ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಸಿಬ್ಬಂದಿ ನೇಮಕಕ್ಕೆ ಶೀಘ್ರ ‍ಪ್ರಸ್ತಾವ- ಡಿಜಿಪಿ ಅಲೋಕ ಮೋಹನ್‌

ಉತ್ತರ ವಲಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಡಿಜಿಪಿ ಅಲೋಕ ಮೋಹನ್‌
Published 22 ನವೆಂಬರ್ 2023, 16:23 IST
Last Updated 22 ನವೆಂಬರ್ 2023, 16:23 IST
ಅಕ್ಷರ ಗಾತ್ರ

ಬೆಳಗಾವಿ: ‘ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್‌ ಸಿಬ್ಬಂದಿ ಅವಶ್ಯಕತೆ ಇದೆ. ಹೊಸ ನೇಮಕಾತಿಗಾಗಿ ಶೀಘ್ರ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಡಿಜಿಪಿ ಅಶೋಕ ಮೋಹನ್‌ ಹೇಳಿದ್ದಾರೆ.

ನಗರಕ್ಕೆ ಬುಧವಾರ ಭೇಟಿ ನೀಡಿದ ಅವರು, ಉತ್ತರ ವಲಯ ವ್ಯಾಪ್ತಿಯ ಜಿಲ್ಲೆಗಳ ಹಾಗೂ ಬೆಳಗಾವಿ ನಗರ ಆಯುಕ್ತಾಲಯದ ವ್ಯಾಪ್ತಿಯ ಸಭೆ ನಡೆಸಿ ಮಾತನಾಡಿದರು.

‘ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಇದಕ್ಕೆ ತಕ್ಕ ಸಿದ್ಧತೆ ಈಗಿನಿಂದಲೇ ಮಾಡಿಕೊಳ್ಳಬೇಕು. ಅಕ್ರಮ ಚಟುವಟಿಕೆ ನಡೆಸುವವರ ಮೇಲೆ ನಿಗಾ ಇಡಬೇಕು. ಕಾನ್‌ಸ್ಟೆಬಲ್‌ನಿಂದ ಹಿಡಿದು ಎಸ್ಪಿವರೆಗೆ ಎಲ್ಲ ಹಂತದ ಸಿಬ್ಬಂದಿ, ಅಧಿಕಾರಿಗಳೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಶಿಸ್ತಿನಿಂದ ನಿರ್ವಹಿಸಬೇಕು’ ಎಂದೂ ಸೂಚಿಸಿದರು.

‘ಪೊಲೀಸ್ ಠಾಣೆಗೆ ದೂರು ನೀಡಲು ಬರುವವರು ನೊಂದಿರುತ್ತಾರೆ. ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಧೈರ್ಯ ಹೇಳಬೇಕು. ಹಳ್ಳಿಗಳಲ್ಲಿ ಅಪರಾಧ ನಿಯಂತ್ರಣ ಕಾರ್ಯ ಚುರುಕುಗೊಳಿಸಲು ಬೀಟ್‌ ವ್ಯವಸ್ಥೆ ಹೆಚ್ಚಿಸಬೇಕು. ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ಮೇಲಿಂದ ಮೇಲೆ ಸಭೆಗಳನ್ನು ಮಾಡಿ, ಕಾನೂನು ಬಾಹಿರ ಕೃತ್ಯಗಳು ಎಲ್ಲಿ ಹೆಚ್ಚಾಗಿವೆ, ಹೇಗೆ ನಿಯಂತ್ರಿಸಬೇಕು ಎಂಬ ಚರ್ಚೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಅಪರಾಧಿಗಳು ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ನಿರಪರಾಧಿಗೆ ಯಾವುದೇ ಕಾರಣಕ್ಕೂ ಶಿಕ್ಷೆ ಆಗಬಾರದು. ಆ ರೀತಿಯಲ್ಲಿ ಪ್ರಕರಣಗಳ ತನಿಖೆಗೆ ಆದ್ಯತೆ ನೀಡಬೇಕು’ ಎಂದು ಅವರು ನಿರ್ದೇಶನ ನೀಡಿದರು.

‘ಬೆಳಗಾವಿ ನಗರ ಹೆಚ್ಚು ಬೆಳೆಯುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇನ್ನಷ್ಟು ಆದ್ಯತೆ ಕೊಡಬೇಕು. ಸಂಚಾರ ನಿಯಮ ಉಲ್ಲಂಘನೆಯಿಂದ ಸಂಭವಿಸುವ ಅಪಘಾತಗಳ ಸಂಖ್ಯೆ ತಗ್ಗಿಸಬೇಕು. ಈ ಬಗ್ಗೆ ಜನರಿಗೆ ಎಲ್ಲ ಪೊಲೀಸ್‌ ಠಾಣೆಗಳಿಂದ ಮೇಲಿಂದ ಮೇಲೆ ಅರಿವು ಮೂಡಿಸಬೇಕು, ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT