ಗುರುವಾರ , ಜನವರಿ 20, 2022
15 °C
ಮನಸೂರೆಗೊಂಡ‌ ಕಲಾವಾಹಿನಿ; ಚನ್ನಮ್ಮನ ಸಾಧನೆ ಮೆಲುಕು

ಬೆಳಗಾವಿ: ವೀರ ಜ್ಯೋತಿಗೆ ಸ್ವಾಗತ, ಕಿತ್ತೂರು ಉತ್ಸವಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕಿತ್ತೂರು ವಿಜಯೋತ್ಸವದ ಸವಿನೆನಪಿಗಾಗಿ ಜಿಲ್ಲೆಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಸಂಭ್ರಮದಿಂದ ಬರಮಾಡಿಕೊಂಡು ಧ್ವಜಾರೋಹಣ ನೆರವೇರಿಸುವ ಮೂಲಕ ಕಿತ್ತೂರು ಉತ್ಸವಕ್ಕೆ ಶನಿವಾರ ಅದ್ಧೂರಿ ಚಾಲನೆ ನೀಡಲಾಯಿತು.

ಪ್ರತಿ ವರ್ಷ ನಡೆಯುವ ಉತ್ಸವದ ಸಂಪ್ರದಾಯದಂತೆ ಚನ್ನಮ್ಮನ ಸಮಾಧಿ ಸ್ಥಳ ಬೈಲಹೊಂಗಲದಿಂದ ಹೊರಟು ಜಿಲ್ಲೆಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಕಿತ್ತೂರು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಸ್ವಾಗತಿಸಲಾಯಿತು. ಸಂಸದೆ ಮಂಗಲಾ ಅಂಗಡಿ ಅವರು ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಉತ್ಸವದ ಧ್ವಜಾರೋಹಣ ನೆರವೇರಿಸಿ ಜ್ಯೋತಿ ಬರಮಾಡಿಕೊಂಡರು.

ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ ಬಗಲಿ ಉಪಸ್ಥಿತರಿದ್ದರು. ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮೊದಲಾದವರು ಇದ್ದರು.

ಬಳಿಕ ಜಾನಪದ ಕಲಾವಾಹಿನಿಗೆ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು. ನವಿಲು ನೃತ್ಯ, ಕೇರಳ ತೆಯಮ್ ನೃತ್ಯ, ಚಂಡೆಮದ್ದಳೆ, ಪೂಜಾ ಕುಣಿತ, ನಂದಿಧ್ವಜ, ಪಟಕುಣಿತ, ಚಿಟ್ಟೆಮೇಳ, ಗೊಂಬೆ ಕುಣಿತ, ಝಾಂಜ್ ಪಥಕ ಸೇರಿದಂತೆ ವಿವಿಧ ಕಲಾತಂಡಗಳ ಕಲಾವಿದರು ಕಲಾವಾಹಿನಿಯಲ್ಲಿ ಪಾಲ್ಗೊಂಡಿದ್ದರು. ಜನಪದ ಗೀತೆಗಳನ್ನು ಹಾಡುತ್ತಾ ಸಾಗಿದ ತಂಡವು ಚನ್ನಮ್ಮನ ಶೌರ್ಯ, ಸಾಹಸದ ಗುಣಗಾನ‌ ಮಾಡಿತು. ಈ ಮೂಲಕ ಕಿತ್ತೂರಿನ ಗತವೈಭವವನ್ನು ಮೆಲುಕು ಹಾಕುವಂತೆ ಮಾಡಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾವಾಹಿನಿಯು ಜನರ ಮನಸೂರೆಗೊಂಡಿತು. ಇದರೊಂದಿಗೆ ವಿವಿಧ ಇಲಾಖೆಯ ಕಾರ್ಯಗಳು ಹಾಗೂ ಯೋಜನೆಗಳ ಅರಿವು ಮೂಡಿಸುವ ಸ್ತಬ್ಧಚಿತ್ರಗಳು ಕೂಡ ಭಾಗವಹಿಸಿದ್ದವು. ಪೂರ್ಣಕುಂಭ ಹೊತ್ತ ಮಹಿಳೆಯರು ಕಲಾವಾಹಿನಿಯ ಮೆರಗು ಹೆಚ್ಚಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಕಲಾತಂಡಗಳ ಪ್ರದರ್ಶನವನ್ನು ವೀಕ್ಷಿಸಿದರು. ಕಿತ್ತೂರು ಮಹಾದ್ವಾರದ ಬಳಿ ಇರುವ ಶೂರ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಪ್ರತಿಮೆಗಳಿಗೂ ಗಣ್ಯರು ಮಾಲಾರ್ಪಣೆ ಮಾಡಿದರು.

ಉತ್ಸವದ ಅಂಗವಾಗಿ ಕಿತ್ತೂರಿನ ಗಡಾದಮರಡಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಧ್ವಜಾರೋಹಣ ನೆರವೇರಿಸಿದರು.

ಕಲ್ಮಠದ ಗುರುಶಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿರುವ ವಸ್ತುಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರ ವಿಭಾಗವು ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಸ್ಥಾಪಿಸಿರುವ ವಿಶೇಷ ಮಳಿಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಕೃಷಿ, ಆರೋಗ್ಯ, ಪಶುಪಾಲನೆ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳನ್ನು ಗಣ್ಯರು ವೀಕ್ಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು