ಶುಕ್ರವಾರ, ಜನವರಿ 27, 2023
27 °C

ಕಿತ್ತೂರು ತಹಶೀಲ್ದಾರ್‌ ಲೋಕಾಯುಕ್ತ ಬಲೆಗೆ:  ಹಲವು ದಾಖಲೆ, ₹10 ಲಕ್ಷ ನಗದು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಲಂಚ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲೇ ಸಿಕ್ಕಿಬಿದ್ದ ಚನ್ನಮ್ಮನ ಕಿತ್ತೂರು ತಹಶೀಲ್ದಾರ್ ಮನೆ ಹಾಗೂ ಕಚೇರಿಯನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ತಡರಾತ್ರಿಯೂ ಜಾಲಾಡಿದರು. ಹಲವು ದಾಖಲೆಗಳು ಹಾಗೂ ₹10 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರ ಮನೆಯಲ್ಲಿ ರಾತ್ರಿಯಿಡೀ ಶೋಧಕಾರ್ಯ ನಡೆಸಲಾಯಿತು.

ಆರೋಪಿಗಳು ಬೆಳಗಾವಿಗೆ: ಶುಕ್ರವಾರ ₹2 ಲಕ್ಷ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದ ತಹಶೀಲ್ದಾರ್‌ ಸೋಮಲಿಂಗಪ್ಪ ಹಲಗಿ ಹಾಗೂ  ಗುಮಾಸ್ತ ಜಿ.ಪ್ರಸನ್ನ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ಶನಿವಾರ ಬೆಳಿಗ್ಗೆ ಇಬ್ಬರನ್ನೂ ಬೆಳಗಾವಿಗೆ ಕರೆತಂದು, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದರು.

ಬಳಿಕ ಲೋಕಾಯುಕ್ತ  ನ್ಯಾಯಾಧೀಶರ ಮನೆಗೆ ಆರೋಪಿತರನ್ನು ಕರೆದೊಯ್ದರು. ಅಲ್ಲಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕರೆತಂದರು.

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಖೋದನಾಪುರ ಗ್ರಾಮದ ರಾಜೇಂದ್ರ ಬಾಪುಸಾಜೇಬ ಇನಾಮದಾರ ಅವರು ತಮ್ಮ 
ತಂದೆ ಬಾಪುಸಾಹೇಬ್ ಇನಾಮದಾರ ಅವರ ಹೆಸರಿನಲ್ಲಿದ್ದ 10 ಎಕರೆ ಜಮೀನಿನನ್ನು ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಆರೋಪಿಗಳು ಇದಕ್ಕೆ ₹5 ಲಕ್ಷ ಲಂಚ ಕೇಳಿದ್ದರು. ಮುಂಗಡವಾಗಿ ₹2 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂದು ರೈತ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಗತಿ ಅರಿತು ಬಲೆ ಹೆಣೆದ ಲೋಕಾಯುಕ್ತ ಪೊಲೀಸರು, ತಹಶೀಲ್ದಾರ್ ಮಾಡಿದ ಯೋಜನೆಯಂತೆ ಶುಕ್ರವಾರ ಲಂಚ ತೆಗೆದುಕೊಳ್ಳುವ ವೇಳೆ ದಾಳಿ ಮಾಡಿದರು.


ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಮತ್ತು ಪ್ರಸನ್ನ ಜಿ

ಅರ್ಜಿದಾರ ರೈತನ ತಂದೆ ಹೃದಯಾಘಾತದಿಂದ ಸಾವು
ಬೆಳಗಾವಿ:
ಚನ್ನಮ್ಮನ ಕಿತ್ತೂರು ತಹಶೀಲ್ದಾರ್ ಹಾಗೂ ಗುಮಾಸ್ತ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಿದ ಖೋದಾನಪುರ ರೈತ ರಾಜೇಂದ್ರ ಇನಾಮದಾರ ಅವರ ತಂದೆ ಬಾಪುಸಾಹೇಬ್ ಅವರು ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು.

ಜಮೀನಿನ ಖಾತಾ ಬದಲಾವಣೆಗಾಗಿ ರಾಜೇಂದ್ರ ಅವರಿಂದ ₹2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆಯೇ ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಹಾಗೂ ಗುಮಾಸ್ತ ಜಿ.ಪ್ರಸನ್ನ ಲೋಕಾಯುಕ್ತರ ಬಲೆಗೆ ಬಿದ್ದರು. ಈ ಸಂಗತಿ ಗ್ರಾಮದಲ್ಲಿ ಕಾಳ್ಗಿಚ್ಚಿನಂತೆ ಹರಡಿತು. 

ತಮ್ಮ ಜಮೀನಿನ ವಿಚಾರ ಇಷ್ಟು ದೊಡ್ಡ ಪ್ರಕರಣವಾಯಿತು ಎಂದು ಆಘಾತಗೊಂಡ ಬಾಪುಸಾಹೇಬ್ ಅವರಿಗೆ ಶುಕ್ರವಾರ ತಡರಾತ್ರಿ 1.30ರ ಸುಮಾರಿಗೆ ಹೃದಯಾಘಾತದ ಸಂಭವಿಸಿ, ಮೃತಪಟ್ಟರು ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು