ಮಂಗಳವಾರ, ಮೇ 18, 2021
23 °C
ತೆಗೆಯದಿದ್ದರೆ ಭಗವಾಧ್ವಜ ಹಾರಿಸುವ ಎಚ್ಚರಿಕೆ

ಕನ್ನಡ ಬಾವುಟ ಹಾರಿಸಿದ್ದಕ್ಕೆ ಎಂಇಎಸ್ ತಗಾದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಎದುರು ಕನ್ನಡಪರ ಹೋರಾಟಗಾರರು ಧ್ವಜಸ್ತಂಭ ಸ್ಥಾಪಿಸಿ, ಕನ್ನಡ ಬಾವುಟ ಹಾರಿಸಿರುವುದಕ್ಕೆ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯವರು ವಿರೋಧ ವ್ಯಕ್ತಪಡಿಸಿ, ನಗರ ಪೊಲೀಸ್ ಆಯುಕ್ತರಿಗೆ ಮಂಗಳವಾರ ದೂರು ಸಲ್ಲಿಸಿದರು.

‘ನಗರದ ರೈಲು ನಿಲ್ದಾಣ, ಪ್ರಾದೇಶಿಕ ಆಯುಕ್ತರ ಕಚೇರಿ ಮತ್ತು ನಗರಪಾಲಿಕೆಯ ಎದುರು ಕಾನೂನುಬಾಹಿರವಾಗಿ ಹಳದಿ–ಕೆಂಪು ಬಣ್ಣದ ಧ್ವಜ ಹಾರಿಸಲಾಗಿದೆ. ಪಾಲಿಕೆ ಎದುರು ಆ ಧ್ವಜ ಹಾರಿಸಿದ ಕನ್ನಡ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಹಳದಿ–ಕೆಂಪು ಬಣ್ಣದ ಧ್ವಜಕ್ಕೆ ಮಾನ್ಯತೆ ಸಿಕ್ಕಿಲ್ಲ. ರಾಷ್ಟ್ರ ಧ್ವಜದ ಎದುರು ಈ ಧ್ವಜವನ್ನು ಹಾರಿಸಿ ರಾಷ್ಟ್ರೀಯ ಭಾವೈಕ್ಯಕ್ಕೆ ಧಕ್ಕೆ ತರುವ ಕೆಲಸವನ್ನು ಕನ್ನಡ ಸಂಘಟನೆಗಳು ಮಾಡಿವೆ. ಕನ್ನಡ ಧ್ವಜ ಹಾರಿಸುವಾಗ ರಾಷ್ಟ್ರಗೀತೆಗೂ ಅವಮಾನ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಭಾರತ್‌ ಮಾತಾಕೀ ಜೈ, ಒಂದು ರಾಷ್ಟ್ರ ಒಂದು ಧ್ವಜ’ ಎನ್ನುವ ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ: ಪರಿಷತ್‌ ಉಪಸಭಾಪತಿ ಧರ್ಮೇಗೌಡ ಮೃತದೇಹ ರೈಲ್ವೆ ಹಳಿ ಬಳಿ ಪತ್ತೆ: ಆತ್ಮಹತ್ಯೆ ಶಂಕೆ

ಮನವಿ ಪಡೆಯಲು ಪೊಲೀಸ್ ಆಯುಕ್ತರೆ ಬರಬೇಕು ಎಂದು ಪಟ್ಟು ಹಿಡಿದರು. ಡಿಸಿಪಿ ಚಂದ್ರಶೇಖರ ನೀಲಗಾರ ಹಾಗೂ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದರು.

‘ಆಯುಕ್ತರೇ ಬಂದು ನಮ್ಮ ಅಹವಾಲು ಆಲಿಸಬೇಕು. ಇಲ್ಲವಾದಲ್ಲಿ, ನಾವೂ ಕನ್ನಡಪರ ಸಂಘಟನೆಗಳು ಧ್ವಜಸ್ತಂಭ ಸ್ಥಾಪಿಸಿರುವ ಮಹಾನಗರಪಾಲಿಕೆ ಆವರಣಕ್ಕೇ ಹೋಗುತ್ತೇವೆ’ ಎಂದೂ ಪಟ್ಟು ಹಿಡಿದರು. ‘ಅಕ್ರಮವಾಗಿ ಧ್ವಜಸ್ತಂಭ ಸ್ಥಾಪಿಸಲು ಕನ್ನಡ ಸಂಘಟನೆಗಳಿಗೆ ಅವಕಾಶ ಕೊಡುತ್ತೀರಿ. ಸ್ಥಳದಲ್ಲಿಯೇ ಇದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮಿಂದ ಕನಿಷ್ಠ ಮನವಿ ಸ್ವೀಕರಿಸಲು ಆಗುವುದಿಲ್ಲವೇ?’ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲೆ ಧರಣಿಗಿಳಿಸಿದರು.

ಬಳಿಕ ಅವರನ್ನು ಎಸಿಪಿ ಎನ್.ವಿ. ಭರಮನಿ ಸಮಾಧಾನಪಡಿಸಿದರು. ಅವರ ಸಲಹೆಯಂತೆ, ಐವರು ತೆರಳಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

‘ಪಾಲಿಕೆ ಎದುರಿನ ಕನ್ನಡ ಬಾವುಟವನ್ನು ಡಿ. 31ರವರೆಗೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾವು ಅಲ್ಲಿ ಭಗವಾಧ್ವಜ ಹಾರಿಸಬೇಕಾಗುತ್ತದೆ’ ಎಂದು ಸವಾಲು ಹಾಕಿದರು.

ರಾಷ್ಟ್ರಗೀತೆ ಹಾಡಿ ಅಲ್ಲಿಂದ ತೆರಳಿದರು.

ಅಧ್ಯಕ್ಷ ಶುಭಂ ಶೆಳಕೆ, ಕಾರ್ಯದರ್ಶಿ ಶ್ರೀಕಾಂತ ಕದಂ, ಮುಖಂಡರಾದ ಸರಿತಾ ಪಾಟೀಲ, ಮದನ ಭಾಮನೆ ಇದ್ದರು.

ಪಾಲಿಕೆ ಎದುರು ಕನ್ನಡ ಬಾವುಟ ಹಾರಿಸಿದ್ದನ್ನು ಖಂಡಿಸಿ, ಎಂಇಎಸ್‌ನವರು ಸಾಮಾಜಿಕ ಮಾಧ್ಯಮದಲ್ಲೂ ಟೀಕೆಗಳನ್ನು ಹರಿಬಿಡುತ್ತಿದ್ದಾರೆ.

ಇದನ್ನೂ ಓದಿ:

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು