ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: 35 ಮಕ್ಕಳಿದ್ದರೂ ಆರಂಭವಾಗದ ಕನ್ನಡ ಶಾಲೆ

ಮರಾಠಿ ಶಾಲೆಗೆ ಹೋಗದ ಮರಾಠಿಗರ ಮಕ್ಕಳು, ಕನ್ನಡ ಶಿಕ್ಷಣಕ್ಕೆ ಗ್ರಾಮಸ್ಥರ ಒತ್ತಾಯ
ಸಂತೋಷ ಈ. ಚಿನಗುಡಿ
Published : 12 ಡಿಸೆಂಬರ್ 2023, 5:15 IST
Last Updated : 12 ಡಿಸೆಂಬರ್ 2023, 5:15 IST
ಫಾಲೋ ಮಾಡಿ
Comments

ಬೆಳಗಾವಿ: ಖಾನಾಪುರ ತಾಲ್ಲೂಕಿನ ಉಮ್ರಪಾಣಿ ಗ್ರಾಮದ 35 ಮಕ್ಕಳು ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಬೇಕು ಎಂದು ಹಂಬಲಿಸುತ್ತಿದ್ದಾರೆ. ಆದರೆ, ಸರ್ಕಾರದಿಂದ ಪೂರಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮಕ್ಕಳು ಪಕ್ಕದ ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ಶಾಲೆಗೆ ಹೋಗುತ್ತಿದ್ದಾರೆ.

ಈ ಊರಿನಲ್ಲಿ ಶೇ 80ರಷ್ಟು ಮರಾಠಿ ಭಾಷಿಕರು ಇದ್ದಾರೆ. ಆದರೆ, ತಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು ಎಂಬುದು ಅವರ ಬಯಕೆ. ಹೀಗಾಗಿ, ಮೂರು ವರ್ಷಗಳ ಹಿಂದೆ ಇಲ್ಲಿನ ಸರ್ಕಾರಿ ಮರಾಠಿ ಶಾಲೆ ಕೂಡ ಬಂದ್‌ ಆಗಿದೆ.

‘ಬಂದ್‌ ಆಗಿರುವ ಮರಾಠಿ ಶಾಲೆಯ ಕಟ್ಟಡವನ್ನೇ ಬಳಸಿಕೊಂಡು ಕನ್ನಡ ಮಾಧ್ಯಮದ ಶಾಲೆ ಆರಂಭಿಸಬಹುದು. 1ರಿಂದ 5ನೇ ತರಗತಿ ನಡೆಸಲು ಕೊಠಡಿಗಳಿವೆ. ಹೆಚ್ಚುವರಿ ಶಿಕ್ಷಕರು, ಅಡುಗೆ ಸಿಬ್ಬಂದಿ ಇದ್ದಾರೆ. ಮುಖಂಡ ಶಾಂತಾರಾಮ ಸಿದ್ಧಿ ಅವರ ನೇತೃತ್ವದಲ್ಲಿ ಪಾಲಕರು ಕನ್ನಡ ಮಾಧ್ಯಮ ಶಾಲೆಗಾಗಿ ಹೋರಾಟ ನಡೆಸಿದ್ದಾರೆ. ಆದರೂ ಸರ್ಕಾರ ಕಿವಿಗೊಟ್ಟಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಕಾಡಲ್ಲೇ ಅಲೆಯುವ ಮಕ್ಕಳು:

‘1ರಿಂದ 5ನೇ ತರಗತಿ ಓದುವ 35 ಮಕ್ಕಳಿದ್ದಾರೆ. ಅವರೆಲ್ಲ 7 ಕಿ.ಮೀ ದೂರದ ಹಳಿಯಾಳದ ಸರ್ಕಾರಿ ಕನ್ನಡ ಶಾಲೆಗೆ ಹೋಗುತ್ತಾರೆ. ಈ ಮಾರ್ಗದಲ್ಲಿ ದಿನಕ್ಕೊಂದೇ ಬಸ್‌ ಬರುತ್ತದೆ. ಪ್ರತಿ ದಿನ ಶಾಲೆ 4.30ಕ್ಕೆ ಮುಗಿಯುತ್ತದೆ. ಆದರೆ, ಬಸ್‌ ಬರುವುದು ಸಂಜೆ 7.40ಕ್ಕೆ. ಅಲ್ಲಿಯವರೆಗೂ ಮಕ್ಕಳು ಕಾಯಬೇಕು.  ಒಂದೊಮ್ಮೆ ಈ ಬಸ್‌ ತಪ್ಪಿದರೆ, ಮಕ್ಕಳು ಕಾಡಿನಲ್ಲೇ ನಡೆದುಕೊಂಡು ಬರಬೇಕು. ಅಥವಾ ಬಸ್‌ ನಿಲ್ದಾಣದಲ್ಲೇ ಮಲಗಬೇಕು’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಕನ್ನಡ ಶಾಲೆಗೆ ಬೇಡಿಕೆ ಇರುವ ಮಕ್ಕಳ ಸಮೀಕ್ಷೆ ನಡೆಸಿ, ನಾವೇ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇವೆ. ಸರ್ಕಾರ ಇನ್ನೂ ಮನಸ್ಸು ಮಾಡಿಲ್ಲ’ ಎಂಬುದು ಅವರ ದೂರು.

ಹಣಬರವಾಡ ಶಾಲೆಗೂ ಇದೇ ಗತಿ:

ಕಾಡಂಚಿನಲ್ಲಿರುವ ಹಣಬರವಾಡ ಗ್ರಾಮದಲ್ಲಿ 1ರಿಂದ 5ನೇ ತರಗತಿವರೆಗೆ ಮರಾಠಿ ಮಾಧ್ಯಮ ಶಾಲೆ ಇದೆ. ಇಲ್ಲಿನ 30ಕ್ಕೂ ಹೆಚ್ಚು ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಲು ಬಯಸಿದ್ದಾರೆ. ಆದರೆ, ಹತ್ತಿರದಲ್ಲಿ ಎಲ್ಲೂ ಕನ್ನಡ ಮಾಧ್ಯಮ ಸರ್ಕಾರಿ ಶಾಲೆ ಇಲ್ಲ ಎಂಬ ಕಾರಣಕ್ಕೆ ಮರಾಠಿಯಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ.

‘ಖಾನಾಪುರ ವಲಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಇದೆ. ಉಮ್ರಪಾಣಿಯಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಜನ ಬೇಡಿಕೆ ಸಲ್ಲಿಸಿದ್ದು, ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದೆ’ ಎನ್ನುತ್ತಾರೆ ಕ್ಷೇತ್ರಶಿಕ್ಷಣಾಧಿಕಾರಿ ರಾಜೇಶ್ವರಿ ಕುಡಚಿ.

ಕನ್ನಡ ಶಾಲೆ ತೆರೆಯುವಂತೆ ಮಕ್ಕಳೇ ಬೇಡಿಕೆ ಇಟ್ಟಿದ್ದು ಆಶಾದಾಯಕ ಬೆಳವಣಿಗೆ. ಅಧಿಕಾರಿಗಳಿಂದ ವರದಿ ತರಿಸಿಕೊಂಡಿದ್ದೇನೆ. ಮಕ್ಕಳ ಬಯಕೆ ಈಡೇರಿಸುವುದು ನಮ್ಮ ಜವಾಬ್ದಾರಿ
–ಮಧು ಬಂಗಾರಪ್ಪ ಸಚಿವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ
ಉಮ್ರಪಾಣಿಯಲ್ಲಿ ಮೂಲಸೌಲಭ್ಯ ಪರಿಶೀಲಿಸಲಾಗಿದೆ. ಕನ್ನಡ ಮಾಧ್ಯಮ ಶಾಲೆ ಆರಂಭಿಸಲು ಬೇಡಿಕೆಯೂ ಇದೆ. ಇದರ ಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ
–ಮೋಹನಕುಮಾರ ಹಂಚಾಟೆ ಪ್ರಭಾರ ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT