ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರ ತತ್ವ ಜಗತ್ತಿಗೆ ತಲುಪಲಿ

ಜಯಂತ್ಯುತ್ಸವದಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆಶಯ
Last Updated 3 ಡಿಸೆಂಬರ್ 2020, 12:17 IST
ಅಕ್ಷರ ಗಾತ್ರ

ಬೆಳಗಾವಿ: ‘ಕನಕದಾಸರು ಜಾತಿ ಮತ ಮೀರಿ ಬೆಳೆದವರು‌. ಸಮಾಜ ಸುಧಾರಣೆಯಲ್ಲಿ ಕನಕ ದಾಸರ ಕೀರ್ತನೆಗಳು ಹಾಗೂ ತತ್ವಗಳು ಇಂದಿಗೂ ಪ್ರಭಾವಶಾಲಿಯಾಗಿವೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಇಲ್ಲಿನ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಆಯೋಜಸಿದ್ದ ಭಕ್ತ ಕನಕದಾಸ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಕನಕದಾಸರನ್ನು ರಾಜ್ಯಕ್ಕೆ ಸೀಮಿತಗೊಳಿಸದೆ ಇಡೀ ಜಗತ್ತಿಗೆ ಅವರ ತತ್ವಗಳು ತಲುಪುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಾಗಿದೆ. ಜಗತ್ತಿನ ಯಾವುದೇ ದೇಶದಲ್ಲಿ ಹಿಂಸೆ ತಲೆ ಎತ್ತಿದಾಗ ಅದನ್ನು ದಮನ ಮಾಡುವ ಕಾರ್ಯ ನಮ್ಮ ದೇಶ ಮಾಡುತ್ತದೆ. ಅಂತಹ ಒಂದು ಹೋರಾಟದ ಗುಣಗಳು ನಮಗೆ ಕನಕದಾಸರ ತರದ ಹಲವಾರು ಮಹಾನ್ ವ್ಯಕ್ತಿಗಳ ವೈಚಾರಿಕತೆಯಿಂದ ನಮಗೆ ಬಂದಿವೆ’ ಎಂದರು.

ಸೀಮಿತಗೊಳಿಸಬಾರದು:

ಉಪನ್ಯಾಸ ನೀಡಿದ ಆರ್‌ಪಿಡಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಪಿ. ಕೋಲಕಾರ, ‘ಯಾವುದೇ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಧರ್ಮ ಹಾಗೂ ಜಾತಿಗೆ ಅಥವಾ ಒಂದು ಸಮಾಜಕ್ಕೆ ಸೀಮಿತಗೊಳಿಸಬಾರದು. ಅವರ ವಿಚಾರಧಾರೆಗಳು ಇಡೀ ಮಾನವಕುಲಕ್ಕೆ ಅವಶ್ಯವಾಗಿರುತ್ತವೆ. ಕನಕದಾಸರ ಶ್ರೇಷ್ಠ ವಿಚಾರಗಳು ಜನರ ಮನಸ್ಸಿನಲ್ಲಿರುವ ಮೇಲು-ಕೀಳು, ಜಾತಿ, ತಾರತಮ್ಯವನ್ನು ದೂರ ಮಾಡಿ ಇಡೀ ಜೀವನದ ಮೌಲ್ಯವನ್ನು ಸಾರುವ ಕೆಲಸವನ್ನು ಕನಕದಾಸರು ಮಾಡಿದ್ದಾರೆ’ ಎಂದು ಸ್ಮರಿಸಿದರು.

‘ವಚನ ಸಾಹಿತ್ಯ ಎಲ್ಲ ಧರ್ಮಗಳು ನಡುವೆ ಸಾಮರಸ್ಯ ಮೂಡಿಸುವ ಕೆಲಸ ಮಾಡಿದರೆ. ಕನಕದಾಸರ ಕೀರ್ತನೆಗಳು ಭಾಷೆ ಸರಳಗೊಳಿಸುವುದರೊಂದಿಗೆ ತಾರತಮ್ಯ ಅಳಿಸುವ ಕೆಲಸ ಮಾಡಿದವು’ ಎಂದರು.

ಕುಮಾರ್ ಬಡಿಗೇರ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಚಿಕ್ಕೋಡಿ ತಾಲ್ಲೂಕಿನ ಕೆರೂರದ ರಾಜು ಮಾಸ್ಟರ್ ತಂಡದವರು ಡೊಳ್ಳಿನ ಪದಗಳನ್ನು ಪ್ರಸ್ತುತಪಡಿಸಿ ರಂಜಿಸಿದರು.

ಡಿಸಿಪಿ ಚಂದ್ರಶೇಖರ್ ನೀಲಗಾರ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಉಪವಿಭಾಗಾಧಿಕಾರಿ ಅಶೋಕ್ ತೇಲಿ, ಮುಖಂಡರಾದ ಕೃಷ್ಣ ಅನಗೋಳಕರ, ಯಲ್ಲಪ್ಪ ಕುರುಬರ, ನಿವೃತ್ತ ಎಸ್ಪಿ ಅಶೋಕ ಸದಲಗೆ, ವೆಂಕಣ್ಣ ಹಿಟ್ಟಣಗಿ ಹಾಗೂ ಸಮಾಜದ ಮುಖಂಡರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಎಚ್. ಭಜಂತ್ರಿ ಸ್ವಾಗತಿಸಿದರು. ನೆಹರೂ ಯುವ ಕೇಂದ್ರದ ನಿವೃತ್ತ ಜಿಲ್ಲಾ ಸಮನ್ವಯಾಧಿಕಾರಿ ಎಸ್.ಯು. ಜಮಾದಾರ ನಿರೂಪಿಸಿದರು.

ಇದಕ್ಕೂ ಮುನ್ನ, ಪ್ರತಿಮೆ ಬುಡಾ‌ ಕಚೇರಿ ಬಳಿಯ ಕನಕದಾಸ ವೃತ್ತದಲ್ಲಿ ಮೆರವಣಿಗೆಗೆ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್ ಪಠಾಣ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT