ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ಕ್ಕೂ ರಮೇಶ ವಿರುದ್ಧ ಸ್ಪರ್ಧೆ: ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ

Last Updated 15 ಡಿಸೆಂಬರ್ 2019, 12:33 IST
ಅಕ್ಷರ ಗಾತ್ರ

ಗೋಕಾಕ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಪ್ರಭಾಕರ ಕೋರೆ, ಸುರೇಶ ಅಂಗಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಮೊದಲಾದವರ ಯತ್ನದಿಂದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬೀಗುತ್ತಿರುವ ಸಹೋದರ ರಮೇಶ ಜಾರಕಿಹೊಳಿ ವಿರುದ್ಧ 2023ರ ಚುನಾವಣೆಯಲ್ಲೂ ಸ್ಪರ್ಧಿಸುತ್ತೇನೆ’ ಎಂದು ಕಾಂಗ್ರೆಸ್‌ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು.

ಭಾನುವಾರ ಇಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉಪ ಚುನಾವಣೆಯ ಸೋಲಿಗೆ ಕಾಂಗ್ರೆಸ್ ಕಾರ್ಯಕರ್ತರು ಧೈರ್ಯಗುಂದಬಾರದು. ಜನಸಾಮಾನ್ಯರ ಯಾವುದೇ ರೀತಿಯ ಕೆಲಸ ಕಾರ್ಯಗಳಿದ್ದರೂ ನಾನು ಮುಂದಾಗಿ ಮಾಡಿಸಿಕೊಡುತ್ತೇನೆ’ ಎಂದು ತಿಳಿಸಿದರು.

‘ನಮ್ಮ ಹೋರಾಟ ಯಡಿಯೂರಪ್ಪ ಅಥವಾ ಅವರ ಪಕ್ಷದ ವಿರುದ್ಧವಾಗಲಿ ಇಲ್ಲವೇ ಇಲ್ಲ. ಅದೇನಿದ್ದರೂ ಸ್ಥಳೀಯ ಭ್ರಷ್ಟಾಚಾರದ ವ್ಯವಸ್ಥೆಯ ವಿರುದ್ಧ ಮುಂದುವರಿಯಲಿದೆ’ ಎಂದು ಪುನರುಚ್ಚರಿಸಿದ ಅವರು, ‘ಉಪ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ’ ಎಂದರು.

‘ಮಾವ–ಅಳಿಯನ ವಿರುದ್ಧ (ರಮೇಶ ಹಾಗೂ ಅಳಿಯ) ನಾವು ಗೆದ್ದಿದ್ದೇವೆ. ಆದರೆ, ಯಡಿಯೂರಪ್ಪ ಮುಂದೆ ಸೋತಿದ್ದೇವೆ. ಅಭ್ಯರ್ಥಿ ನೋಡಬೇಡಿ, ನನ್ನನ್ನು ನೋಡಿ ಎಂದು ಯಡಿಯೂರಪ್ಪ ಹೇಳಿದ್ದಕ್ಕೆ ಜನ ಮತ ಹಾಕಿದ್ದಾರೆ. 40ಸಾವಿರ ಮತಗಳು ಅವರಿಗೆ ಬಂದಿವೆ. ನಾವು ಒಳ್ಳೆ ಮಾರ್ಗದಲ್ಲಿ ಹೋದರೆ, ವಿರೋಧಿಗಳು ವಾಮಮಾರ್ಗದಲ್ಲಿ ಹೋಗಿದ್ದಾರೆ. ಜನರಿಗೆ ಮೋಸ ಮಾಡಿ ಮತ ಹಾಕಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ‘ಮುಂದಿನ ಮೂರು ವರ್ಷಗಳ ಅವಧಿಯುದ್ದಕ್ಕೂ ಲಖನ್ ಜನರ ಮಧ್ಯೆ ಹೋಗಿ ಹಗಲಿರುಳು ಅವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿ, ರಮೇಶಗಿಂತ ಹೇಗೆ ಭಿನ್ನರು ಎಂಬುದನ್ನು ತೋರಿಸಕೊಟ್ಟರೆ ಮುಂಬರುವ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿಬಹುದು’ ಎಂದು ತಿಳಿಸಿದರು.

‘ನಮ್ಮ ಹೋರಾಟ ಸಂಘಟಿತವಾಗಿದ್ದರೆ ನಾವು ಟಿಕೆಟ್‌ಗಾಗಿ ಯಾವ ಪಕ್ಷದ ಬಾಗಿಲು ಬಡಿಯುವ ಅಗತ್ಯವೂ ಇಲ್ಲ. ಟಿಕೆಟ್ ತಾನಾಗಿಯೇ ನಮ್ಮನ್ನು ಅರಿಸಿಕೊಂಡು ಬರುತ್ತದೆ’ ಎಂದರು.

‘ಸಮೀಪದ ಗೋಕಾಕ ಫಾಲ್ಸ್‌ ದನಗಳ ಪೇಟೆ ನಿವಾಸಿಗಳು ವಿದ್ಯುತ್ ಸಂಪರ್ಕವಿಲ್ಲದೇ 40 ವರ್ಷಗಳಿಂದ ಕತ್ತಲೆಯಲ್ಲಿ ದಿನ ಕಳೆಯುತ್ತಿದ್ದಾರೆ. ಅವರ ವಿರುದ್ಧ ರಮೇಶ ರಾಜಕೀಯ ಮಾಡುತ್ತಿದ್ದಾರೆ. ಉಪ ಚುನಾವಣೆ ವೇಳೆ ಜನರಿಗೆ ನೀಡಿದ ಭರವಸೆಯಂತೆ 200 ಕುಟುಂಬಗಳಿಗೆ ಸೋಲಾರ್ ದೀಪದ ವ್ಯವಸ್ಥೆ ಮಾಡಲಾಗಿದೆ. ಇನ್ನೂ 40 ಕುಟುಂಗಳಿಗೆ ಸೌಲಭ್ಯ ಕಲ್ಪಿಸಬೇಕಿದೆ. ಮುಂದಿನ ದಿನಗಳಲ್ಲಿ ಅದನ್ನೂ ಒದಗಿಸುವ ಮೂಲಕ ಆಡಿದಂತೆ ನಡೆದು ತೋರಿಸುವೆ’ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಅಶೋಕ ಹೊಳೆಯಾಚಿ, ಮಾರುತೆಪ್ಪ ನಿರ್ವಾಣಿ ಮತ್ತು ರಾಮಣ್ಣ ತೋಳಿ ಮಾತನಾಡಿದರು. ಕಾಂಗ್ರೆಸ್‌ ಗೋಕಾಕ ಬ್ಲಾಕ್ ಅಧ್ಯಕ್ಷ ಜಾಕೀರ್‌ ನದಾಫ್, ಕೆ.ಎಂ. ಗೋಕಾಕ, ಶಂಕರ ಗಿಡ್ಡನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT