ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿಗಾಗಿ ಅಲ್ಲ. ಪತ್ನಿ ಪ್ರೀತಿಗಾಗಿ ಹಂಬಲಿಸುತ್ತಿರುವೆ: ಚಿತ್ರ ಸಾಹಿತಿ ಕಲ್ಯಾಣ್

ಒಂದಾಗುವ ವಿಶ್ವಾಸ
Last Updated 4 ಅಕ್ಟೋಬರ್ 2020, 9:08 IST
ಅಕ್ಷರ ಗಾತ್ರ

ಬೆಳಗಾವಿ: ‘ಪತ್ನಿ ಅಶ್ವಿನಿ ಒಳ್ಳೆಯವಳು. 3ನೇಯವರು ಅವಳ ಮೇಲೆ ಪ್ರಭಾವ ಬೀರಿ ದೂರ ಮಾಡಿದ್ದಾರೆ. ಆಸ್ತಿ ಪಡೆಯುವ ದುರಾಸೆ ಇಲ್ಲ. ಯಾರಿಗಾದರೂ ಬರೆಯಲಿ. ಅವಳ ಪ್ರೀತಿಗಾಗಿ ನಾನು ಹಂಬಲಿಸುತ್ತಿದ್ದೇನೆ’ ಎಂದು ಚಲನಚಿತ್ರ ಸಾಹಿತಿ ಕೆ. ಕಲ್ಯಾಣ್ ತಿಳಿಸಿದರು.

‘ಮನೆ ಕೆಲಸದಾಕೆ ಗಂಗಾ ಕುಲಕರ್ಣಿ ಹಾಗೂ ಮಂತ್ರವಾದಿ ಶಿವಾನಂದ ವಾಲಿ ಸೇರಿ ಪತ್ನಿ, ಅತ್ತೆ ಹಾಗೂ ಮಾವನನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಾರೆ’ ಎಂದು ಮಾಳಮಾರುತಿ ಠಾಣೆಗೆ ದೂರು ಕೊಟ್ಟಿರುವ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘14 ವರ್ಷಗಳ ದಾಂಪತ್ಯ ನಮ್ಮದು. ತಂದೆ ತೀರಿಕೊಂಡು 14 ವರ್ಷ, ತಾಯಿ ಅಗಲಿ 2 ವರ್ಷವಾಗಿದೆ. ನಂತರ ದಂಪತಿ ಮಾತ್ರವೇ ಇದ್ದೆವು. ಹೋದ ವರ್ಷ ಬೆಂಗಳೂರಿನಲ್ಲೇ ಸಮೀಪದಲ್ಲಿದ್ದ ಅತ್ತೆ–ಮಾವನನ್ನು ಜೊತೆಗಿರಿಸಿಕೊಂಡಿದ್ದೆವು. ಅತ್ತೆಯೇ ಗಂಗಾಳನ್ನು ಅಡುಗೆ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಆಕೆ ಬಂದ ಬಳಿಕ ಸಮಸ್ಯೆಗಳು ಶುರುವಾದವು’ ಎಂದು ತಿಳಿಸಿದರು.

ವಿಚಿತ್ರ ಪೂಜೆ

‘ಕ್ರಮೇಣ ಪತ್ನಿ ಡಲ್ ಆದಳು. ಅತ್ತೆ ಮಧ್ಯರಾತ್ರಿ ವಿಚಿತ್ರವಾಗಿ ಪೂಜೆ ಮಾಡುತ್ತಿದ್ದರು. ವಿಚಾರಿಸಿದಾಗ, ಗಂಗಾ ಸಲಹೆ ನೀಡಿದ್ದೆಂದು ತಿಳಿಯಿತು. ಮನೆಯಲ್ಲಿ ದೆವ್ವವಿದೆ, ಅದನ್ನು ಹೋಗಿಸಬೇಕು. ಅ ಕೆಲಸಕ್ಕೆ ಬಾಗಲಕೋಟೆಯಲ್ಲಿ ಗುರೂಜಿ ಇದ್ದಾರೆ ಎಂದು ಗಂಗಾ ಆಗಾಗ ಹೇಳುತ್ತಿದ್ದರು. ಆ ವ್ಯಕ್ತಿಯೇ ಶಿವಾನಂದ ವಾಲಿ. ಜನವರಿಯಲ್ಲಿ ಇಲ್ಲಿಗೆ ಬಂದ ಪತ್ನಿ, ಅತ್ತೆ ಹಾಗೂ ಮಾವ ವಾಪಸಾಗಲಿಲ್ಲ. ಕ್ರಮೇಣ ಪತ್ನಿ ನನ್ನನ್ನು ಅಪರಿಚಿತನಂತೆ ಕಾಣುತ್ತಿದ್ದಾಳೆ’ ಎಂದು ತಿಳಿಸಿದರು.

ನಾಪತ್ತೆಯಾಗಿದ್ದರಿಂದ

‘ಪೂಜೆಗೆಂದು ಅತ್ತೆ ಸಂಬಂಧಿಕರಿಂದ ಲಕ್ಷಗಟ್ಟಲೆ ಹಣ ಪಡೆದು, ವಾಲಿಗೆ ನೀಡಿದ್ದಾರೆ. ಈ ಕುರಿತ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದೇನೆ. ಪತ್ನಿ ಹಾಗೂ ಕುಟುಂಬದವರು ನಿಗೂಢವಾಗಿ ನಾಪತ್ತೆಯಾಗಿದ್ದರಿಂದ ದೂರು ಕೊಡಬೇಕಾಯಿತು’ ಎಂದು ಹೇಳಿದರು.

‘ಶಿವಾನಂದ ಪತ್ನಿಯ ಸೋದರ ಸಂಬಂಧಿಯಲ್ಲ. ಆದರೆ, ನಾನು ದೂರು ಕೊಟ್ಟ ನಂತರ ಮತ್ತು ವಾಲಿಯನ್ನು ಪೊಲೀಸರು ವಶಕ್ಕೆ ಪಡೆದ ನಂತರವೇ ಪತ್ನಿ ದೂರುತ್ತಿದ್ದಾಳೆ. ಇದರ ಅರ್ಥವೇನು?’ ಎಂದರು.

‘ಆಸ್ತಿ ಬಗ್ಗೆ ಆಸಕ್ತಿ ಇದ್ದಿದ್ದರೆ, ಯಾವಾಗಲೋ ಬರೆಸಿಕೊಳ್ಳುತ್ತಿದ್ದೆ. ಪತ್ನಿಗೆ ಕಿರುಕುಳ ಕೊಟ್ಟಿದ್ದೇನೆ, ಮಾಟ ಮಾಡುತ್ತಿದ್ದೆ ಎಂಬ ಆರೋಪ ಸುಳ್ಳು. ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಬಗ್ಗೆ ನೋಟಿಸ್ ಬಂದಿಲ್ಲ. ನನ್ನೊಂದಿಗಿದ್ದಾಗ ಚೆನ್ನಾಗಿದ್ದಳು. ಈಗ ಆಕೆಯಲ್ಲಿ ‘ಪ್ರೇತ ಕಳೆ’ ಇದೆ. ಯಾವುದೋ ಪ್ರಚೋದನೆ, ಆತಂಕದಿಂದ ನನ್ನ ವಿರುದ್ಧ ಮಾತನಾಡಿದ್ದಾಳೆ. ದಾಂಪತ್ಯದಲ್ಲಿ ಬಿರುಕು ತಂದಿದ್ದೇ ವಾಲಿ’ ಎಂದು ದೂರಿದರು.

‘ವಿಚ್ಛೇದನ ಹಂತಕ್ಕೆ ಬಂದರೆ ಸಮಾಲೋಚನೆಗೆ ಅವಕಾಶವಿದೆ. ಪ್ರೀತಿ ಉಳಿಯುತ್ತದೆಂಬ ನಂಬಿಕೆ ಇದೆ. ನಾನು–ಪತ್ನಿ ಗೀತೆ ಸಂಯೋಜಿಸಿ ಬೆಳಗಾವಿಯಲ್ಲೇ ಬಿಡುಗಡೆ ಮಾಡುತ್ತೇನೆ. ಇಬ್ಬರೂ ಒಂದಾಗುವ ವಿಶ್ವಾಸವಿದೆ’ ಎಂದು ಹೇಳಿದರು.

ಈ ನಡುವೆ, ಪೊಲೀಸರು ಆಶ್ವಿನಿ ಅವರ ವಿಚಾರಣೆ ಹಾಗೂ ಆಪ್ತಸಮಾಲೋಚನೆಯನ್ನು ಭಾನುವಾರವೂ ಮುಂದುವರಿಸಿದರು. ದಂಪತಿಯ ಸಂಬಂಧಿಕರಿಂದಲೂ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT