ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೇ ಎಕರೆಯಲ್ಲಿ ₹12 ಲಕ್ಷ ಆದಾಯ: ಮಾದರಿಯಾದ ರೈತ

ವಾಣಿಜ್ಯ ಬೆಳೆ, ತೋಟಗಾರಿಕೆ, ಆಹಾರ ಉತ್ಪನ್ನ ಏಕಕಾಲಕ್ಕೆ ಬೆಳೆದು ಮಾದರಿಯಾದ ರೈತ
ಚಂದ್ರಶೇಖರ ಎಸ್ ಚಿನಕೇಕರ
Published 5 ಏಪ್ರಿಲ್ 2024, 5:13 IST
Last Updated 5 ಏಪ್ರಿಲ್ 2024, 5:13 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ಸದಲಗಾ ಪಟ್ಟಣದ ಹೊರ ವಲಯದಲ್ಲಿ ರೈತ ಅಪ್ಪಾಸಾಹೇಬ ಕುರಬೆಟ್ಟೆ 3 ಎಕರೆಯಲ್ಲಿ ವಿಭಿನ್ನ ಪ್ರಯೋಗ ಮಾಡಿ ವಾರ್ಷಿಕ ₹12 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಮಾದರಿ ರೈತ ಎಣಿಸಿಕೊಂಡಿದ್ದಾರೆ.

ಕೇವಲ 6ನೇ ತರಗತಿವರೆಗೆ ಓದಿರುವ ಅಪ್ಪಾಸಾಹೇಬ ಅವರು ಕಬ್ಬು, ಕಲ್ಲಂಗಡಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆ ಬೆಳೆಯುವ  ಅವರ ಪ್ರಯೋಗ ಬರಗಾಲದಲ್ಲಿಯೂ ಕೈ ಹಿಡಿದಿದೆ.

ಭೀಕರ ಬರಗಾಲದ ಹಿನ್ನೆಲೆಯಲ್ಲಿ ನೀರಿನ ಕೊರತೆಯ ನಡುವೆ 3 ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಮೂಲಕ 30 ಟನ್ ಕಲ್ಲಂಗಡಿ ಬೆಳೆದು ಖರ್ಚು ತೆಗೆದು ₹3 ಲಕ್ಷಕ್ಕೂ ಹೆಚ್ಚು ಆದಾಯ ಪಡೆದುಕೊಂಡಿದ್ದಾರೆ. ಬರಕ್ಕೆ ಸೆಡ್ಡು ಹೊಡೆದು ಬಾವಿಯಿಂದ ಹನಿ ನೀರಾವರಿ ಮೂಲಕ ಮೂರುವರೆ ತಿಂಗಳಲ್ಲಿ ಕಲ್ಲಂಗಡಿ ಬೆಳೆದು ಸಾಧನೆ ತೋರಿದ್ದಾರೆ.

10 ಎಕರೆ ಜಮೀನು ಹೊಂದಿದ್ದರೂ ಬರದ ಹಿನ್ನೆಲೆಯಲ್ಲಿ ಬಾವಿ ಹಾಗೂ ಕೊಳವೆ ಬಾವಿಯ ಅಂತರ್ಜಲಮಟ್ಟ ತೀವ್ರ ಕುಸಿದಿದೆ. ಹೀಗಾಗಿ ಕೇವಲ 3 ಎಕರೆ ಪ್ರದೇಶದಲ್ಲಿ ಬೇಸಿಗೆ ಬೆಳೆಯನ್ನಾಗಿ ಅಪ್ಪಾಸಾಹೇಬ ಅವರು ಕಲ್ಲಂಗಡಿ ಬೆಳೆದಿದ್ದಾರೆ. ಇನ್ನುಳಿದ 7 ಎಕರೆ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ತರಕಾರಿ, ಜೋಳ, ಕಬ್ಬು, ಮೆಕ್ಕೆಜೋಳ, ಗೋಧಿ ಪಡೆದುಕೊಂಡಿದ್ದಾರೆ. ಇದೀಗ 3 ಎಕರೆ ಪ್ರದೇಶವನ್ನೇ ಪ್ರಯೋಗ ಶಾಲೆ ಮಾಡಿದ್ದಾರೆ.

ನವೆಂಬರ್‌ನಲ್ಲಿ ಕಲ್ಲಂಗಡಿ ನಾಟಿ ಮಾಡಿ ಕಸ ಬೆಳೆಯದಂತೆ 3 ಎಕರೆ ಹೊಲಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಬಾವಿಯ ನೀರನ್ನು ಡ್ರಿಪ್ ಮೂಲಕ ಕೊಟ್ಟಿದ್ದು, ಒಂದೆರಡು ಸಲ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಹೀಗಾಗಿ ಕಲ್ಲಂಗಡಿ ಬೆಳೆಯಲು ಪ್ರತಿ ಎಕರೆಗೆ ₹ 35 ಸಾವಿರ ವೆಚ್ಚ ಮಾಡಿದ್ದಾರೆ. ಮೊದಲನೇ ಕೊಯ್ಲಿನಲ್ಲಿ 20 ಟನ್ ಇಳುವರಿ ಬಂದಿದ್ದು, ಪ್ರತಿ ಟನ್ ಗೆ ₹14,500ರಂತೆ ಮಾರಾಟ ಮಾಡಿದ್ದಾರೆ.

ಕಲ್ಲಂಗಡಿ ಬೆಳೆಯುವುದಕ್ಕೂ ಮೊದಲು ಈ ಜಮೀನಿನಲ್ಲಿ ಕಬ್ಬು ನಾಟಿ ಮಾಡಿದ್ದರು. ಪ್ರತಿ ಎಕರೆಗೆ 70 ಟನ್ ನಷ್ಟು ಕಬ್ಬು ಬೆಳೆದು, ಪ್ರತಿ ಟನ್‌ಗೆ ₹ 3 ಸಾವಿರದಂತೆ ₹ 6.30 ಲಕ್ಷ ಆದಾಯ ಪಡೆದಿದ್ದಾರೆ. ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಸಾಗಾಟ ಮಾಡಿದ ಬಳಿಕವೇ ಭೂಮಿ ಹದ ಮಾಡಿ ಕಲ್ಲಂಗಡಿ ಬೆಳೆದರು.

ಹೀಗೆ ಕಬ್ಬಿನಿಂದ ₹6.90 ಲಕ್ಷ, ಕಲ್ಲಂಗಡಿಯಿಂದ ₹3 ಲಕ್ಷ , ಮೆಣಸಿನ ಕಾಯಿಯಿಂದ ₹2 ಲಕ್ಷ ಸೇರಿದಂತೆ ವರ್ಷಕ್ಕೆ ₹11.90 ಲಕ್ಷ ಲಾಭ ಪಡೆದಿದ್ದಾರೆ.

ಅಪ್ಪಾಸಾಹೇಬ ಕುರಬೆಟ್ಟೆ
ಅಪ್ಪಾಸಾಹೇಬ ಕುರಬೆಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT