ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪೇಟ ಕಟ್ಟುತ್ತಾ ನವೋದ್ಯಮಿಯಾದ ಸುನೀಲ್ ಸದಾಶಿವ ದಳವಿ

ವಿವಿಧ ರಾಜ್ಯಗಳಲ್ಲಿ ಇವರಿಗೆ ಬೇಡಿಕೆ
Last Updated 29 ಆಗಸ್ಟ್ 2018, 15:18 IST
ಅಕ್ಷರ ಗಾತ್ರ

ನಿಪ್ಪಾಣಿ: ಇಲ್ಲಿನ ಸಂಭಾಜಿನಗರದ ನಿವಾಸಿ ಸುನೀಲ್ ಸದಾಶಿವ ದಳವಿ, ಪೇಟ ಕಟ್ಟುವುದು ಹಾಗೂ ಥರ್ಮೋಕಾಲ್‌ನಿಂದ ಆಕರ್ಷಕ ಮಂಟಪಗಳನ್ನು ತಯಾರಿಸುವ ಕೌಶಲ ಹಾಗೂ ಕಲೆಯನ್ನು ಬಳಸಿಕೊಂಡು, ನವೋದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಹವ್ಯಾಸವಾಗಿದ್ದ ಕೌಶಲವನ್ನು ಉದ್ಯಮವನ್ನಾಗಿ ಮಾಡಿಕೊಂಡಿರುವ 47 ವರ್ಷದ ಅವರು, ಅದರಲ್ಲಿಯೇ ಜೀವನ ಕಂಡುಕೊಂಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ್‌, ಆಂಧ್ರಪ್ರದೇಶ ಮೊದಲಾದ 11 ರಾಜ್ಯಗಳಲ್ಲಿ ಪೇಟ ಕಟ್ಟುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಬೇಡಿಕೆಯನ್ನೂ ಗಳಿಸಿದ್ದಾರೆ. ಗುಜರಾತ್‌ನಲ್ಲಿ ನಡೆಯುವ ಹಲವಾರು ಸಮಾರಂಭಗಳಿಗಾಗಿ ವರ್ಷಕ್ಕೆ 10–12 ಬಾರಿ ಹೋಗಿ ಬರುತ್ತಾರೆ!

ಸಮಾರಂಭಗಳಲ್ಲಿ ಬಲೂನ್‌ಗಳಿಂದ ಅಲಂಕಾರ, ರಂಗೋಲಿ, ಮೆಹಂದಿ ಹಾಕುವುದನ್ನೂ ಉದ್ಯಮದೊಂದಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಕೆಲವರಿಗೆ ಕೆಲಸವನ್ನೂ ಕೊಟ್ಟಿದ್ದಾರೆ.

ಪೇಟ ಕಟ್ಟುವುದರಲ್ಲಿ ದಾಖಲೆ:ಮುಗಳಖೋಡದಲ್ಲಿ ಹೋದ ವರ್ಷ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸುನೀಲ ದಳವಿ ತಮ್ಮ ತಂಡದೊಂದಿಗೆ 10ಸಾವಿರಕ್ಕೂ ಹೆಚ್ಚು ಮಂದಿಗೆ ಪೇಟ ಕಟ್ಟಿ ದಾಖಲೆ ಮಾಡಿದ್ದಾರೆ. 2015ರಲ್ಲಿ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರಿಗೂ ಗುಜರಾತ್‌ನ ಹುಂಜಾದಲ್ಲಿ ಪೇಟ ಕಟ್ಟಿದ್ದಾಗಿ ಸುನೀಲ್‌ ಹೇಳುತ್ತಾರೆ.

ಎಚ್‌.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಬಿ.ಎಸ್‌. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಶರದ್‌ ಪವಾರ್, ಎಚ್‌.ಡಿ. ರೇವಣ್ಣ ಸೇರಿದಂತೆ 600ಕ್ಕೂ ಅಧಿಕ ಕೇಂದ್ರ ಹಾಗೂ ವಿವಿಧ ರಾಜ್ಯಗಳ ರಾಜಕೀಯ ನಾಯಕರು, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲಾದ ಲಕ್ಷಕ್ಕೂ ಹೆಚ್ಚು ಮಂದಿಗೆ ಪೇಟ ಕಟ್ಟಿದ್ದೇನೆ. ಎಲ್ಲರೂ ಖುಷಿ ಪಟ್ಟಿದ್ದಾರೆ ಎನ್ನುತ್ತಾರೆ ಅವರು.

‘ತಂದೆ ಹಮಾಲಿಯಾಗಿ ದುಡಿದು ಕುಟುಂಬ ನಿರ್ವಹಿಸುತ್ತಿದ್ದರು. ಬಿಡುವಿನ ಸಮಯದಲ್ಲಿ ಗೋಡೆ ಮೇಲೆ ಚಿತ್ರ ಬಿಡಿಸುವ ಹವ್ಯಾಸವಿತ್ತು. ಅದನ್ನು ಗಮನಿಸುತ್ತಿದ್ದೆ. ಕ್ರಮೇಣ ನಾನೂ ಅನುಸರಿಸಿದೆ. ನಂತರ ಥರ್ಮೋಕಾಲ್‌ನಲ್ಲಿ ಕಲಾಕೃತಿಗಳ ತಯಾರಿಕೆ ಹವ್ಯಾಸವಾಯಿತು. ಅದೇ ಉದ್ಯಮವಾಗಿದೆ. ಬಡತನ ಕಂಡಿದ್ದ ನಾನು ಈಗ, ಆರ್ಥಿಕವಾಗಿ ಸದೃಢವಾಗಿದ್ದೇನೆ. ನನಗೆ ಸಿದ್ದಾರ್ಥ ಕರೋಶಿ ಮತ್ತು ದೀಪಕ ಢೇರೆ ನೆರವಾಗುತ್ತಿದ್ದಾರೆ. ಪತ್ನಿ ಕಲ್ಪನಾ ಮತ್ತು ಪುತ್ರ ಶಂಭುರಾಜ ಕೂಡ ಸಹಾಯ ಮಾಡುತ್ತಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. ವಿಎಸ್‌ಎಂ ಸಂಚಾಲಕ ಭರತ ಕುರಬೆಟ್ಟಿ ಆರಂಭದ ದಿನಗಳಿಂದಲೂ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸ್ಮರಿಸಿದರು.

ಆಕರ್ಷಕ ಮಂಟಪಗಳು:ಈ ಬಾರಿ ಗಣೇಶ ಚತುರ್ಥಿಗೆ, ಒಂದು ಅಡಿಯಿಂದ 7 ಅಡಿವರೆಗಿನ ಥರ್ಮೋಕಾಲ್ ಮಂಟಪಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಅವುಗಳ ಬೆಲೆ ₹ 350ರಿಂದ ₹7000ವರೆಗೆ ಇದೆ. ಕೆಲ ಮಂಟಪಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಪ್ರತಿ ವರ್ಷ ಏನಾದರೊಂದು ವಿಶೇಷಕ್ಕೆ ಯತ್ನಿಸುತ್ತಿದ್ದಾರೆ. ದಸರಾ ಹಬ್ಬದಲ್ಲಿ ಶಮಿ ಎಲೆಗಳಿಗೆ ಚಿನ್ನ, ಬೆಳ್ಳಿ ಬಣ್ಣ ಹಚ್ಚಿ ಮಾರಾಟಕ್ಕಿಡುತ್ತಾರೆ. ದೀಪಾವಳಿಯಲ್ಲಿ ಥರ್ಮೋಕಾಲ್‌ನಲ್ಲಿ ಶುಭ ಹಾರೈಕೆಗಳ ಹಲವು ಮಾದರಿಗಳು ಮತ್ತು ಆಕಾಶ ಬುಟ್ಟಿಗಳನ್ನು ತಯಾರಿಸುತ್ತಾರೆ. ಶಿವಾಜಿ ಮಹಾರಾಜರ ಜಯಂತಿಯಲ್ಲಿ ಥರ್ಮೋಕಾಲ್‌ನಿಂದ ಕೋಟೆಗಳ ಮಾದರಿ ಸಿದ್ಧಪಡಿಸುತ್ತಾರೆ.

ಗಣೇಶ ಉತ್ಸವವನ್ನು ಎಲ್ಲರೂ ಕುಟುಂಬದೊಂದಿಗೆ, ಸಂಭ್ರಮದಿಂದ ಆಚರಿಸಬೇಕು. ಇದಕ್ಕಾಗಿ, 3 ವರ್ಷಗಳಿಂದಲೂ ಮಂಟಪಗಳ ಬೆಲೆ ಹೆಚ್ಚಿಸಿಲ್ಲ ಎನ್ನುತ್ತಾರೆ. ತಮ್ಮ ಇಚ್ಛೆಯಂತೆ, ಅಂಗವಿಕಲೆ ಮದುವೆಯಾಗಿ ಮಾದರಿಯಾಗಿದ್ದಾರೆ. ಸಂಪರ್ಕಕ್ಕೆ ಮೊ: 98454 81787.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT