ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಜನಪ್ರತಿನಿಧಿಗಳು
Last Updated 27 ಜನವರಿ 2021, 12:02 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ2020-21ನೇ ಸಾಲಿನ 3ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕರು, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ವಿವಿಧ ಯೋಜನೆಗಳು ಕುಂಟುತ್ತಿರುವುದಕ್ಕೆ ತರಾಟೆಗೆ ತೆಗೆದುಕೊಂಡರು. ಈಗಾಗಲೇ ಚಾಲನೆ ನೀಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜನಪ್ರತಿನಿಧಿಗಳು ತಾಕೀತು ಮಾಡಿದರು.

‘ಕೋವಿಡ್ ಇದ್ದಿದ್ದರಿಂದ ಬೇರೆ ವಿಷಯದ ಬಗ್ಗೆ ಗಮನ ಕೊಡಲಾಗಿರಲಿಲ್ಲ. ಇನ್ಮುಂದೆ, ಎಲ್ಲ ಯೋಜನೆಗಳ ಪ್ರಗತಿಯನ್ನೂ ಕಾಲಕಾಲಕ್ಕೆ ಪರಿಶೀಲಿಸಲಾಗುವುದು. ಜಿಲ್ಲೆಯಾದ್ಯಂತ ವಿಶೇಷವಾಗಿ ಚಿಕ್ಕೋಡಿ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ನದಿ ತೀರದ ಗ್ರಾಮಗಳಲ್ಲಿ ನೆರೆಯಿಂದ ಹಾನಿಗೊಳಗಾದ ರಸ್ತೆ ಮತ್ತಿತರ ಮೂಲಸೌಕರ್ಯಗಳ ದುರಸ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು’ ಎಂದು ಸಚಿವರು ಸೂಚಿಸಿದರು.

ಕೊರತೆ ಆಗದಂತೆ ನೋಡಿಕೊಳ್ಳಿ:

‘ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಮರ್ಪಕವಾಗಿ ಕೈಗೊಂಡು ನೋಂದಾಯಿತ ಎಲ್ಲರಿಗೂ ಲಸಿಕೆ ನೀಡಬೇಕು. ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಗೊಬ್ಬರ ವಿತರಣೆಗೆ ಕೆಲವು ದೂರುಗಳು ಬಂದಿವೆ. ಈ ಬಗ್ಗೆ ಎಚ್ಚರ ವಹಿಸಬೇಕು. ರಾಮದುರ್ಗದಲ್ಲಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಕಾರ್ಯಕ್ಕೆ ಒತ್ತು ಕೊಡಬೇಕು’ ಎಂದು ತಾಕೀತು ಮಾಡಿದರು.

‘ಯರಗಟ್ಟಿಯಿಂದ ಗೋಕಾಕ ಸಂಪರ್ಕಿಸುವುದು ಸೇರಿದಂತೆ ಅನೇಕ ರಸ್ತೆಗಳು ಹದಗೆಟ್ಟಿರುವುದರಿಂದ ಸಂಚಾರಕ್ಕೆ ತೀವ್ರ ಅನಾನುಕೂಲವಾಗುತ್ತಿದೆ. ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಕೆ–ಶಿಪ್ ಅಧಿಕಾರಿಗಳು ಕೆಡಿಪಿ ಸಭೆಗೆ ಬರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು’ ಎಂದು ತಿಳಿಸಿದರು.

ಪ್ರತ್ಯೇಕ ಸಭೆ:

ಶಾಸಕರಿಂದ ಹಲವು ದೂರುಗಳು ಬಂದಿದ್ದರಿಂದ, ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಲಾಗುವುದು’ ಎಂದು ಸಚಿವರು ಹೇಳಿದರು.

‘ರಸ್ತೆಗಳ ನಿರ್ವಹಣೆಗಗೆ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ತೋರುವುದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಸರ್ಕಾರಿ ಆಸ್ತಿ ಅತಿಕ್ರಮಣವೂ ಆಗುತ್ತಿದೆ. ಈ ಬಗ್ಗೆ ನಿಗಾ ವಹಿಸಬೇಕು’ ಎಂದು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೂಚಿಸಿದರು.

‘ನೆರೆಯ ಧಾರವಾಡ ಜಿಲ್ಲೆಗೆ ಹೋಲಿಸಿದರೆ ಬೆಳೆ ಪರಿಹಾರ ವ್ಯತ್ಯಾಸ ಸರಿಪಡಿಸುವಂತೆ ಪ್ರತಿ ಸಭೆಯಲ್ಲೂ ಪ್ರಸ್ತಾಪಿಸುತ್ತಿದ್ದೇನೆ. ಆದರೆ, ಈ ಬಗ್ಗೆ ಸೂಕ್ತ ಕ್ರಮವಾಗುತ್ತಿಲ್ಲ. ಅಧಿಕಾರಿಗಳ ನಡುವೆ ಸಮನ್ವಯವಿಲ್ಲದೆ ಇರುವುದು ಇದಕ್ಕೆ ಕಾರಣವಾಗಿದೆ. ಹಣ ಬಿಡುಗಡೆ ಆಗಿದ್ದರೂ ಹಲವು ಕಾಮಗಾರಿಗಳು ಆರಂಭವಾಗಿಯೇ ಇಲ್ಲ’ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ದೂರಿದರು.

‘ಪ್ರವಾಹ, ಅತಿವೃಷ್ಟಿಯಿಂದ ಹಾನಿಗೊಳಗಾದ ಮೂಲಸೌಕರ್ಯಗಳ ದುರಸ್ತಿ ಸೇರಿದಂತೆ ಅನೇಕ ಕಾಮಗಾರಿಗಳು ಆರಂಭಗೊಂಡಿಲ್ಲ’ ಎಂದು ಸಚಿವರ ಗಮನಸೆಳೆದರು.

ಶಾಸಕ ಮಹಾದೇವಪ್ಪ ಯಾದವಾಡ, ಗಣೇಶ ಹುಕ್ಕೇರಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪೊಲೀಸ್ ಆಯುಕ್ತ ಡಾ.ಕೆ‌. ತ್ಯಾಗರಾಜನ್, ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್, ಎಸ್ಪಿ ಲಕ್ಷ್ಮಣ ನಿಂಬರಗಿ ಇದ್ದರು.

***

ಕೂಡಲೇ ಬಿಲ್ ಪಾವತಿಸಿ’

‘ಕೋವಿಡ್ ಆರಂಭದಲ್ಲಿ ಕ್ವಾರಂಟೈನ್‌ಗೆ ಹೋಟೆಲ್ ಒದಗಿಸಿದವರು ಮತ್ತು ವಿವಿಧ ಉಪಕರಣಗಳನ್ನು ಪೂರೈಸಿದವರಿಗೆ ತಕ್ಷಣವೇ ಬಿಲ್ ಪಾವತಿಸಬೇಕು. ಕಷ್ಟವಿದ್ದಾಗ ಸಹಾಯ ಮಾಡಿದವರಿಗೆ ನೆರವಾಗಬೇಕು’ ಎಂದು ಶಾಸಕ ಅನಿಲ ಬೆನಕೆ ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ‘ಒಂದು ಹೋಟೆಲ್ ಹೊರತುಪಡಿಸಿ ಎಲ್ಲ ಹೋಟೆಲ್‌ಗಳ ಬಿಲ್ ಪಾವತಿಸಲಾಗಿದೆ’ ಎಂದು ತಿಳಿಸಿದರು.

‘ಕೋವಿಡ್ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ 2ನೇ ಹಂತದ ನೋಂದಣಿ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮ ಕಂಡುಬಂದಿಲ್ಲ’ ಎಂದು ಡಿಎಚ್ಒ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು.

***

ಜಿಲ್ಲೆಯಾದ್ಯಂತ ಕೊಳೆಗೇರಿ ಪ್ರದೇಶಗಳನ್ನು ಗುರುತಿಸಿ ನಿಯಮಾವಳಿ ಪ್ರಕಾರ ಪ್ರಸ್ತಾವ ಸಲ್ಲಿಸಬೇಕು
ಮಹೇಶ ಕುಮಠಳ್ಳಿ
ಅಧ್ಯಕ್ಷರು, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ

***

ಬೆಳೆ ಪರಿಹಾರ ವ್ಯತ್ಯಾಸ ಸರಿಪಡಿಸಲು ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ವಿಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ವಾರದಲ್ಲಿ ವರದಿ ಸಲ್ಲಿಸಲಾಗುವುದು
ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

***

ಜಿಲ್ಲೆಯಲ್ಲಿ ಮೂರು ದಿನಗಳಲ್ಲಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ರಸಗೊಬ್ಬರ ಕೊರತೆ ಇಲ್ಲ
ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT