ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕರು, ವೈದ್ಯಕೀಯ ಸಿಬ್ಬಂದಿ ಕಾರ್ಯ ಶ್ಲಾಘನೀಯ

ಕೆಎಲ್‌ಇ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
Last Updated 15 ಆಗಸ್ಟ್ 2021, 15:34 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದ ರಕ್ಷಣೆಗೆ ಹಗಲಿರುಳು ಸೈನ್ಯದವರು ಶ್ರಮಿಸುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಯು ಸಮಾಜದ ಪ್ರತಿಯೊಬ್ಬರ ಆರೋಗ್ಯ ಕಾಳಜಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಎರಡೂ ವರ್ಗದವರ ಕಾರ್ಯ ಅತ್ಯಂತ ಶ್ಲಾಘನೀಯ’ ಎಂದು ಮರಾಠಾ ಲಘು ಪದಾತಿದಳದ ಜೂನಿಯರ್‌ ಲೀಡರ್‌ ವಿಂಗ್ ಕಮಾಂಡರ್ ಪರಮದೀಪಸಿಂಗ್ ಬಾಜ್ವಾ ಹೇಳಿದರು.

ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಭಾನುವಾರ ನಡೆದ 75ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಕೋವಿಡ್ ನಮಗೆ ಸವಾಲಾಗಿ ಪರಿಣಮಿಸಿದೆ. ಆದರೆ, ವೈದ್ಯಕೀಯ ಸಿಬ್ಬಂದಿ ಧೃತಿಗೆಡದೆ ಚಿಕಿತ್ಸೆ ನೀಡುವಲ್ಲಿ ನಿರತವಾಗಿದ್ದಾರೆ. ವೈದ್ಯರು ಯಾವುದೇ ವೈರಿಗಳಿಗೂ ಚಿಕಿತ್ಸೆ ನೀಡುತ್ತಾರೆ. ಸೈನ್ಯದವರು ವೈರಿಯನ್ನು ಸೆದೆಬಡಿಯುತ್ತಾರೆ. ಗಡಿಯಲ್ಲಿ ನಾವು ನಮ್ಮ ಕೆಲಸ ಮಾಡಬೇಕಾಗುತ್ತದೆ. ಯಾವುದೇ ರೀತಿಯ ಜೈವಿಕ ಯುದ್ದಕ್ಕೂ ವೈದ್ಯಕೀಯ ಸಿಬ್ಬಂದಿ ಸನ್ನದ್ಧವಾಗಿ ನಿಂತು ಹೋರಾಟ ನಡೆಸಬೇಕಾಗುತ್ತದೆ’ ಎಂದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಮಾತನಾಡಿ, ‘ಅಮೆರಿಕದ ಮಕ್ಕಳಿಗಾಗಿ ಜೀವನ ಹಾಗೂ ಅಸ್ಟ್ರೇಲಿಯಾದ ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟ ಜಂಟಿಯಾಗಿ ಮಧುಮೇಹ ನ್ಯೂನತೆಯುಳ್ಳ ಮಕ್ಕಳನ್ನು ಕೋವಿಡ್‌ನಿಂದ ರಕ್ಷಿಸಲು ಸಹಕಾರಿ ಆಗುವಂತೆ ₹ 16 ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ನೀಡಿವೆ. ಡಾ.ಸುಜಾತಾ ಜಾಲಿ ಹಾಗೂ ಅವರ ತಂಡವು ಮಧುಮೇಹ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿರುವುದನ್ನು ಪರಿಗಣಿಸಿ ಈ ನೆರವು ನೀಡಿವೆ’ ಎಂದು ತಿಳಿಸಿದರು.

‘ಇದರಲ್ಲಿ ₹ 6 ಲಕ್ಷ ಮೌಲ್ಯದ ಸಿಪ್ಯಾಪ್ ಯಂತ್ರವನ್ನು ಚಾರಿಟಬಲ್ ಆಸ್ಪತ್ರೆಯ ಮಕ್ಕಳ ವಾರ್ಡ್‌ಗೆ, 1 ಸಿಪ್ಯಾಪ ಹಾಗೂ 2 ಡ್ಯುರಾ ಸಿಲಿಂಡರ್ (ಪ್ರತಿಯೊಂದಕ್ಕೆ ₹ 6 ಲಕ್ಷ) ಹಾಗೂ ₹ 4 ಲಕ್ಷ ಮೌಲ್ಯದ ಕೋವಿಶೀಲ್ಡ್‌ ಲಸಿಕೆಯನ್ನು ಚಿಕ್ಕೋಡಿ ಆಸ್ಪತ್ರೆಗೆ ನೀಡಲಾಗಿದೆ. ಕೋವಿಡ್ ಮಕ್ಕಳ ಚಿಕಿತ್ಸೆಗಾಗಿ ವೈದ್ಯಕೀಯ ಸಲಕರಣೆಗಳ ಅತ್ಯಾಧುನಿಕ ತೀವ್ರ ನಿಗಾ ಘಟಕ (10) 30 ಹಾಸಿಗೆಗಳ ವಾರ್ಡ್‌ ಅನ್ನು ಮೀಸಲಿರಿಸಲಾಗಿದೆ. 4200 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 125 ಕಪ್ಪು ಶಿಲೀಂದ್ರ ಶಸ್ತ್ರಚಿಕಿತ್ಸೆ, 4ಸಾವಿರ ರೋಗಿಗಳಿಗೆ ಉಚಿತ ಡಯಾಲಿಸಿಸ್ ಮಾಡಲಾಗಿದೆ’ ಎಂದು ವಿವರಿಸಿದರು.

ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ವಿವೇಕ ಸಾವೋಜಿ ಮಾತನಾಡಿದರು.

ಆಸ್ಪತ್ರೆಯು ಹೊರತರುವ ವಿಶೇಷ ಸಂಚಿಕೆ ‘ಲೈಫ್‌ಲೈನ್’, ‘ಮಧುಮೇಹ ವೈದ್ಯ’, ‘ಫೋಕಸ್’ ಬಿಡುಗಡೆಗೊಳಿಸಲಾಯಿತು. ಡಾ.ವಿ.ಡಿ. ಪಾಟೀಲ, ಅಕಾಡೆಮಿಯ ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ಆರ್.ಬಿ. ನೇರ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT