ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಹಾನಿಗೆ ಪರಿಹಾರ ಸಿಗದ 40 ಮಹಿಳೆಯರಿಂದ ಸಾಮೂಹಿಕ ಆತ್ಮಹತ್ಯೆಗೆ ಮನವಿ: ಡಿಕೆಶಿ

'ಬಸವರಾಜ ಬೊಮ್ಮಾಯಿ ದುರ್ಬಲರಾಗಿದ್ದಾರೆ'
Last Updated 6 ಡಿಸೆಂಬರ್ 2021, 15:34 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ರಾಯಬಾಗ ತಾಲ್ಲೂಕಿನಲ್ಲಿ ನೆರೆ ಹಾನಿಗೆ ಪರಿಹಾರ ಸಿಗದಿರುವುದರಿಂದ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿ 40 ಮಹಿಳೆಯರು ನನಗೆ ಮನವಿ ಸಲ್ಲಿಸಿದ್ದಾರೆ. ಅವರು ನೀಡಿದ ದಾಖಲೆಗಳನ್ನು ಇಟ್ಟುಕೊಂಡಿದ್ದು, ಇದೇ 13ರಿಂದ ಆರಂಭವಾಗಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶದಲ್ಲಿ ಪ್ರಸ್ತಾಪಿಸುತ್ತೇನೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ನೆರೆ ಸಂತ್ರಸ್ತರಿಗೆ ಎಲ್ಲಿ ಮನೆ ಕಟ್ಟಿಕೊಟ್ಟಿದ್ದಾರೆ? ನಾವು ಜನರ ಕಷ್ಟಗಳಿಗೆ ಧ್ವನಿ ಆಗಬೇಕು, ಇಲ್ಲದಿದ್ದರೆ ಕರ್ತವ್ಯಕ್ಕೆ ಮೋಸ ಮಾಡಿದಂತೆ ಆಗುತ್ತದೆ. ಹೀಗಾಗಿ, ಪರಿಹಾರ ವಿಚಾರವಾಗಿ ಚರ್ಚೆ ನಡೆಸುವಂತೆ ನಮ್ಮ ಶಾಸಕರಿಗೆ ಸೂಚಿಸಿದ್ದೇವೆ’ ಎಂದರು.

‘ಮಹದಾಯಿ ಅನುಷ್ಠಾನಕ್ಕೆ ಸಮಸ್ಯೆ ಏನು? ನ್ಯಾಯಮಂಡಳಿ ತೀರ್ಪು ಬಂದ ನಂತರವೂ ಗೋವಾ ರಾಜಕಾರಣ ಮಾಡುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದವರು. ಮುಖ್ಯಮಂತ್ರಿಯಾದ ನಂತರ, ಮಹದಾಯಿ ಅನುಷ್ಠಾನಕ್ಕೆ ಕ್ರಮ ವಹಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅವರು ದುರ್ಬಲರಾಗಿದ್ದಾರೆ’ ಎಂದು ಟೀಕಿಸಿದರು.

‘ಅವರ ಸಂಪುಟದ ಸಚಿವರೇ ಮುರುಗೇಶ ನಿರಾಣಿ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದಾರೆ. ಆಗ ವೇದಿಕೆಯಲ್ಲಿದ್ದ ನಿರಾಣಿ, ನಾನು ಬೊಮ್ಮಾಯಿ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ; ಈ ರೀತಿ ಹೇಳಿಕೆ ಸರಿಯಲ್ಲ ಎನ್ನಬೇಕಿತ್ತು. ಆಗ ಸುಮ್ಮನಿದ್ದು ಬಳಿಕ ಹೇಳಿಕೆ ನೀಡುತ್ತಾರೆ. ಇದೆಲ್ಲವನ್ನೂ ನೋಡಿದರೆ, ಮುಖ್ಯಮಂತ್ರಿ ದುರ್ಬಲರಾಗಿದ್ದಾರೆಯೋ, ಇಲ್ಲವೋ?’ ಎಂದು ಕೇಳಿದರು.

‘ವಿಧಾನಪರಿಷತ್ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಮ್ಮಲ್ಲಿ ಗೊಂದಲವಿಲ್ಲ. ನಾಯಕರೆಲ್ಲರೂ ಒಮ್ಮತದಿಂದ ಕೆಲಸ ಮಾಡುತ್ತಿದ್ದಾರೆ. ಅಪಸ್ವರ ಇಲ್ಲ. ಇದು ಪಕ್ಷದ ಮೊದಲು ಗೆಲುವು. ಆದರೆ, ಬಿಜೆಪಿಯಲ್ಲಿ ಈ ಪರಿಸ್ಥಿತಿ ಇಲ್ಲ. ಅಲ್ಲಿ ಒಮ್ಮತದ ಅಭ್ಯರ್ಥಿ ಇಲ್ಲ. ಬೆಳಗಾವಿಯಲ್ಲಿ ಬಿಜೆಪಿ ಒಬ್ಬ ಅಭ್ಯರ್ಥಿ ಹಾಕಿದ್ದರೂ, ಏನು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಒಂದೇ ವೇದಿಕೆ, ಅದೆ ಜನ. ಆದರೆ, ಇಬ್ಬರ ಪರ ಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ಇಷ್ಟು ದುರ್ಬಲ ಎಂದು ಭಾವಿಸಿರಲಿಲ್ಲ. ಪಕ್ಷ, ಮುಖ್ಯಮಂತ್ರಿ, ಹೈಕಮಾಂಡ್ ಎಲ್ಲವೂ ಅಸಹಾಯಕವಾಗಿದೆ’ ಎಂದು ವ್ಯಂಗ್ಯವಾಡಿದರು.

‘ಬೆಳಗಾವಿಯಲ್ಲಿ ನಮಗೆ ಯಾರೂ ಎದುರಾಳಿಗಳಿಲ್ಲ. ಪಕ್ಷಕ್ಕೆ ಮೋಸ ಮಾಡುವವರು ಅಥವಾ ಬಂಡಾಯ ಅಭ್ಯರ್ಥಿ ಇಲ್ಲ’ ಎಂದು ಶಾಸಕ ರಮೇಶ ಜಾರಕಿಹೊಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT