ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ಕೈಯಲ್ಲಿ ಬಿಂದಿಗೆ ಕಂಡರೆ ನಿರ್ದಾಕ್ಷಿಣ್ಯ ಕ್ರಮ

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಶಾಸಕ ಎಚ್ಚರಿಕೆ
Published 19 ಜೂನ್ 2024, 14:55 IST
Last Updated 19 ಜೂನ್ 2024, 14:55 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ಕಿತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಬರುವ ಎಲ್ಲ ಶಾಲೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳ ಕೈಯಲ್ಲಿ ನೀರಿನ ಬಿಂದಿಗೆ ಕಂಡರೆ ಅಂಥವರ ಮೇಲೆ ನಿರ್ದಾಕ್ಷಣ್ಯವಾಗಿ ಕೈಗೊಳ್ಳಲಾಗುವುದು’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

‘ತಾಲ್ಲೂಕಿನಲ್ಲಿರುವ ಎಲ್ಲ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಪೈಪುಗಳಲ್ಲಿ ಸೋರಿಕೆ ಉಂಟಾಗಿದ್ದರೆ ಕೂಡಲೇ ಸರಿಪಡಿಸಬೇಕು’ ಎಂದು ನಿರ್ದೇಶನ ನೀಡಿದರು.

ಬೈಲಹೊಂಗಲ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾಂವಿ ಮಾತನಾಡಿ, ‘ಪ್ರತಿ ತಿಂಗಳು ಮೂರನೇ ಶನಿವಾರ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ನಾಲ್ಕನೆಯ ಶನಿವಾರ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಪಾಲಕರ ಸಭೆ ಕಡ್ಡಾಯವಾಗಿ ಕರೆಯಬೇಕು’ ಸೂಚಿಸಿದರು.

ಉಪ ಖಜಾನೆ ಇಲಾಖೆ ಅಧಿಕಾರಿ ಚಂದ್ರಶೇಖರ ನಡುವಿನಮನಿ ಮಾತನಾಡಿ, ‘ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ಅಧಿಕಾರ ಹಂಚಿಕೆ ಮಾಡಿಕೊಡಬೇಕು. ಹಾಗೆ ಮಾಡಿದರೆ ನೌಕರರ ಸಂಬಳ ವಿಳಂಬವಾಗುವುದಿಲ್ಲ’ ಎಂದು ಮನವಿ ಮಾಡಿದರು.

‘ಕೆಲವು ದೊಡ್ಡ ಕಚೇರಿಗಳಲ್ಲಿ ಕೆಲವು ಅಧಿಕಾರಿಗಳು ಬಿಲ್ ಮಾಡುವ ಅಧಿಕಾರವನ್ನು ತಮ್ಮ ಹತ್ತಿರವೇ ಇಟ್ಟುಕೊಂಡಿದ್ದಾರೆ. ಇದರಿಂದ ಕೆಲವರ ಸಂಬಳ ಪಾವತಿ ಮಾಡುವುದು ತಡವಾಗುತ್ತಿದೆ’ ಎಂದು ಶಾಸಕ ಬಾಬಾಸಾಹೇಬ ಅವರ ಗಮನಕ್ಕೆ ತಂದರು.

‘ಹಿಂದಿನ ವರ್ಷದ ಬಾಕಿ ಬಿಲ್ ಪಾವತಿ ಮಾಡದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಕಳೆದ ವರ್ಷದಲ್ಲಿ ಬಾಕಿ ಇರುವ ಬಿಲ್ ಮಾಡಿ ಖಜಾನೆಗೆ ಕಳಿಸಬೇಡಿ’ ಎಂದು ಅವರು ಕೋರಿದರು.

ಕಿತ್ತೂರು ತಾಲ್ಲೂಕು ಪಂಚಾಯ್ತಿ ಅಧಿಕಾರಿ ಕಿರಣ ಘೋರ್ಪಡೆ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT