ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಮಂತ್ರಿ ಸ್ಥಾನ ಕೊಟ್ಟು, CM ಸ್ಥಾನವೂ ಬೇಕಾ? ಶಾಮನೂರು ವಿರುದ್ಧ ವಿಶ್ವನಾಥ್ ಗರಂ

Published 1 ಅಕ್ಟೋಬರ್ 2023, 10:33 IST
Last Updated 1 ಅಕ್ಟೋಬರ್ 2023, 10:33 IST
ಅಕ್ಷರ ಗಾತ್ರ

ಬೆಳಗಾವಿ: ‘ಜಾತ್ಯತೀತವಾದ ಕಾಂಗ್ರೆಸ್‌ ಪಕ್ಷದ ಪ್ರತಿನಿಧಿಯಾದ ಶಾಮನೂರು ಶಿವಶಂಕರಪ್ಪ ಅವರು ಜಾತಿಯ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿರುವುದನ್ನು ಖಂಡಿಸುತ್ತೇನೆ. ನಿಮಗೆ ಕಾಂಗ್ರೆಸ್‌ನಲ್ಲಿ ಅವಕಾಶ ಸಿಕ್ಕಿವೆ. ಏಳು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಇನ್ನೆಷ್ಟು ಸ್ಥಾನ ಬೇಕಿತ್ತು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಪ್ರಶ್ನಿಸಿದರು.

‘ರಾಜ್ಯ ಸರ್ಕಾರದಲ್ಲಿ ಲಿಂಗಾಯತ ನಾಯಕರನ್ನು ಕಡೆಗಣಿಸಲಾಗಿದೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಗೆ, ಇಲ್ಲಿ ಭಾನುವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ನಮ್ಮಲ್ಲಿ ಜಾತಿ ಆಧರಿಸಿ ಯಾರಿಗೂ ಹುದ್ದೆ ಕೊಡುವುದಿಲ್ಲ. ಬೇರೆ ಬೇರೆ ಜಾತಿಯವರಿಗೆ ಎಲ್ಲೆಲ್ಲಿ ಅವಕಾಶ ಮಾಡಿಕೊಡಬೇಕೋ, ಅಲ್ಲಿ ಮಾಡಿಕೊಟ್ಟಿದ್ದೇವೆ. ಲಿಂಗಾಯತರಿಗೆ ಏಳು ಮಂತ್ರಿ ಸ್ಥಾನ ಕೊಟ್ಟಿದ್ದೇವೆ. ಇನ್ನೆಷ್ಟು ಸ್ಥಾನ ಕೊಡಬೇಕು ನಿಮಗೆ’ ಎಂದು ತಿರುಗೇಟು ನೀಡಿದರು.

‘ನಿಮಗೆ ಮುಖ್ಯಮಂತ್ರಿ ಸ್ಥಾನ ಬೇಕಿದ್ದರೆ ನಾಯಕತ್ವ ವಹಿಸಿಕೊಳ್ಳಿ. ನಿಮ್ಮ ಸಮುದಾಯದವರಿಂದ ಹೆಚ್ಚಿನ ಮತ ಹಾಕಿಸಿ. ನಂತರ ಗೆದ್ದು ಬಂದು ಮುಖ್ಯಮಂತ್ರಿಯಾಗಿ. ಈ ವಿಚಾರದಲ್ಲಿ ನಿಮ್ಮ ಆಸಕ್ತಿ ತೋರಿಸಿ’ ಎಂದ ವಿಶ್ವನಾಥ್, ‘ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಸಮುದಾಯದಿಂದ ಎಷ್ಟು ಮತ ಹಾಕಿಸಿದ್ದೀರಾ?’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಅವರಿಂದಲೇ ನೀವೆಲ್ಲ ಗೆದ್ದಿದ್ದೀರಿ. ನಾನು ಬಹಳ ಖಾರವಾಗಿ ಹೇಳಬೇಕಾಗುತ್ತದೆ. ಹಾಗಾಗಿ ಅನಾವಶ್ಯಕವಾಗಿ ಮಾತನಾಡಬೇಡಿ’ ಎಂದರು.

‘ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ ನಮ್ಮ ಪಕ್ಷ ಗೆಲ್ಲಿಸಿದ್ದಾರೆ. ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯದವರು ಆಶೀರ್ವದಿಸಿದ್ದಾರೆ‌. ಜಾತಿಯ ಆಧಾರದ ಮೇಲೆ ಅಧಿಕಾರ ನೀಡಲಾಗುತ್ತಿದ್ದರೆ, ಸರಿ ಮಾಡಲು ಹೇಳಿ‌. ಸಿದ್ದರಾಮಯ್ಯ ಅವರಿಗೆ ಬಹಳ ಹತ್ತಿರವಿದ್ದವರು ನೀವು. ಈ ವಿಷಯವನ್ನೇಕೆ ಬೀದಿಗೆ ಬಂದು ದೊಡ್ಡ ರಂಪಾಟ ಮಾಡುತ್ತಿದ್ದೀರಾ? ಅಧಿಕಾರಶಾಹಿ ಆಡಳಿತವನ್ನು ಬೀದಿಗೆ ತಂದು ಮಾತನಾಡುತ್ತಿದ್ದೀರಾ?’ ಎಂದು ಪ್ರಶ್ನಿಸಿದರು.

‘ಈ ರೀತಿಯಾಗಿ ಜಾತಿಯ ವಿಷಯ ಮಾತನಾಡಿದರೆ ಆಡಳಿತ ಕುಸಿಯುತ್ತದೆ. ನಿಮಗೆ ಜವಾಬ್ದಾರಿ ಇಲ್ಲವೇ? ಜವಾಬ್ದಾರಿಯಿಂದ ಮಾತನಾಡಿ. ನೀವೇ ಹೀಗೆ ಮಾತನಾಡಿದರೆ, ಸಣ್ಣ–ಪುಟ್ಟ ಜಾತಿಗಳ ಭವಿಷ್ಯವೇನು? ಅದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT