ಭಾನುವಾರ, ಜೂನ್ 13, 2021
23 °C
ಮೂಡಲಗಿ, ಗೋಕಾಕಕ್ಕೆ ಹೋಗುವ ಅನಿವಾರ್ಯತೆ ತಪ್ಪಿದೆ

‘ಜ್ಞಾನದೇಗುಲ’ವಾದ ಕಲ್ಲೋಳಿ ಕಾಲೇಜು 

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ (ಬೆಳಗಾವಿ ಜಿಲ್ಲೆ): ಗುಣಮಟ್ಟದ ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತಿರುವ ಕಲ್ಲೋಳಿಯ ಶ್ರೀರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಗ್ರಾಮೀಣ ಭಾಗದ ‘ಜ್ಞಾನದೇಗುಲ’ವಾಗಿ ಹೊರಹೊಮ್ಮಿದೆ.

ಒಕ್ಕುಲತನ ನಂಬಿರುವ ಆ ಭಾಗದ ಜನರ ಮಕ್ಕಳ ಶಿಕ್ಷಣವು ಕೇವಲ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿತ್ತು. ಪಿಯುಸಿ ಮತ್ತು ಪದವಿಗಾಗಿ ಮೂಡಲಗಿ ಅಥವಾ ಗೋಕಾಕಕ್ಕೆ ಹೋಗಬೇಕಿತ್ತು. ಅದರಲ್ಲೂ ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣ ಕನಸಿನ ಮಾತಾಗಿತ್ತು. ಶ್ರೀರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯವರ ದೂರದೃಷ್ಟಿಯ ಫಲವಾಗಿ 1993ರಲ್ಲಿ ಪದವಿ (ಬಿಎ) ಕಾಲೇಜು ಮತ್ತು 2010ರಲ್ಲಿ ಬಿ.ಕಾಂ. ಆರಂಭಿಸಿ, ಅಲ್ಲಿನ  ವಿದ್ಯಾರ್ಥಿಗಳು ಪದವಿ ಪಡೆಯುವ ಕನಸನ್ನು ನನಸಾಗುತ್ತಿದೆ.

40 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಕಾಲೇಜಿನಲ್ಲಿ ಈ ಸಾಲಿನಲ್ಲಿ 1,209 ದಾಖಲಾತಿ ಇದೆ. ಮೂರು ಬಸ್‌ಗಳ ಸೌಲಭ್ಯ ಕಲ್ಪಿಸಿದ್ದರಿಂದ ಸುತ್ತಲಿನ ಹಳ್ಳಿಗಳು ಮತ್ತು ತೋಟಪಟ್ಟಿಗಳವರು ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇಲ್ಲಿ ಪದವಿ ಪಡೆದ ಅನೇಕರು ಉನ್ನತ ಹುದ್ದೆಗಳಲ್ಲಿದ್ದಾರೆ.

ಸುಸಜ್ಜಿತ ಕ್ಯಾಂಪಸ್

4 ಎಕರೆಯಲ್ಲಿ ಕಟ್ಟಡ ಮೈದಳೆದಿದೆ. ಬೋಧನಾ ಕೊಠಡಿಗಳು, ಕಂಪ್ಯೂಟರ್ ಪ್ರಯೋಗಾಲಯ, 10ಸಾವಿರಕ್ಕೂ ಅಧಿಕ ಪುಸ್ತಕಗಳ ‘ಅಕ್ಷರ ಗ್ರಂಥಾಲಯ’, ಮೈದಾನ, ರಂಗಮಂಟಪದೊಂದಿಗೆ ಕಾಲೇಜು ಕ್ಯಾಂಪಸ್‌ ಗಮನಸೆಳೆಯುತ್ತದೆ. ಕಲ್ಲೋಳಿಯ ಇತಿಹಾಸ ಹೇಳುವ, ಅಲ್ಲಲ್ಲಿ ಅನಾಥವಾಗಿ ಬಿದ್ದಿದ್ದ ಶಾಸನಗಳನ್ನು ಉಪನ್ಯಾಸಕರು ಸಂಗ್ರಹಿಸಿ ಜೋಡಿಸಿಟ್ಟಿದ್ದಾರೆ. ವಿದ್ಯಾರ್ಥಿಗಳಲ್ಲಿ ಪರಂಪರೆಯ ಅರಿವು ಮೂಡಿಸುತ್ತಿದ್ದಾರೆ.

‘19 ಮಂದಿ ಬೋಧಕ ಮತ್ತು 13 ಬೋಧಕೇತರ ಸಿಬ್ಬಂದಿ ಇದ್ದಾರೆ. ಶೈಕ್ಷಣಿಕ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತವೆ. ಹೀಗಾಗಿ ಹಲವಾರು ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆದಿದ್ದಾರೆ. ಅಧ್ಯಕ್ಷ ಬಸಗೌಡ ಅವರು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ, ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದಾರೆ’ ಎಂದು ಆಡಳಿತಾಧಿಕಾರಿ ಡಾ.ಸುರೇಶ ಹನಗಂಡಿ ತಿಳಿಸಿದರು.

ಕ್ರೀಡಾ ಸಾಧನೆ

ಈವರೆಗೆ 17 ವಿದ್ಯಾರ್ಥಿಗಳು ಆರ್‌ಸಿಯು ಬ್ಲೂ ಆಗಿದ್ದಾರೆ. ಹಾಲಪ್ಪ ಹುಣಶ್ಯಾಳ ಕಬಡ್ಡಿ, ರಮೇಶ ಮಳವಾಡ ಕೊಕ್ಕೊ ಮತ್ತು ದುಂಡಪ್ಪ ವಗ್ಗನವರ ಹಾಗೂ ಮಹೇಂದ್ರ ವಗ್ಗನವರ ಚೆಸ್‌ನಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದಾರೆ. 4 ಬಾರಿ ವಿಶ್ವವಿದ್ಯಾಲಯ ಕಬಡ್ಡಿ ಚಾಂಪಿಯಷಿಪ್‌ ಆದ ಹೆಗ್ಗಳಿಕೆ ಕಾಲೇಜಿನದು.

ವಿದ್ಯಾರ್ಥಿಗಳಿಂದ ಜನಪದ ಒಡಪುಗಳನ್ನು ಸಂಗ್ರಹಿಸಿ ‘ಅರಗಿನ ಕೊಡ’ ಪುಸ್ತಕ ಪ್ರಕಟಣೆ, ಗ್ರಾಮಗಳ ವೈಶಿಷ್ಟ್ಯ, ಐತಿಹ್ಯಗಳ ಕುರಿತು ವಿದ್ಯಾರ್ಥಿಗಳಿಂದ ಕ್ಷೇತ್ರ ಕಾರ್ಯ ಮಾಡಿಸಿ ಬರಹಗಳ ಸಂಗ್ರಹ ಮಾಡಿದ್ದಾರೆ. ಎಸ್ಎಸ್ಎಸ್, ರೆಡ್‌ಕ್ರಾಸ್‌ ಘಟಕಗಳು ವೃತ್ತಿ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಆರ್‌ಸಿಯುನಿಂದ ಅತ್ಯುತ್ತಮ ಎನ್ಎಸ್ಎಸ್ ಘಟಕ ಪ್ರಶಸ್ತಿ ಹಾಗೂ ಪ್ರೊ.ಶಂಕರ ನಿಂಗನೂರ ಅವರಿಗೆ ಅತ್ಯುತ್ತಮ ಎನ್ಎಸ್ಎಸ್ ಅಧಿಕಾರಿ ಪ್ರಶಸ್ತಿ ಸಂದಿದೆ.

***

ಉತ್ತಮ ಕಾರ್ಯ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ಕಾಲೇಜುಗಳಿಗೆ ಸರ್ಕಾರವು ಅನುದಾನ ಕೊಡುವುದನ್ನು ಮುಂದುವರಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉತ್ತೇಜಿಸಬೇಕು
-ಬಸಗೌಡ ಪಾಟೀಲ, ಅಧ್ಯಕ್ಷರು, ಎಸ್ಆರ್‌ಇಎಸ್, ಕಲ್ಲೋಳಿ

***

ಗ್ರಾಮೀಣ ಭಾಗದಲ್ಲಿ ಸರ್ಕಾರದ ಅನುದಾನ ಪಡೆಯದೆಯೂ ಪದವಿ ಕಾಲೇಜನ್ನು ವ್ಯವಸ್ಥಿತವಾಗಿ ನಡೆಸಬಹುದು ಎನ್ನುವುದನ್ನು ಕಲ್ಲೊಳಿಯ ರಾಮಲಿಂಗೇಶ್ವರ ಸಂಸ್ಥೆಯು ಸಾಬೀತುಪಡಿಸಿದೆ
-ಬಾಲಚಂದ್ರ ಜಾರಕಿಹೊಳಿ, ಶಾಸಕರು, ಅರಭಾವಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು