ಭಾನುವಾರ, ಸೆಪ್ಟೆಂಬರ್ 19, 2021
23 °C

ಮನಸೂರೆಗೊಳ್ಳುವ ಹೂವಿನಕೊಳ್ಳ

ಚನ್ನಪ್ಪ ಮಾದರ Updated:

ಅಕ್ಷರ ಗಾತ್ರ : | |

Prajavani

ರಾಮದುರ್ಗ: ಪಟ್ಟಣದ ಸುತ್ತಲೂ ಐದು ಆಕರ್ಷಕ ಕೊಳ್ಳ(ಝರಿ)ಗಳಿವೆ. ಅದರಲ್ಲಿ ಹೂವಿನಕೊಳ್ಳದ ಸೊಬಗು ಮನಸೂರೆಗೊಳ್ಳುತ್ತದೆ. ಜಲಪಾತ, ನಿಸರ್ಗ ನಿರ್ಮಿತ ಈಜುಕೊಳದ ಸೊಬಗಿನಿಂದ ಈ ಸ್ಥಳ ಪ್ರೇಕ್ಷಣೀಯ ಸ್ಥಳವಾಗಿ ಗುರುತಿಸಿಕೊಂಡಿದೆ.

ಮಳೆ ಇಲ್ಲದೆ ಸೌಂದರ್ಯ ಕಳೆದುಕೊಂಡಿದ್ದ ಹಳ್ಳಗಳು, ಕಳೆದ ತಿಂಗಳು ನಿರಂತರವಾಗಿ ಸುರಿದ ಮಳೆಯಿಂದಾಗಿ ತುಂಬಿ ಹರಿಯುತ್ತಿವೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಹೂವಿನಕೊಳ್ಳವೂ ಆಕರ್ಷಿಸುತ್ತಿದೆ. ಇದರಿಂದ ನಿರ್ಮತ ಚಿಕ್ಕ ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇಲ್ಲಿಗೆ ನಿತ್ಯವೂ ನೂರಾರು ಯಾತ್ರಿಗಳು ತಂಡೋಪ ತಂಡವಾಗಿ ಬರುತ್ತಿದ್ದಾರೆ.

ದಟ್ಟ ಕಾನನ ಮಧ್ಯೆ ಯಾವುದೇ ಅಡೆತಡೆ ಇಲ್ಲದೆ ಧುಮ್ಮಿಕ್ಕುವ ಹೂವಿನಕೊಳ್ಳದ ಸೊಬಗನ್ನು ಕಣ್ಣಾರೆ ಕಂಡಿರುವ ಪ್ರವಾಸಿಗರು ಹರ್ಷದಿಂದ ವಿವರಣೆ ನೀಡುತ್ತಾರೆ. ಇದರ ಸೊಬಗು ಕಣ್ತುಂಬಿಕೊಳ್ಳಲು ಕಾಲೇಜು ವಿದ್ಯಾರ್ಥಿಗಳು, ನವವಿವಾಹಿತರು, ಪ್ರೇಮಿಗಳು ಬರುವುದು ಸಾಮಾನ್ಯವಾಗಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಪಕ್ಕದಿಂದ 3 ಕಿ.ಮೀ. ನಡೆದು ಸಾಗಿದರೆ ನಿಸರ್ಗ ಸೌಂದರ್ಯದ ಹಚ್ಚ ಹಸರಿನ ಕಾಡು ಮುದ ನೀಡುತ್ತದೆ. ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಹೂವಿನಕೊಳ್ಳ ಜಲಪಾತವಿದೆ.

ಈ ಜಾಗ ತಲುಪಲು ಮೊದಲಿಗೆ ಎರಡು ಚಿಕ್ಕ ಹಳ್ಳಗಳನ್ನು ದಾಟಿಕೊಂಡು ಎರಡು ಗುಡ್ಡಗಳನ್ನು ಹತ್ತಿ ಮುಂದೆ ಸಾಗಬೇಕಿದೆ. ಪಕ್ಕದ ರೈತರು ಕೊಳ್ಳಕ್ಕೆ ಹೋಗುವ ದಾರಿಯನ್ನು ಆಕ್ರಮಿಸಿಕೊಂಡಿದ್ದರಿಂದ ಪ್ರಕೃತಿ ಪ್ರಿಯರು ಗುಡ್ಡಗಾಡು ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕು. ದಟ್ಟವಾಡ ಕಾಡಿನಲ್ಲಿ ಸಾಗಲು ಚಿಕ್ಕಚಿಕ್ಕ ದಾರಿಯನ್ನು ಹುಡಕಿಕೊಂಡು ಹೋಗಬೇಕು. ಕೆಲವು ಕಡೆಗಳಲ್ಲಿ ತೆವಳಿಕೊಂಡು ಸಾಗುವುದು ಅನಿವಾರ್ಯವಾಗಿದೆ. ಹಕ್ಕಿಗಳ ಚಿಲಿಪಿಲಿ, ತಂಗಾಳಿಯು ದಣಿವನ್ನು ನಿವಾರಿಸುತ್ತದೆ.

ಹೂವಿನ ಕೊಳ್ಳದ ಪ್ರದೇಶದಲ್ಲಿ 3-4 ಪುಟ್ಟ ಪುಟ್ಟ ಜಲಪಾತಗಳನ್ನು ಕಾಣಬಹುದು. ಮುಂದೆ ಸಾಗಿದರೆ ನಿಸರ್ಗ ನಿರ್ಮಿತ ಕೊಳವಿದೆ. ಅಲ್ಲಿ ಮಿಂದರೆ ಆಯಾಸವೆಲ್ಲ ದೂರಾಗುತ್ತದೆ ಎನ್ನುತ್ತಾರೆ ಪ್ರವಾಸಿಗರು. ತಾಲ್ಲೂಕಿನ ಬಹುತೇಕ ಹಳ್ಳಿಗಳ ಜನ ಹೂವಿನಕೊಳ್ಳದ ವೀಕ್ಷಣೆಗೆ ಬರುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು