ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸಂತ್ರಸ್ತರಿಗೆ 15 ದಿನಗಳಲ್ಲಿ ಹಕ್ಕುಪತ್ರ

ಚಿಕ್ಕೋಡಿಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೂಚನೆ
Last Updated 7 ಆಗಸ್ಟ್ 2021, 13:26 IST
ಅಕ್ಷರ ಗಾತ್ರ

ಬೆಳಗಾವಿ: ‘ಆಲಮಟ್ಟಿ ಹಾಗೂ ಹಿಪ್ಪರಗಿ ಬ್ಯಾರೇಜ್ ಹಿನ್ನೀರಿನಿಂದ ಮುಳುಗಡೆಯಾಗುವ ಅಥಣಿ ತಾಲ್ಲೂಕಿನ ಜನವಾಡ, ಮಹಿಷವಾಡಗಿ, ನಂದೇಶ್ವರ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಮನೆಗಳ ಸಂಖ್ಯೆಯ ಆಧಾರದ ಮೇಲೆ ಪಂಚಾಯ್ತಿ ಆಸ್ತಿ ರಿಜಿಸ್ಟರ್ ಮತ್ತು ಮುಳುಗಡೆ ಸಮೀಕ್ಷೆ ಆಧರಿಸಿ 15 ದಿನಗಳಲ್ಲಿ ಹಕ್ಕುಪತ್ರಗಳನ್ನು ವಿತರಿಸಬೇಕು’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕೋಡಿಯ ಪ್ರವಾಸಿಮಂದಿರದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ನೀಡಲಾದ ಸ್ಥಳಗಳಿಗೆ ಸ್ಥಳಾಂತರಗೊಳಿಸಲು ಕಟ್ಟುನಿಟ್ಟಾಗಿ ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ಪುನರ್ವಸತಿ ಕೇಂದ್ರಗಳನ್ನು ಗುರುತಿಸಿ: ‘ಹಕ್ಕುಪತ್ರಗಳನ್ನು ನೀಡುವ ಜೊತೆಗೆ ಪುನರ್ವಸತಿ ಕೇಂದ್ರಗಳಲ್ಲಿ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಪದೇ ಪದೇ ಪ್ರವಾಹ ಪರಿಸ್ಥಿತಿ ಎದುರಾಗುವುದರಿಂದ ಕೂಡಲೇ ಹಕ್ಕುಗಳನ್ನು ವಿತರಿಸಿ ಜನರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಆಲಮಟ್ಟಿ ಜಲಾಶಯದ ಎತ್ತರ 524 ಮೀಟರ್ ಗಮನದಲ್ಲಿಟ್ಟುಕೊಂಡು ಪುನರ್ವಸತಿ ಕೇಂದ್ರಗಳನ್ನು ಗುರುತಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಪ್ರವಾಹ ಕಡಿಮೆಯಾದ ಬಳಿಕ ಜಮೀನುಗಳಿಗೆ ತೆರಳಿ ಬೆಳೆ ಹಾನಿಯನ್ನು ಸಮರ್ಪಕವಾಗಿ ಸಮೀಕ್ಷೆ ಕೈಗೊಳ್ಳಬೇಕು. ಹಾನಿಗೊಳಗಾದ ಯಾವುದೇ ಜಮೀನು ಸಮೀಕ್ಷೆಯಿಂದ ಹೊರಗುಳಿಯಬಾರದು. ಹಾನಿ ಅನುಭವಿಸಿದ ಎಲ್ಲ ರೈತರಿಗೂ ಪರಿಹಾರ ಸಿಗಬೇಕು. ಸಮೀಕ್ಷೆಯಲ್ಲಿ ಲೋಪದೋಷ ಮಾಡಿದರೆ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಅಮಾನತುಗೊಳಿಸಬೇಕು’ ಎಂದು ತಾಕೀತು ಮಾಡಿದರು.

‘ಮನೆ ಹಾನಿ ಸಮೀಕ್ಷೆ ವೇಳೆ ಎಚ್ಚರ ವಹಿಸಬೇಕು. ಕಡ್ಡಾಯವಾಗಿ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ಮಾಡಬೇಕು. ಅನರ್ಹರನ್ನು ಪಟ್ಟಿಯಲ್ಲಿ ಸೇರಿಸಿದರೆ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಸೂಚಿಸಿದರು.

ಮಂಜೂರಾತಿಗೆ ಕ್ರಮ:‘ಕಲ್ಲೋಳ‌ ಬ್ಯಾರೇಜ್ ನಿರ್ಮಾಣಕ್ಕೆ ₹ 35 ಕೋಟಿ ವೆಚ್ವದ ಯೋಜನೆಗೆ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಚಿಕ್ಕೋಡಿ ಉಪ ವಿಭಾಗದ 5 ತಾಲ್ಲೂಕುಗಳಲ್ಲಿ 19 ಲಕ್ಷ ಗುರಿಯ ಪೈಕಿ 8.26 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಶೇ.42.83 ಗುರಿ ಸಾಧಿಸಲಾಗಿದೆ. 2ನೇ ಡೋಸ್‌ ನೀಡಲೂ ಆದ್ಯತೆ ಕೊಡಬೇಕು’ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆಶೋಕ ದುಡಗುಂಟಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್ ಇದ್ದರು.

ಬಳಿಕ ಸಚಿವರು ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಹಾಗೂ ಅಥಣಿ ತಾಲ್ಲೂಕುಗಳಲ್ಲಿ ಉಂಟಾಗಿರುವ ಹಾನಿಯನ್ನು ಪರಿಶೀಲಿಸಿದರು.

ಪರಿಹಾರಕ್ಕೆ ರಾಜೀವ, ಕವಟಗಿಮಠ ಒತ್ತಾಯ

ಶಾಸಕ‌ ಪಿ.ರಾಜೀವ, ‘ಖೇಮಲಾಪುರ ಮತ್ತು ಸಿದ್ಧಾಪುರ ಗ್ರಾಮಗಳ ಪುನರ್ವಸತಿಗೆ ಜಮೀನು ಗುರುತಿಸಬೇಕು. ಅನಧಿಕೃತವಾಗಿ ವಾಸಿಸುವ ಕುಟುಂಬಗಳು ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿದ್ದರೆ ಅವರಿಗೂ ಪರಿಹಾರ ಒದಗಿಸಬೇಕು. ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

‘ಕೆಲವು ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಕಂಡುಬಂದಿದ್ದು, ಕೂಡಲೇ ಪೂರೈಸಬೇಕು. ಆಮ್ಲಜನಕ ಘಟಕ ಸ್ಥಾಪನೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇತ್ತ ಗಮನಹರಿಸಬೇಕು. ಪ್ರವಾಹದ ಸಂಕಷ್ಟಕ್ಕೆ ಸಿಲುಕಿರುವ ಭೂರಹಿತ‌ ಕುಟುಂಬಗಳಿಗೆ ವಸತಿ ಒದಗಿಸಲು ಬಡಾವಣೆಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಕೋರಿದರು.

ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ‘ಮುಳುಗಡೆ ಸಂತ್ರಸ್ತರಿಗೆ ಕೂಡಲೇ ಹಕ್ಕುಗಳನ್ನು ವಿತರಿಸಬೇಕು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು. ಗ್ರಾಮಸಭೆಗಳನ್ನು ನಡೆಸಿ ಜನರ ಬೇಡಿಕೆಗೆ ಅನುಗುಣವಾಗಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಪ್ರತಿ ವರ್ಷ ಮುಳುಗಡೆಯಾಗುವ ರಸ್ತೆಗಳ ಎತ್ತರ ಹೆಚ್ಚಿಸುವುದು ಹಾಗೂ ಪರ್ಯಾಯ ಮಾರ್ಗಗಳ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಈ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದರು.

ಮನೆ ಹಾಗೂ ಬೆಳೆ ಹಾನಿ ಸಮೀಕ್ಷೆ ಸಮರ್ಪಕವಾಗಿ ನಡೆಸಬೇಕು. ‌ಜನರ ಸಂಕಷ್ಟ ಅರಿತು ಅವರಿಗೆ ಸರ್ಕಾರದ ಎಲ್ಲ ನೆರವು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು.

– ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT