಾಲಕರು, ಕೆಲವರು ಕಾಲೇಜಿನ ಹೊರಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಎಲ್ಲ ವಿದ್ಯಾರ್ಥಿನಿಯರಿಗೂ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿದೆ’ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ಕೂಡ ಭೇಟಿ ನೀಡಿ ಪರಿಶೀಲಿಸಿದರು.

‘ಕಾಲೇಜಿಗೆ ಸಂಬಂಧಿಸದ ಕೆಲವು ಯುವಕರು ಬಂದಿದ್ದರು. ಹಿಜಾಬ್ ಧರಿಸಲು ಅವಕಾಶ ಕೊಡುವಂತೆ ಪಟ್ಟು ಹಿಡಿದ್ದರು. ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಅವರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಬಗ್ಗೆ ಪರಿಶೀಲಿಸಲಾಗುವುದು. ನಗರದ ಎಲ್ಲ ಸೂಕ್ಷ್ಮ ಪ್ರದೇಶದಲ್ಲಿ ಭದ್ರತೆ ಒದಗಿಸಲಾಗಿದೆ. ಶಾಲಾ–ಕಾಲೇಜುಗಳ ಗೇಟ್ ಬಳಿಗೆ ಅನ್ಯ ವ್ಯಕ್ತಿಗಳು ಬಾರದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT