ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಮತೀಯ ಗೂಂಡಾಗಿರಿ: ಯುವಕನಿಗೆ ಥಳಿತ; ಯುವತಿಯರಿಗೂ ಬೆದರಿಕೆ

Last Updated 19 ಅಕ್ಟೋಬರ್ 2021, 20:06 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಸ್ಲಿಂ ಯುವತಿಯರಿಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದ ಹಿಂದು ಯುವಕನ ಮೇಲೆ ಆಟೊರಿಕ್ಷಾ ಚಾಲಕರು ಸೇರಿದಂತೆ ಕೆಲವರು ಹಲ್ಲೆ ನಡೆಸಿ ಅನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ವೈರಲ್ ಆಗಿದೆ.

ಜಿಲ್ಲೆಯ ಖಾನಾಪುರ ಲೋಂಡಾದವರು ಎನ್ನಲಾದ ಆ ಯುವತಿಯರಿಗೆ ಕಿಡಿಗೇಡಿಗಳು ಬೆದರಿಕೆ ಒಡ್ಡಿದ್ದಾರೆ. ‘ಹಿಂದು ಯುವಕನಾಗಿ ಮುಸ್ಲಿಂ ಯುವತಿಯರ ಜೊತೆ ಏನು ವ್ಯವಹಾರ?’ ಎಂದು ಆಕ್ಷೇಪ ವ್ಯಕ್ತಪಡಿಸಿ ಪ್ರಶ್ನಿಸಿದ್ದಾರೆ. ‘ಎಲ್ಲಿಂದ ಕರೆದುಕೊಂಡು ಬಂದೆ, ಏಕೆ ಬಂದಿದ್ದೀರಿ ಎಂದೆಲ್ಲಾ ಕೇಳಿದ್ದಾರೆ. ‘ನಾನು ಕರೆತಂದಿಲ್ಲ. ಸ್ನೇಹಿತೆ ಎಂದು ಮಾತನಾಡಿಸುತ್ತಿದ್ದೆ’ ಎಂದು ಯುವಕ ಹೇಳಿದ್ದಾನೆ. ಈ ವೇಳೆ ಆತನ ಮೇಲೆ ಯುವಕನೊಬ್ಬ ಥಳಿಸಿದ್ದಾನೆ. ಈ ದೃಶ್ಯಗಳು ವಿಡಿಯೊದಲ್ಲಿವೆ.

ಅಲ್ಲಿದ್ದ ಮುಸ್ಲಿಂ ಯುವತಿಯರಿಂದ ಬಲವಂತವಾಗಿ ಬುರ್ಕಾ ತೆಗೆಸಿ, ವಿಡಿಯೊ ಮಾಡಿದ್ದಾರೆ. ‘ನಿಮ್ಮ ಅಪ್ಪ–ಅಮ್ಮನ ಹೆಸರೇನು? ಅವರ ನಂಬರ್‌ ಕೊಡಿ, ಇಲ್ಲಿಗೇಕೆ ಬಂದಿದ್ದಿರಿ?’ ಎಂದೆಲ್ಲಾ ಹಿಂದಿಯಲ್ಲಿ ‍ಪ್ರಶ್ನಿಸಿ ಬೆದರಿಕೆ ಒಡ್ಡಿದ್ದಾರೆ.

‘ಫೋಟೊ ತೆಗೆಯಬೇಡಿ ಹಾಗೂ ವಿಡಿಯೊಗಳನ್ನು ಮಾಡಬೇಡಿ’ ಎಂದು ಯುವತಿಯರು ಕೋರಿದರೂ ಮುತ್ತಿಗೆ ಹಾಕಿ ಭಯದ ವಾತಾವರಣ ಸೃಷ್ಟಿಸಿರುವುದು ಮತ್ತು ಅಪಮಾನಿಸಿರುವ ದೃಶ್ಯಗಳು ವಿಡಿಯೊದಲ್ಲಿವೆ. ಆ ಗುಂಪಿನಲ್ಲಿ ಹಿಂದು ಹಾಗೂ ಮುಸ್ಲಿಂ ಧರ್ಮಕ್ಕೆ ಸೇರಿದವರಿದ್ದಾರೆ. ಕೆಲವು ಮಹಿಳೆಯರು ಕೂಡ ಇರುವುದು ವಿಡಿಯೊದಲ್ಲಿದೆ.

ಈ ಬಗ್ಗೆ ವ್ಯಾಪ್ತಿಯ ಮಾರ್ಕೆಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ದೂರು ನೀಡಲು ಯುವಕ ಹಾಗೂ ಯುವತಿಯರು ಮುಂದಾಗಿಲ್ಲ ಎನ್ನಲಾಗುತ್ತಿದೆ.

ಮುಸ್ಲಿಂ ವ್ಯಕ್ತಿಯ ಅಂಗಡಿ ಮೇಲೆ ದಾಳಿ

ಬೆಳಗಾವಿ ಹೊರವಲಯದ ಯಮನಾಪುರ ಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಗೆ ಸೇರಿದ ಕೋಳಿಮಾಂಸದ ಅಂಗಡಿ ಮೇಲೆ ಹಿಂದೂ ಯುವಕರ ಗುಂಪೊಂದು ದಾಳಿ ಮಾಡಿ, ಮಾಲೀಕರ ಮೇಲೆ ಹಲ್ಲೆ ನಡೆಸಿದೆ.

‘ಅಲ್ಲಿನ ಭರಮದೇವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ, ಸಮೀಪದಲ್ಲಿ ಕೋಳಿಮಾಂಸದ ಅಂಗಡಿ ತೆರೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಗಲಾಟೆ ಶುರು ಮಾಡಿ ಮತೀಯ ಗೂಂಡಾಗಿರಿ ಪ್ರದರ್ಶಿಸಿದರು’ ಎಂದು ಆರೋಪಿಸಲಾಗಿದೆ.

‘ಅದೇ ಸಮಯದಲ್ಲಿ ಮರಾಠರಿಗೆ ಸೇರಿದ ಮೂರು ಮಾಂಸದ ಅಂಗಡಿಗಳು ತೆರೆದಿದ್ದವು. ಆದರೆ, ದುಷ್ಕರ್ಮಿಗಳು ಮುಸ್ಲಿಂ ವ್ಯಕ್ತಿಯ ಅಂಗಡಿಯನ್ನಷ್ಟೆ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಮಾಳಮಾರುತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಹಲ್ಲೆ ನಡೆಸಿದ ಯುವಕರನ್ನು ಕರೆಸಿ ರಾಜಿ ಮಾಡಿಸಿದ್ದಾರೆ’ ಎಂದು ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT