ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ವೈದ್ಯಕೀಯ ಸೇವೆ ಹೊರತು ಎಲ್ಲವೂ ಬಂದ್‌!

ಜನತಾ ಕರ್ಫ್ಯೂ ಇಂದು;
Last Updated 21 ಮಾರ್ಚ್ 2020, 14:29 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರೆ ನೀಡಿರುವ ‘ಜನತಾ ಕರ್ಫ್ಯೂ’ಗೆ ವ್ಯಾಪಕ ಬೆಂಬಲ ದೊರೆಯುವ ಸಾಧ್ಯತೆ ಇದೆ.

ಜೀವನಾವಶ್ಯಕ ಸೇವೆಗಳಾದ ಆಸ್ಪತ್ರೆ, ಔಷಧಿ ಮಳಿಗೆಗಳು ಕಾರ್ಯನಿರ್ವಹಿಸಲಿವೆ. ಹಾಲು, ದಿನಪತ್ರಿಕೆ ಪೂರೈಕೆ ಎಂದಿನಂತೆ ಇರಲಿದೆ. ಇವುಗಳನ್ನು ಹೊರತುಪಡಿಸಿದರೆ ಬಸ್‌, ರೈಲ್ವೆ, ಆಟೊ, ಅಂಗಡಿ ಮುಂಗಟ್ಟುಗಳು, ಮಾರುಕಟ್ಟೆ, ಹೋಟೆಲ್‌ಗಳು, ಮದ್ಯದಂಗಡಿ, ಬಾರ್‌, ಕ್ಲಬ್‌, ಪಬ್‌ ಬಂದ್‌ ಆಗಲಿವೆ.

ಭಾನುವಾರವಾಗಿರುವುದರಿಂದ ಸಹಜವಾಗಿ ಸರ್ಕಾರಿ ಕಚೇರಿಗಳು, ಶಾಲಾ– ಕಾಲೇಜು, ಬ್ಯಾಂಕ್‌ ಹಾಗೂ ಇತರ ಖಾಸಗಿ ಕಂಪನಿಗಳ ಕಚೇರಿಗಳು ಬಂದ್‌ ಆಗಿರುತ್ತವೆ. ಜನರ ಸಂಚಾರ ವಿರಳವಾಗಲಿದೆ.

ಮೋದಿ ಕರೆ

ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಜನರೇ ಸ್ವಯಂ ಪ್ರೇರಿತವಾಗಿ ಕರ್ಫ್ಯೂ ಹೇರಿಕೊಳ್ಳಬೇಕು. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮನೆ ಬಿಟ್ಟು ಹೊರಗೆ ಬರಬಾರದು. ವೈದ್ಯಕೀಯ ಸೇವೆ ಸೇರಿದಂತೆ ಇತರ ಅವಶ್ಯಕ ಸೇವೆಗಳನ್ನು ಒದಗಿಸುವವರು ಮಾತ್ರ ಸಂಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಪ್ರಧಾನಿ ಅವರ ಕರೆಗೆ ಓಗೊಟ್ಟಿರುವ ಹಲವು ಸಂಘಟನೆಗಳು, ಕರ್ಫ್ಯೂದಲ್ಲಿ ಭಾಗವಹಿಸುವುದಾಗಿ ಹೇಳಿಕೊಂಡಿದ್ದಾರೆ. ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಹಾಗೂ ಇತರ ಸಾಮಾಜಿಕ ತಾಣಗಳ ಮೂಲಕ ಇತರರಿಗೂ ಪಾಲ್ಗೊಳ್ಳುವಂತೆ ಆಹ್ವಾನ ನೀಡಿವೆ.

ಬಸ್‌ ಬಂದ್‌

‘ಬೆಳಿಗ್ಗೆಯಿಂದಲೇ ಬಸ್‌ಗಳನ್ನು ಓಡಿಸುವುದಿಲ್ಲ. ತೀರ ಅನಿವಾರ್ಯ ಪರಿಸ್ಥಿತಿ ಬಂದರೆ ಅಥವಾ ಜನರಿಂದ ಒತ್ತಡ ಬಂದರೆ ಬಸ್‌ ಸೇವೆ ನೀಡಬಹುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಬೆಳಗಾವಿ ಡಿಪೋ ಮ್ಯಾನೇಜರ್‌ ನಿಖಿಲ್‌ ತಿಳಿಸಿದರು.

‘ಸಿಟಿ ಬಸ್‌ ಹಾಗೂ ದೂರದ ಊರುಗಳಿಗೆ ತೆರಳುವ ಬಸ್‌ಗಳಿಗೂ ಇದು ಅನ್ವಯವಾಗುತ್ತದೆ’ ಎಂದರು.

ನಿರ್ಬಂಧವಿಲ್ಲ: ‘ಜನರೇ ಸ್ವಯಂ ಪ್ರೇರೀತವಾಗಿ ಮಾಡುವಂತಹ ಕರ್ಫ್ಯೂ ಇದಾಗಿದೆ. ಶಾಂತಿ– ಸುವ್ಯವಸ್ಥೆ ಕಾಪಾಡುವ ನಮ್ಮ ಜವಾಬ್ದಾರಿಯನ್ನು ನಾವು ನಿಭಾಯಿಸುತ್ತೇವೆ. ಜನರ ಸಂಚಾರದ ಮೇಲೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಜನರು ಇಷ್ಟಪಟ್ಟರೆ ಸಂಚರಿಸಬಹುದು. ಯಾರಿಗೂ ತೊಂದರೆ ಇಲ್ಲ’ ಎಂದು ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌ ತಿಳಿಸಿದರು.

ಮುಗಿಬಿದ್ದ ಜನ

ಭಾನುವಾರ ಎಲ್ಲ ಅಂಗಡಿ– ಮುಂಗಟ್ಟುಗಳು ಬಂದ್‌ ಆಗುತ್ತವೆ ಎಂದುಕೊಂಡು ಜನರು ಶನಿವಾರ ಮುಗಿಬಿದ್ದು ಖರೀದಿ ನಡೆಸಿದರು. ದಿನಸಿ ಅಂಗಡಿಗಳು ಹಾಗೂ ಪೆಟ್ರೋಲ್‌ ಬಂಕ್‌ಗಳ ಎದುರು ಜನಜಂಗುಳಿ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT