ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲದಲ್ಲೇ ಮಾರ್ಗದರ್ಶನಕ್ಕೆ ‘ಕೃಷಿ ಸಂಜೀವಿನಿ’, ತಾಂತ್ರಿಕತೆ ವರ್ಗಾವಣೆಗೆ ಕ್ರಮ

Last Updated 10 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ರೈತರಿಗೆ ಅವರ ಹೊಲದಲ್ಲೇ ಸಲಹೆ, ಸೂಚನೆ, ಮಾರ್ಗದರ್ಶನ ನೀಡುವುದು ಹಾಗೂ ತಾಂತ್ರಿಕತೆ ವರ್ಗಾವಣೆ ಉದ್ದೇಶದಿಂದ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ‘ಕೃಷಿ ಸಂಜೀವಿನಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಇದಕ್ಕಾಗಿ ಎರಡು ವಾಹನಗಳನ್ನು ಜಿಲ್ಲೆಗೆ ನೀಡಲಾಗಿದೆ. ಒಬ್ಬ ಕೃಷಿ ತಜ್ಞರು, ಚಾಲಕರನ್ನು ಒದಗಿಸಲಾಗಿದೆ. ನಿಗದಿತ ಸಮಸ್ಯೆಗಳಿದ್ದಾಗ ಆಯಾ ವಿಷಯ ತಜ್ಞರು ಅವುಗಳೊಂದಿಗೆ ಸಂಚರಿಸುತ್ತಾರೆ. ರೈತ ಸಂಪರ್ಕ ಕೇಂದ್ರದವರೂ ಭೇಟಿ ನೀಡಿ ಕೃಷಿಕರಿಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.

ವಾಹನದ ಚಲನವಲನದ ಮೇಲೆ ಕೇಂದ್ರೀಕೃತವಾಗಿ ಗುರುತಿಸಲು ಜಿಪಿಎಸ್‌ ಸಾಧನಗಳನ್ನು ಅಳವಡಿಸಲಾಗಿದೆ. ವಾಹನ ಎಲ್ಲಿದೆ ಎಂಬ ಮಾಹಿತಿಯನ್ನು ಪಡೆದು, ಇನ್ನೊಬ್ಬ ರೈತನ ಜಮೀನಿಗೆ ಬರಲು ಎಷ್ಟು ಸಮಯ ಆಗುತ್ತದೆ ಎನ್ನುವುದನ್ನು ನಿಖರವಾಗಿ ತಿಳಿದುಕೊಳ್ಳಬಹುದು. ಎಷ್ಟು ಕಡೆಗಳಿಗೆ ನೀಡಿತು ಎನ್ನುವುದೂ ಗೊತ್ತಾಗಲಿದೆ.

ಹಲವು ಸೌಲಭ್ಯ:ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣದ ಸೂಕ್ಷ್ಮ ಕೀಟಗಳನ್ನು ಗುರುತಿಸಲು ಸ್ಟೀರಿಯೊ ಜೂಮ್‌ ಸೂಕ್ಷ್ಮದರ್ಶಕ, ಭೂತಗನ್ನಡಿ, ರಸಗೊಬ್ಬರ ಪರೀಕ್ಷಾ ಕಿಟ್‌, ಮಣ್ಣು ತೇವಾಂಶ ಸಂವೇದಕಗಳು, ಹಾರಾಡುವ ಕೀಟಗಳನ್ನು ಹಿಡಿಯಲು ಕೀಟ ಸಂಗ್ರಹಣಾ ಬಲೆ, ಪೆಟ್ಟಿಗೆ, ಇ–ಸ್ಯಾಪ್‌ ತಂತ್ರಾಂಶ ಅಳವಡಿಸಿ ರೈತರ ಜಮೀನಿನಲ್ಲಿ ವೈಜ್ಞಾನಿಕ ಸರ್ವೇಕ್ಷಣೆ ಕೈಗೊಳ್ಳಲು ಟ್ಯಾಬ್ಸ್‌, ಲ್ಯಾಪ್‌ಟಾಪ್‌, ಪ್ರಿಂಟರ್‌, ಡಿಜಿಟಲ್‌ ಉಷ್ಣ ಮಾಪಕ, ಹೈಡ್ರೊ ಮೀಟರ್‌, ಲೀಫ್‌ ಕಲರ್‌ ಚಾರ್ಟ್‌ ಮೊದಲಾದ ಉಪಕರಣಗಳು ವಾಹನಗಳಲ್ಲಿ ಇರಲಿವೆ. ಪ್ರಯೋಗಾಲಯದಿಂದ ಕೃಷಿ ಕ್ಷೇತ್ರದವರೆಗೆ ಎನ್ನುವುದು ಯೋಜನೆಯ ಆಶಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

‘ಹೊಸ ಕಾರ್ಯಕ್ರಮ ಇದಾಗಿದ್ದು, ವಾಹನಗಳು ಈಗಾಗಲೇ ರೈತರ ಜಮೀನುಗಳಿಗೆ ಪ್ರವಾಸ ಆರಂಭಿಸಿವೆ. ವಾರಕ್ಕೆ ಒಂದೊಂದು ತಾಲ್ಲೂಕುಗಳಿಗೆ ಈ ವಾಹನಗಳ ಸಂಚರಿಸಲಿವೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವ ಪ್ರಯತ್ನದ ಭಾಗವಿದಾಗಿದೆ. ಮಣ್ಣು ‍ಪರೀಕ್ಷೆಗೆ ಸೌಲಭ್ಯವೂ ವಾಹನಗಳಲ್ಲಿರಲಿದೆ. ಪ್ರೊಜೆಕ್ಟರ್‌ ಅಳವಡಿಸಿ, ಕೃಷಿಗೆ ಸಂಬಂಧಿಸಿದ ಕಿರು ವಿಡಿಯೊಗಳನ್ನು ತೋರಿಸುವ ಉದ್ದೇಶವಿದೆ. ಕೃಷಿ ಚಟುವಟಿಕೆಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನೂ ತಿಳಿಸಿಕೊಡಲಾಗುವುದು’ ಎಂದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಸಹಾಯವಾಣಿಗೆ ತಿಳಿಸಬಹುದು:‘ಬೆಳೆಗಳಲ್ಲಿ ಕಂಡುಬರುವ ಕೀಟ, ಕಳೆ ಬಾಧೆ, ಮಣ್ಣಿನ ಪೋಷಕಾಂಶ ಕೊರತೆಯ ಸಮರ್ಪಕ ನಿರ್ವಹಣೆ, ಹತೋಟಿ ಕ್ರಮಗಳು, ಮಾರ್ಗೋಪಾಯಗಳನ್ನು ಒದಗಿಸಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯವಾಗಿಯೂ ಈ ವಾಹನಗಳು ಕಾರ್ಯನಿರ್ವಹಿಸಲಿದೆ. ರೈತರ ಇಂತಹ ಸಂಕಷ್ಟ ನಿವಾರಣೆ ನೆರವಾಗಲಿದೆ. ತಾಂತ್ರಿಕ ತಂಡದಿಂದ ತಾಂತ್ರಿಕ ಮಾಹಿತಿ ದೊರೆಯಲಿದೆ. 155313 (ಟೋಲ್ ಫ್ರೀ) ಸಹಾಯವಾಣಿಗೆ ರೈತರು ಕರೆ ಮಾಹಿತಿ ನೀಡಿದರೆ, ಅದು ನಮ್ಮ ಕಚೇರಿಗೆ ಬರಲಿದೆ. ಅದನ್ನು ಆಧರಿಸಿ ಕೃಷಿ ಸಂಜೀವಿನಿ ವಾಹನ ಆ ಭಾಗದಲ್ಲಿ ಸಂಚರಿಸಲಿದೆ. ಅವಶ್ಯವುಳ್ಳ ರೈತರ ಜಮೀನುಗಳಿಗೆ ತೆರಳಿ, ಮಾರ್ಗದರ್ಶನ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

***

ಮಣ್ಣು ಪರೀಕ್ಷೆಗೆ ಸಲಹೆ

ತಲ್ಲೂರ: ‘ರೈತರು ಬಿತ್ತುವುದಕ್ಕಿಂತ ಪೂರ್ವದಲ್ಲಿ ಮಣ್ಣು ಹಾಗೂ ಗೊಬ್ಬರಗಳನ್ನು ಪರೀಕ್ಷೆ ಮಾಡಿಸಿ ಅದನ್ನು ಆಧರಿಸಿ ಕೃಷಿ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು’ ಎಂದು ಕೃಷಿ ಅಧಿಕಾರಿ ರವಿ ವರಗನವರ ಹೇಳಿದ್ದಾರೆ.

ಗ್ರಾಮದ ಚಂದ್ರಶೇಖರ ಹೋಳಿ ಅವರ ಹೊಲಕ್ಕೆ ಬುಧವಾರ ‘ಕೃಷಿ ಸಂಜೀವಿನಿ’ ವಾಹನ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ತಾ.ಪಂ. ಅಧ್ಯಕ್ಷ ವಿನಯಕುಮಾರ ದೇಸಾಯಿ, ‘ಸರ್ಕಾರವು ರೈತಪರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ತಮ್ಮ ಬೆಳೆಗಳಿಗೆ ರೋಗ ಅಥವಾ ಕೀಟದ ಸಮಸ್ಯೆ ಬಂದಾಗ ಅಧಿಕಾರಿಗಳ ಬಳಿ ಬರುತಿದ್ದರು. ಈಗ, ಇಲಾಖೆಯ ವಾಹನವೇ ಹೊಲಗಳಿಗೆ ಬಂದು ಕೃಷಿ ಬೆಳೆಗಳ ನಿರ್ವಹಣೆ ಮಾಹಿತಿ ನೀಡುತ್ತಿರುವುದು ಸಂತಸದ ವಿಷಯ’ ಎಂದರು.

ಗ್ರಾ.ಪಂ. ಅಧ್ಯಕ್ಷ ಬಸವರಾಜ ಕಡಬಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಉಮೇಶ ಯರಗಟ್ಟಿ, ಚನ್ನಯ್ಯ ಪೂಜೇರ, ಸಚಿನ ಹೋಳಿ, ಚಂದ್ರಪ್ಪ ಕಾಜಗಾರ, ವೀರನಗೌಡ ಪಾಟಿಲ, ಬಸವಂತ ಹೋಳಿ, ಬಸವರಾಜ ಅಣ್ಣಿಗೇರಿ, ಪ್ರಕಾಶ ಮುರಗೋಡ, ಗುರುರಾಜ ಚವ್ಹಣ್ಣವರ, ಮಹಾಂತೇಶ ಹೋಳಿ, ಈರಪ್ಪ ಢವಳೇಶ್ವರ, ವಿಜಯ ಅಳಗುಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT