ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಿನ ಮಾಲಿನ್ಯ ತಡೆ: ಇಂದಿನ ಅಗತ್ಯ’-ಡಾ.ಜಯಂತ ಕೆ. ಕಿತ್ತೂರ

Last Updated 22 ಮಾರ್ಚ್ 2021, 13:41 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ರಸಾಯನವಿಜ್ಞಾನ ವಿಭಾಗವು ವಿಟಿಯು ಸಹಯೋಗದಲ್ಲಿ ‘ನೀರು, ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಘನ ತ್ಯಾಜ್ಯ ನಿರ್ವಹಣೆಯಲ್ಲಿ ಉದಯೋನ್ಮುಖ ತಂತ್ರಜ್ಞಾನಗಳು’ ವಿಷಯ ಕುರಿತು ಮೂರು ದಿನಗಳವರೆಗೆ ಅಂತರರಾಷ್ಟ್ರೀಯ ಸಮ್ಮೇಳನ ನಡೆಸಿತು.

ಉದ್ಘಾಟನೆ ವೇಳೆ ಮಾತನಾಡಿದ ಪ್ರಾಂಶುಪಾಲ ಡಾ.ಜಯಂತ ಕೆ. ಕಿತ್ತೂರ, ‘ನೀರಿನ ಮಾಲಿನ್ಯ ತಡೆಯುವುದು ಮತ್ತು ಘನ ತ್ಯಾಜ್ಯದ ಉತ್ಪಾದನೆ ಕಡಿಮೆಗೊಳಿಸುವುದು ಇಂದಿನ ಅಗತ್ಯವಾಗಿದೆ. ಎಲ್ಲರ ಮೇಲೂ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ನಾಲ್ವರು ಆಹ್ವಾನಿತ ವೈಜ್ಞಾನಿಕ ಸಂಶೋಧನಾ ವಿದ್ವಾಂಸರಿಂದ ಚರ್ಚೆಗಳು ನಡೆದವು. 20 ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಪಡಿಸಲಾಯಿತು.

ಆಸ್ಟ್ರೇಲಿಯಾದ ತಂತ್ರಜ್ಞಾನ ವಿಶ್ವವಿದ್ಯಾಲಯದ ಪರಿಸರ ಎಂಜಿನಿಯರಿಂಗ್ ಪ್ರಾಧ್ಯಾಪಕ ಪ್ರೊ.ಎಸ್. ವಿಘ್ನೇಶ್ವರನ್ ‘ನೀರಿನ ಸುರಕ್ಷತೆಯ ಕಡೆಗೆ ಪರ್ಯಾಯ ನೀರಿನ ಮೂಲಗಳು’, ಒಮನ್‌ನ ಪ್ರೊ.ರಂಗರಾಜ್ ಎಸ್. ‘2 ಡಿ ನ್ಯಾನೊ ಸ್ಟ್ರಕ್ಚರ್ಡ್ ಮೆಟೀರಿಯಲ್ಸ್: ಎನ್ವಿರಾನ್ಮೆಂಟಲ್ ರೆಮಿಡಿಯೇಶನ್‌ಗಾಗಿ ದಕ್ಷ ಮತ್ತು ಹಸಿರು ವಸ್ತುಗಳು’, ನಾಗಪುರದ ಡಾ.ಹೇಮಂತ್ ಜೆ. ಪುರೋಹಿತ ‘ತ್ಯಾಜ್ಯ ನಿರ್ವಹಣೆಯಲ್ಲಿ ಸೂಕ್ಷ್ಮಜೀವಿಯ ಸಾಮರ್ಥ್ಯಗಳು’, ಥರ್ಮ್ಯಾಕ್ಸ್ ಗ್ಲೋಬಲ್ ಕಂಪನಿಯ ನಂದನ್ ಪ್ರಭುನೆ ‘ನೀರು ಮತ್ತು ತ್ಯಾಜ್ಯನೀರಿನ ಸಂಸ್ಕರಣೆ-ಸಂಗತಿಗಳು ಮತ್ತು ಅಂಕಿಅಂಶಗಳು’ ಬಗ್ಗೆ ವಿಷಯ ಮಂಡಿಸಿದರು.

ಅಮೆರಿಕದ ಡಾ.ಮಲ್ಲಿಕಾರ್ಜುನ ಎನ್. ನಾಡಗೌಡ, ‘ಕುಡಿಯುವ ನೀರು ಮತ್ತು ಪರಿಸರ ಮ್ಯಾಟ್ರಿಕ್ಸ್‌ನಲ್ಲಿ ಪ್ರತಿ ಫ್ಲೋರಿನೇಟೆಡ್ ಸಂಯುಕ್ತಗಳ ಚಿಕಿತ್ಸೆಗಾಗಿ ನವೀನ ಮತ್ತು ವೆಚ್ಚ-ಪರಿಣಾಮಕಾರಿ ತಂತ್ರಜ್ಞಾನಗಳ ಅಭಿವೃದ್ಧಿ’, ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ ಪ್ರಾಧ್ಯಾಪಕ ಡಾ.ಅಜಯ್ ಕಲಾಮಾದ್ ‘ಜೈವಿಕ ವಿಘಟನೀಯ ಮುನ್ಸಿಪಲ್ ಘನತ್ಯಾಜ್ಯಗಳ ವಿಕೇಂದ್ರೀಕೃತ ಚಿಕಿತ್ಸೆ’ ಕುರಿತು ಮಾತನಾಡಿದರು. ಮುಂಬೈ ಐಐಟಿಯ ಡಾ.ಆನಂದ್ ರಾವ್ ‘ಸಣ್ಣ ಪಟ್ಟಣಗಳಲ್ಲಿನ ಘನತ್ಯಾಜ್ಯ ನಿರ್ವಹಣೆ’ ಉಪನ್ಯಾಸ ನೀಡಿದರು.

ಮಲೇಷ್ಯಾದ ಡಾ.ಯೂನುಸ್ ಶುಕೋರ್ ‘ಮಾಲಿನ್ಯಕಾರಕಗಳನ್ನು ಶೀಘ್ರವಾಗಿ ಪತ್ತೆಹಚ್ಚುವ ಸಾಧನವಾಗಿ ನದಿಯ ನೈಜ-ಸಮಯದ ಜೈವಿಕ ಮೇಲ್ವಿಚಾರಣೆಯ ಸಮೀಪ’ ಕುರಿತು ಭಾಷಣ ಮಾಡಿದರು. ನಂತರ ಡಾ.ಅರುಣ್ ಇಸ್ಲೂರ್, ಡಾ.ಅತುಲ್ ಎನ್. ವೈದ್ಯ, ನಂದನ್ ಪ್ರಭುನೆ ವಿಷಯ ಮಂಡಿಸಿದರು.

45 ಸಂಶೋಧನಾ ಪ್ರಬಂಧಗಳು ಮಂಡನೆಯಾದವು. ಸಂಚಾಲಕ ಡಾ.ಎಸ್.ವಿ. ದಿವೇಕರ ಪರಿಚಯಿಸಿದರು. ಡಾ.ಜೆ.ಎಂ. ಕಾರೇಕರ ಸಂಯೋಜಿಸಿದರು. ಡಾ.ಆರ್.ಎಂ. ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT