ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಪೂರ್ಣಾವಧಿ ಅಧಿವೇಶನ ನಡೆಯಲಿ

ಚಿಂಚಣಿ: ಸರ್ಕಾರಕ್ಕೆ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಆಗ್ರಹ
Last Updated 3 ನವೆಂಬರ್ 2022, 6:14 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಲಾಗಿದೆ. ಅಲ್ಲಿ ಪ್ರತಿ ವರ್ಷ ಕನಿಷ್ಠ ಒಂದು ತಿಂಗಳು ಪೂರ್ಣಾವಧಿ ವಿಧಾನ ಮಂಡಲ ಅಧಿವೇಶನ ನಡೆಸುವ ಮೂಲಕ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸರ್ಕಾರ ಕಿವಿಯಾಗಬೇಕು ಮತ್ತು ತ್ವರಿತ ಪರಿಹಾರ ಕಲ್ಪಿಸಬೇಕು’ ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಆಗ್ರಹಿಸಿದರು.

ತಾಲ್ಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದಲ್ಲಿ ಬುಧವಾರ ಗಡಿಕನ್ನಡಿಗರ ಬಳಗದಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಗ್ರಂಥಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಬರುವ ಶಾಸಕರು ಗೋವಾ–ಮಹಾರಾಷ್ಟ್ರ ಸುತ್ತಾಡಿ ‍ಪ್ರವಾಸ ಮಾಡುತ್ತಾರೆ. ಇಲ್ಲಿನ ಸಮಸ್ಯೆಗಳಿಗೆ ಚರ್ಚೆ ಪರಿಪೂರ್ಣವಾಗುವುದಿಲ್ಲ. ಸುವರ್ಣ ಸೌಧಕ್ಕೆ ಸರ್ಕಾರಿ ಕಚೇರಿಗಳು ಸ್ಥಳಾಂತರಗೊಳ್ಳಬೇಕು ಎಂಬುದು ಕೆಲವರ ಬೇಡಿಕೆಯಾಗಿದೆ. ಆದರೆ, ಅದು ಕಚೇರಿಗಳ ಸೌಧವಲ್ಲ. ಉತ್ತರ ಕರ್ನಾಟಕದ ಕೂಗು ಕೇಳುವ ಸ್ಥಳ. ಅಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸಬೇಕು’ ಎಂದರು.

ಪೇಶ್ವಗಳ ಹಾಗೂ ಮರಾಠರ ಆಡಳಿತದಲ್ಲಿ ಕನ್ನಡಕ್ಕೆ ಧಕ್ಕೆ ಉಂಟಾಗಿತ್ತು. ಆ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆ ಇಲ್ಲಿ ಕನ್ನಡ ಶಿಕ್ಷಣದ ಮೂಲಕ ದಿಟ್ಟ ಹೆಜ್ಜೆ ಇಟ್ಟಿತು ಎಂದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ‘ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಪ್ರತಿ ವರ್ಷ ಪೂರ್ಣಾವಧಿ ಅಧಿವೇಶನ ನಡೆಸಬೇಕು’ ಎಂದು ಆಗ್ರಹಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಲನಚಿತ್ರ ಹಿರಿಯ ನಟ ದೊಡ್ಡಣ್ಣ ಮಾತನಾಡಿ, ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಕನ್ನಡ ಸಾಹಿತ್ಯ ಸಂಸ್ಕೃತಿಗೆ ಸುದೀರ್ಘ ಪರಂಪರೆ ಇದೆ. ಮೊಬೈಲ್‌ ಗೀಳನ್ನು ಬಿಟ್ಟು ಕನ್ನಡ ಭಾಷೆ ಸಂಸ್ಕೃತಿಯನ್ನು ಪ್ರೀತಿಸಬೇಕು. ಕನ್ನಡ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.

ಚಿಂಚಣಿ ಮಠಾಧೀಶ ಅಲ್ಲಮಪ್ರಭು ಸ್ವಾಮೀಜಿ ಪ್ರಸ್ತಾವಿಕವಾಗಿ ಮಾತನಾಡಿ, ‘ಪ್ರತಿವರ್ಷವು ಮಠವು ಅತ್ಯಂತ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸುತ್ತ ಬಂದಿದೆ. ಅರ್ಥಪೂರ್ಣವಾದ ಗ್ರಂಥಗಳನ್ನು ಪ್ರಕಟಿಸಿ ಬಿಡುಗಡೆ ಮಾಡುತ್ತ ಬಂದಿದೆ. ಇಲ್ಲಿಯವರೆಗೆ 49 ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದು, ಮಠದ ಹಿರಿಮೆ. ಇದೊಂದು ಕನ್ನಡದ ಹಬ್ಬ. ಕನ್ನಡದ ನಂದಾದೀಪ ಹೀಗೆ ಪ್ರಜ್ವಲಿಸಲಿ’ ಎಂದರು.

ಪ್ರಾಚಾರ್ಯ ಬಿ.ಎಸ್.ಗವಿಮಠ ವಿರಚಿತ ‘ಕನ್ನಡ ರತ್ನ ಪ್ರಭಾಕರ ಕೋರೆ’ ಮತ್ತು ಮರಾಠಿಯಿಂದ ಶಿರೀಷ ಜೋಶಿ ಅವರು ಕನ್ನಡಕ್ಕೆ ಅನುವಾದಿಸಿರುವ ‘ನನ್ನ ಸಂಗೀತ ವ್ಯಾಸಂಗ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಗ್ರಂಥ ದಾಸೋಹಿಗಳಾದ ಜಗದೀಶ ಕವಟಗಿಮಠ ಮತ್ತು ಸಾತಪ್ಪ ಕಾಮನೆ ಅವರನ್ನು ಗೌರವಿಸಲಾಯಿತು. ಚಿಕ್ಕೋಡಿಯ ಸಂಪಾದನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಅಪ್ಪಾಜಿಗೋಳ, ಮುಖಂಡರಾದ ಸುರೇಶ ಪಾಟೀಲ, ಅಣ್ಣಾಗೌಡ ಪಾಟೀಲ, ಕುಮಾರ ಪಾಟೀಲ, ಮಹಾದೇವ ಬರಗಾಲೆ, ಮಲ್ಲಪ್ಪ ಮೈಶಾಳೆ, ಡಾ.ಪಿ.ಜಿ.ಕೆಂಪಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT