ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ನಾಡಿನಲ್ಲಿ ಸಂಭ್ರಮದ ರಾಜ್ಯೋತ್ಸವ

ನಾಡು–ನುಡಿ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ: ಕಾರಜೋಳ
Last Updated 1 ನವೆಂಬರ್ 2021, 12:05 IST
ಅಕ್ಷರ ಗಾತ್ರ

ಬೆಳಗಾವಿ: ಗಡಿ ನಾಡಾದ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ 66ನೇ ಕರ್ನಾಟಕ ರಾಜ್ಯೋತ್ಸವವನ್ನು ಕೋವಿಡ್–19 ಹಿನ್ನೆಲೆಯಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ಸೋಮವಾರ ಆಚರಿಸಲಾಯಿತು.

ಚಲನಚಿತ್ರ ನಟ ಪುನೀತ್‌ ರಾಜ್‌ಕುಮಾರ್ ನಿಧನದ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ಅದ್ಧೂರಿ ಮೆರವಣಿಗೆ ಹಮ್ಮಿಕೊಳ್ಳಲಿಲ್ಲ. ಆದರೆ, ಸಡಗರ–ಸಂಭ್ರಮಕ್ಕೆ ಕೊರತೆ ಇರಲಿಲ್ಲ. ರಾಣಿ ಚನ್ನಮ್ಮ ವೃತ್ತದಲ್ಲಿ ನೂರಾರು ಮಂದಿ ಕನ್ನಡಾಭಿಮಾನಿಗಳು ಬೆಳಿಗ್ಗೆಯಿಂದ ಸಂಜೆವರೆಗೂ ನೆರೆದಿದ್ದರು. ಕನ್ನಡ ಬಾವುಟಗಳು ರಾಜಾಜಿಸಿದವು. ಕನ್ನಡಪರ ಘೋಷಣೆ ಹಾಗೂ ಕನ್ನಡದ ಹಾಡುಗಳು ಮೊಳಗಿದವು. ಯುವಕರು ಕುಣಿದು ಕು‍ಪ್ಪಳಿಸಿ ಸಂಭ್ರಮಿಸಿದರು. ಕರವೇ ಮೊದಲಾದ ಸಂಘಟನೆಗಳ ಕಾರ್ಯಕರ್ತರು ಹಾಗೂ ಯುವಕರು ಕನ್ನಡ ಬಾವುಟಗಳೊಂದಿಗೆ ನಗರದಾದ್ಯಂತ ದ್ವಿಚಕ್ರವಾಹನಗಳಲ್ಲಿ ಸಂಚರಿಸುತ್ತಾ ಅಭಿಮಾನ ಪ್ರದರ್ಶಿಸಿದರು.

ಬೆಳಗಾವಿಯಲ್ಲಿ ಕರ್ನಾಟಕರಾಜ್ಯೋತ್ಸವಅಂಗವಾಗಿ ಯುವಕರು ಕನ್ನಡ ಬಾವುಟಗಳನ್ನು ಪ್ರದರ್ಶಿಸುತ್ತಾ ದ್ವಿಚಕ್ರವಾಹನಗಳಲ್ಲಿ ಸೋಮವಾರ ಸಂಚರಿಸಿದರು

ಬೆಳಗಾವಿಯಲ್ಲಿ ಕರ್ನಾಟಕರಾಜ್ಯೋತ್ಸವಅಂಗವಾಗಿ ಯುವಕರು ಕನ್ನಡ ಬಾವುಟಗಳನ್ನು ಪ್ರದರ್ಶಿಸುತ್ತಾ ದ್ವಿಚಕ್ರವಾಹನಗಳಲ್ಲಿ ಸೋಮವಾರ ಸಂಚರಿಸಿದರು

ಜಿಲ್ಲಾಡಳಿತದಿಂದ ನಗರದ ಸಿಪಿಇಡಿ ಕಾಲೇಜು ಮೈದಾನದಲ್ಲಿ ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರೂ ಅಗಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ತಾಯಿ ಭುವನೇಶ್ವರಿ ದೇವಿ ಮೂರ್ತಿಗೆ ಪೂಜೆ ಸಲ್ಲಿಸಿ ಕವಾಯತು ತಂಡಗಳಿಂದ ಗೌರವವಂದನೆ ಸ್ವೀಕರಿಸಿದರು.

ಪ್ರಗತಿಪರವಾಗಿ

ನಂತರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಸರ್ಕಾರವು ಕೋವಿಡ್ ನಂತರ ಎದುರಾಗಿರುವ ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳ ಮಧ್ಯೆಯೂ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಪ್ರವಾಹ ಸಂತ್ರಸ್ತರು, ರೈತರು, ಕೂಲಿಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರಿಗೆ ಸುಂದರ ಬದುಕು ಕಟ್ಟಿಕೊಡುವ ದೃಢಸಂಕಲ್ಪ ಮಾಡಿದೆ’ ಎಂದು ಹೇಳಿದರು.

‘ಅಖಂಡ ಕರ್ನಾಟಕದ ನಿರ್ಮಾಣದ ಕನಸು ನನಸು ಮಾಡಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈಜೋಡಿಸೋಣ. ಕನ್ನಡ ನಾಡು–ನುಡಿ, ನೆಲ–ಜಲ ಸಂರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿರುತ್ತದೆ’ ಎಂದರು.

ಬೆಳಗಾವಿಯ ಸಿಪಿಇಡಿ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಯಿತು

ಬೆಳಗಾವಿಯ ಸಿಪಿಇಡಿ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಯಿತು

ಸಂಸದೆ ಮಂಗಲಾ ಅಂಗಡಿ, ಶಾಸಕರಾದ‌ ಅನಿಲ ಬೆನಕೆ, ಅಭಯ ಪಾಟೀಲ, ‘ಬುಡಾ‌’ ಅಧ್ಯಕ್ಷ ಸಂಜಯ ಬೆಳಗಾಂವಕರ, ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಉತ್ತರ ವಲಯ ಐಜಿಪಿ ಎನ್. ಸತೀಶಕುಮಾರ್, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಭಾಗವಹಿಸಿದ್ದರು.

ಕೋವಿಡ್ ಕಾರಣದಿಂದಾಗಿ, ಮಕ್ಕಳಿಂದ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿಲ್ಲ.

ಜಿಲ್ಲಾಡಳಿತದಿಂದ ಸನ್ಮಾನ

ಕನ್ನಡ ನಾಡು-ನುಡಿಗಾಗಿ ಶ್ರಮಿಸುತ್ತಿರುವ ಕನ್ನಡ ಹೋರಾಟಗಾರರು, ಪತ್ರಕರ್ತರನ್ನು ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಕನ್ನಡ ಹೋರಾಟಗಾರರಾದ ರಮೇಶ ಸೊಂಟಕ್ಕಿ, ಪದ್ಮರಾಜ ವೈಜನ್ನವರ, ತಿಪ್ಪೇಸ್ವಾಮಿ, ಗಣೇಶ ರೋಖಡೆ, ಬಾಳು ಉದಗಟ್ಟಿ ಹಾಗೂ ಶಿವನಗೌಡ ಪಾಟೀಲ, ಪತ್ರಕರ್ತರಾದ ಶ್ರೀಶೈಲ ಮಠದ, ಶ್ರೀಕಾಂತ ಕುಬಕಡ್ಡಿ, ಕುಂತಿನಾಥ ಕಲಮನಿ, ರಾಜಶೇಖರ ಪಾಟೀಲ, ವಿಲಾಸ ಜೋಶಿ, ಸುನೀತಾ ದೇಸಾಯಿ ಹಾಗೂ ಮಹಾಂತೇಶ ಗದ್ದಿಹಳ್ಳಿಶೆಟ್ಟಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಗೌರವಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಯಾದವೇಂದ್ರ ಪೂಜಾರಿ (ಸಂಗೀತ), ಹೊಳೆಪ್ಪ ನೇಸರಗಿ (ಶೌರ್ಯ), ಬ್ರಹ್ಮಾನಂದ ಬಸರಗಿ (ಚಿತ್ರಕಲೆ), ಫಿರೋಜ್ ಗುಲಾಬ್ ಚಾಹುಸ್ (ಪರಿಸರ), ಮಲಪ್ರಭಾ ಜಾಧವ (ಕ್ರೀಡೆ), ಚನ್ನಬಸಯ್ಯ ಕಠಾಪುರಿಮಠ (ಸಮಾಜ ಸೇವೆ), ಡಾ.ರಾಮಕೃಷ್ಣ ಮರಾಠೆ (ಸಾಹಿತ್ಯ), ಶಿವಲಿಂಗ ಕರವಿನಕೊಪ್ಪ (ಬಯಲಾಟ), ಆಶಾ ಕಡಪಟ್ಟಿ (ಸಾಹಿತಿ), ಸುನೀಲ ನೇಗಿನಹಾಳ (ಸಮಾಜ ಸೇವೆ), ಕಿರಣ ಮಾಳನ್ನವರ (ಸಾಮಾಜಿಕ ಜಾಲತಾಣ) ಹಾಗೂ ನಾಗರಾಜ ಮುರಗೋಡ (ಸಾಹಿತ್ಯ) ಅವರನ್ನು ಸನ್ಮಾನಿಸಲಾಯಿತು.

ಮುನ್ನಡೆಸೋಣ

ನಾವೆಲ್ಲರೂ ಒಂದಾಗಿ ಕನ್ನಡದ ತೇರನ್ನು ಮುನ್ನಡೆಸೋಣ, ಕರ್ನಾಟಕವನ್ನು ಪ್ರಗತಿಯ ಪಥದಲ್ಲಿ ಸಾಗಿಸೋಣ.

–ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT