ಮಂಗಳವಾರ, ಜೂನ್ 15, 2021
24 °C
ಅಕ್ರಮವಾಗಿ ಮರಳು ಸಾಗಣೆ; ಕ್ರಮಕ್ಕೆ ಆಗ್ರಹ

ಧುಪದಾಳ ಜಲಾಶಯದ ಒಡಲಿಗೆ ಕನ್ನ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬಹುತೇಕರು ಕೋವಿಡ್-19 ಆತಂಕದಲ್ಲಿ ಅಥವಾ ಲಾಕ್‌ಡೌನ್‌ ಕಾರಣದಿಂದ ಮನೆ ಸೇರಿಕೊಂಡಿದ್ದರೆ, ಇಲ್ಲಿ ಕೆಲವರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ.

1883ರಲ್ಲಿ ಬ್ರಿಟಿಷರು ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಧುಪದಾಳ ಜಲಾಶಯದ ಗೋಡೆ ಪಕ್ಕದಲ್ಲೇ ಅನಧಿಕೃತವಾಗಿ ಮರಳು ಗಣಿಗಾರಿಕೆ  ನಡೆಸಿದ್ದಾರೆ. ಅಣೆಕಟ್ಟೆಯ ಗೋಡೆಯು ತುಂಬಾ ಹಳೆಯದಾಗಿದ್ದರಿಂದ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ನಡುವೆ, ಕೆಲವರು ಜೆಸಿಬಿಗಳನ್ನೆ ಬಳಸಿ ನದಿಯ ಒಡಲನ್ನು ಬಗೆಯುತ್ತಿರುವುದರಿಂದಾಗಿ, ಕಟ್ಟಡಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಅಪಾಯವಾದರೆ ಲಕ್ಷಾಂತರ ಎಕರೆ ಅಚ್ಚುಕಟ್ಟು ಪ್ರದೇಶ ನೀರಿನ ಕೊರತೆ ಎದುರಿಸುವುದಲ್ಲದೆ ನೂರಾರು ಹಳ್ಳಿಗಳ ಜನರು ಮತ್ತು ಜಾನುವಾರಿಗೆ ಕುಡಿಯುವ ನೀರಿಗೆ ತೊಂದರೆ ಆಗುತ್ತದೆ ಎನ್ನುವ ಆತಂಕ ಎದುರಾಗಿದೆ.

138 ವರ್ಷಗಳ ಹಿಂದೆ ₹ 14 ಲಕ್ಷ ವೆಚ್ಚದಲ್ಲಿ ಬ್ರಿಟಿಷರು ಘಟಪ್ರಭಾ ನದಿಗೆ ಅಡ್ಡವಾಗಿ ನಿರ್ಮಿಸಿದ 6 ಗೇಟಿನ, 909.83 ಮೀಟರ್‌ ಉದ್ದದ, 0.37 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ, 107 ಕೀ.ಮೀ. ಎಡದಂಡೆ ಕಾಲುವೆಯನ್ನು ಹೊಂದಿ 4 ಲಕ್ಷ ಎಕರೆಗೆ ನೀರುಣಿಸುವ ಅಣೆಕಟ್ಟೆ ಇದಾಗಿದೆ. ನೀರಿನ ಒಳಹರಿವು ಕಡಿಮೆ ಆಗಿರುವುದರಿಂದ ಜಲಾಶಯ ಬಹುತೇಕ ಬರಿದಾಗಿದೆ. ಈ ಸಂದರ್ಭ ಬಳಸಿಕೊಂಡ ಕೆಲವರು ಒಡಲಿಗಿಳಿದು ಕನ್ನ ಹಾಕಿದ್ದಾರೆ. ಅಂದಾಜಿನ ಪ್ರಕಾರ 25 ಟ್ರ್ಯಾಕ್ಟರ್‌ಗಳಲ್ಲಿ 130ಕ್ಕೂ ಹೆಚ್ಚು ಟ್ರಿಪ್‌ಗಳಲ್ಲಿ ಮರಳನ್ನು ತಮ್ಮ ಜಾಗಕ್ಕೆ ಸಾಗಿಸಿ ಮಾರುವ ಉದ್ದೇಶದಿಂದ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯವನ್ನು ಸ್ಥಳೀಯರು ‘ಪ್ರಜಾವಾಣಿ’ ಗಮನಕ್ಕೆ ತಂದಿದ್ದಾರೆ.

‘ಪ್ರಭಾವಿಗಳು ಈ ಅಕ್ರಮದಲ್ಲಿ ತೊಡಗಿದ್ದಾರೆ. ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಆಗುತ್ತಿದೆ. ಈಗಾಗಲೇ ಸಾಗಿಸಿರುವ ಮರಳು ವಶಪಡಿಸಿಕೊಂಡು ಹರಾಜು ಹಾಕಬೇಕು. ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದವರ ತಕ್ಷಣ ಕ್ರಮ ಜರುಗಿಸಬೇಕು’ ಎಂದು ವಕೀಲ ಮಲ್ಲಿಕಾರ್ಜುನ ಚೌಕಶಿ ಒತ್ತಾಯಿಸಿದರು.

ಅಧಿಕಾರಿ ದೂರಿನಲ್ಲೇನಿದೆ?

ಮರಳು ಸಾಗಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಾಗೂ ಫೋಟೊಗಳು ಹರಿದಾಡಿದ್ದರಿಂದ ಎಚ್ಚೆತ್ತುಕೊಂಡ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಜೆಎಲ್‌ಬಿಸಿ ಉಪ ವಿಭಾಗ–1 ಘಟಪ್ರಭಾದ ಎಇಇ ಗೋಕಾಕ ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ. ಅದರ ಪ್ರತಿ ಲಭ್ಯವಾಗಿದೆ.

‘ಇಲಾಖೆ ವ್ಯಾಪ್ತಿಯಲ್ಲಿರುವ ಧುಪದಾಳ ಜಲಾಶಯದ ಗೇಟುಗಳಲ್ಲಿ ನೀರಿನ ಸೋರುವಿಕೆ ತಡೆಯಲು ನಿರ್ವಹಣೆ ಕೆಲಸ ಪ್ರಗತಿಯಲ್ಲಿದೆ. ಜಲಾಶಯ ಬರಿದಾಗಿರುವುದರಿಂದ ಕೆಲ ಕಿಡಿಗೇಡಿಗಳು, ಅಣೆಕಟ್ಟೆಯ ಕೆಳಭಾಗದಲ್ಲಿ ಮೇ 15ರಿಂದ ಎರಡು ಜೆಸಿಬಿಗಳು ಹಾಗೂ 10 ಟ್ರ್ಯಾಕ್ಟರ್‌ಗಳನ್ನು ಬಳಸಿ ಅಕ್ರಮವಾಗಿ ಮರಳು ಸಾಗಣೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಇದರಿಂದ ಅಣೆಕಟ್ಟೆಗೆ ಹಾನಿ ಉಂಟಾಗುವ ಸಂಭವವಿದೆ. ಹಾಗಾದಲ್ಲಿ ಲಕ್ಷಾಂತರ ಎಕರೆ ಅಚ್ಚುಕಟ್ಟು ಪ್ರದೇಶ ಬಾಧಿತಗೊಳ್ಳುತ್ತದೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಅಭಾವ ಆಗುತ್ತದೆ. ಹೀಗಾಗಿ, ಕೂಡಲೇ ಕಾನೂನು ಕ್ರಮ ಕೈಗೊಂಡು ಅಕ್ರಮ ಮರಳು ಸಾಗಣೆ ನಿಲ್ಲಿಸಬೇಕು’ ಎಂದು ಕೋರಿದ್ದಾರೆ. ಪ್ರತಿಯನ್ನು ಘಟಪ್ರಭಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌, ನಿಗಮದ ಎಇ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರಿಗೂ ಸಲ್ಲಿಸಲಾಗಿದೆ. ಇಷ್ಟಾದರೂ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ.

***

ಅಧಿಕಾರಿಗಳು ಈ ವಿಷಯದಲ್ಲಿ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಅಣ್ಣೆಕಟ್ಟೆಯಲ್ಲಿ ರಾಜಾರೋಷವಾಗಿ ಮರಳನ್ನು ಅಕ್ರಮವಾಗಿ ಸಾಗಿಸಲಾಗಿದೆ. ಇದರಿಂದ ಗೋಡೆಗೆ ಅಪಾಯವಾಗುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಅವಕಾಶ ಆಗದಂತೆ ನೋಡಿಕೊಳ್ಳಬೇಕು
ಮಲ್ಲಿಕಾರ್ಜುನ ಚೌಕಶಿ, ವಕೀಲ, ಗೋಕಾಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು