ಸೋಮವಾರ, ನವೆಂಬರ್ 28, 2022
20 °C
ಬೆಳಗಾವಿ ದಕ್ಷಿಣ ಭಾಗದಲ್ಲಿ ಸಮಾರಂಭಗಳ ಆಯೋಜನೆಗೆ ಕನ್ನಡಿಗರ ಪರದಾಟ

ಅನಾಥವಾದ ಗಡಿ ಕನ್ನಡ ಭವನ

ಇಮಾಮ್‌ ಹುಸೇನ್‌ ಗೂಡುನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದ ದಕ್ಷಿಣ ಭಾಗದಲ್ಲಿರುವ ಕನ್ನಡಿಗರಿಗೆ ನಾಡು, ನುಡಿಗೆ ಪೂರಕವಾದ ಸಭೆ, ಸಮಾರಂಭಗಳ ಆಯೋಜನೆಗೆ ಅನುಕೂಲವಾಗಲೆಂದು ವಡಗಾವಿಯಲ್ಲಿ ಸರ್ಕಾರ ನಿರ್ಮಿಸಿದ್ದ ಗಡಿ ಕನ್ನಡ ಭವನ ಇಂದು ಅನಾಥವಾಗಿದೆ. ಇದಕ್ಕೆ ಶಕ್ತಿ ತುಂಬಲು ಸರ್ಕಾರ ಮನಸ್ಸು ಮಾಡದಿರುವುದು ಕನ್ನಡಿಗರಲ್ಲಿ ಬೇಸರ ಮೂಡಿಸಿದೆ.

ಹಲವು ಗೊಂದಲಗಳ ಮಧ್ಯೆಯೇ ಉದ್ಘಾಟನೆಯಾದ ಈ ಭವನವನ್ನು ಕಳೆದ 3 ವರ್ಷಗಳಿಂದ ಮಹಾನಗರ ಪಾಲಿಕೆ ನಿರ್ವಹಣೆ ಮಾಡುತ್ತಿದೆ. ಆದರೆ, ಇಲ್ಲಿ ಮೂಲಸೌಕರ್ಯವನ್ನೂ ಕಲ್ಪಿಸಿಲ್ಲ. ಹಾಗಾಗಿ ಇಲ್ಲಿನ ಜನ ವಿವಿಧ ಸಮಾರಂಭ ನಡೆಸಲು ಉತ್ತರ ಭಾಗದ ಸಭಾಂಗಣಗಳನ್ನೇ ಹುಡುಕುವಂತಾಗಿದೆ.

₹25 ಲಕ್ಷ ವೆಚ್ಚ: ಇಲ್ಲಿನ ಶಹಾಪುರ, ವಡಗಾವಿ, ಖಾಸಬಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಕನ್ನಡ ಸಂಘಟನೆಗಳೂ ಇವೆ. ಅಲ್ಲಿನ ಹೋರಾಟಗಾರರು, ವಡಗಾವಿಯಲ್ಲೊಂದು ಭವನ ನಿರ್ಮಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಸರ್ಕಾರ, ಗಡಿ ಕನ್ನಡ ಭವನ ನಿರ್ಮಿಸಲು ಮುಂದಾಯಿತು. ಆರಂಭದಲ್ಲಿ ತಾಲ್ಲೂಕಿನ ಯಳ್ಳೂರಿನಲ್ಲಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿತ್ತು. ಅಲ್ಲಿನ ಮರಾಠಿಗರು ಅಡ್ಡಿಪಡಿಸಿದ್ದರಿಂದ ‘ವಡಗಾವಿ’ ಆಯ್ಕೆ ಮಾಡಿತು.

₹25 ಲಕ್ಷ ವೆಚ್ಚದಲ್ಲಿ ಕೈಗೊಂಡ ಈ ಕಾಮಗಾರಿಗೆ 2006ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಉದ್ಘಾಟನೆಗೆ ಮುನ್ನವೇ ಚಾವಣಿ ಕುಸಿಯಿತು. ನಂತರ ಕುಂಟುತ್ತ, ತೆವಳುತ್ತ ಸಾಗಿದ ಕಾಮಗಾರಿ 2015ರಲ್ಲಿ ಪೂರ್ಣಗೊಂಡಿತು. ಆದರೆ, ನಿರ್ಮಾಣವಾಗಿ ಏಳು ವರ್ಷ ಕಳೆದರೂ ಪ್ರಯೋಜನವಾಗಿಲ್ಲ.

‘ಕತ್ತಲಲ್ಲೇ ಭವನ’: ‘ಇಲ್ಲಿ ವಿದ್ಯುತ್‌ ಸೌಕರ್ಯ, ಧ್ವನಿವರ್ಧಕ ವ್ಯವಸ್ಥೆ ಇಲ್ಲ. ಕಲಾ ಮಂದಿರದಲ್ಲಿದ್ದ ಹಳೆಯ ಆಸನಗಳನ್ನೇ ತಂದು ಇರಿಸಲಾಗಿದೆ. ಆದರೆ, ಸರ್ಕಾರ ಇತ್ತ ಗಮನ ಹರಿಸದೆ ಈ ಭವನವನ್ನು ಕತ್ತಲೆಯಲ್ಲೇ ಇರಿಸಿದೆ. ಭದ್ರತಾ ಸಿಬ್ಬಂದಿ ಇಲ್ಲದಿರುವುದರಿಂದ ಕಿಡಿಗೇಡಿಗಳು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ’ ಎಂದು ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಮತ್ತೊಬ್ಬ ಹೋರಾಟಗಾರ ರಮೇಶ ಸೊಂಟಕ್ಕಿ, ‘ಗಡಿ ಕನ್ನಡ ಭವನಕ್ಕೆ ಪಾಲಿಕೆ ನಿರ್ಮಿಸಿದ್ದ ಆವರಣ ಗೋಡೆ ಕುಸಿದಿದೆ. ಸುಸಜ್ಜಿತ ಸೌಕರ್ಯಗಳಿರದ ಕಾರಣ, ಚನ್ನಮ್ಮನ ವೃತ್ತದ ಬಳಿ ಇರುವ ಕನ್ನಡ ಸಾಹಿತ್ಯ ಭವನ, ಶಹಾಪುರದ ಬನಶಂಕರಿ ಮಂದಿರದಲ್ಲಿ ಸಭೆ, ಸಮಾರಂಭ ಆಯೋಜಿಸುತ್ತಿದ್ದೇವೆ’ ಎಂದು ‘ಪ್ರಜಾವಾಣಿ’ ಬಳಿ ಅವಲತ್ತುಕೊಂಡರು.

‘ಕನ್ನಡಿಗರಲ್ಲಿ ಶಕ್ತಿ ತುಂಬಬೇಕಿದ್ದ ಗಡಿ ಕನ್ನಡ ಭವನ ಇದ್ದೂ ಇಲ್ಲದಂತಾಗಿದೆ. ಸರ್ಕಾರ  ಇದನ್ನು ಕ್ರಿಯಾಶೀಲಗೊಳಿಸಿ, ಸರಿಯಾಗಿ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ನಿರ್ವಹಣೆಗಾಗಿ ಸಂಘ–ಸಂಸ್ಥೆಗಳಿಗೆ ಹಸ್ತಾಂತರಿಸಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು