ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಳಖೋಡ: ಕುಂಟುತ್ತಾ ಸಾಗಿರುವ ಕಾಮಗಾರಿಗಳು

ಮುಗಳಖೋಡ ಪಟ್ಟಣದಲ್ಲಿ ಸಾರ್ವಜನಿಕರಿಗೆ ತೊಂದರೆ
Last Updated 29 ಅಕ್ಟೋಬರ್ 2020, 6:54 IST
ಅಕ್ಷರ ಗಾತ್ರ

ಮುಗಳಖೋಡ: ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿರುವುದರಿಂದಾಗಿ, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣ ಎಂದು ನಾಗರಿಕರು ದೂರುತ್ತಿದ್ದಾರೆ.

ಹಲವು ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಪೆಟ್ರೋಲ್‌ ಬಂಕ್‌ನಿಂದ ಬಸ್‌ ನಿಲ್ದಾಣ–ವಿವೇಕಾನಂದ ವೃತ್ತದವರೆಗೆ ನಗರೋತ್ಥಾನ ಯೋಜನೆಯಲ್ಲಿರಸ್ತೆ ಕಾಮಗಾರಿ ಪೂರ್ಣವಾಗಿಲ್ಲ. ಯಲ್ಲಾಲಿಂಗೇಶ್ವರ ಬೃಹನ್‌ಮಠದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿದ ಓವರಹೆಡ್‌ ಟ್ಯಾಂಕ್ ಮುಗಿಯದಿರುವುದರಿಂದಾಗಿ, ಜನರಿಗೆ ನೀರಿನ ಬವಣೆ ತಪ್ಪಿಲ್ಲ. ಜೊತೆಗೆ ಮೂಲಸೌಲಭ್ಯಗಳ ಕೊರತೆಯಿಂದ ನಲುಗಿದ್ದಾರೆ.

ಬ.ನೀ. ಕುಲಿಗೋಡ ಶಾಲೆಯಿಂದ ಘಟಪ್ರಭಾ ಎಡದಂಡೆ ಕಾಲುವೆ (ಸವಾರಿ ಪೂಲ್)ವರೆಗಿನ ರಸ್ತೆ ತೀವ್ರ ಹದಗೆಟ್ಟಿದ್ದು, ಗುಂಡಿಗಳೇ ಹೆಚ್ಚಾಗಿವೆ. ಮಹಾಲಿಂಗಪುರದಿಂದ ಬರುವ ಮತ್ತು ಹೋಗುವ ಜನರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದೆ. ಸೇತುವೆ ಬಳಿಯಂತೂ ಸಂಪೂರ್ಣ ಹದಗೆಟ್ಟಿದೆ. ಜನರು ಜೀವ ಭಯದಲ್ಲೇ ಸೇತುವೆ ದಾಟಬೇಕಾದಂತಹ ಸ್ಥಿತಿ ಇದೆ. ಮುಗಳಖೋಡ-ಹಿಡಕಲ ಒಳ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಪಕ್ಕದಲ್ಲಿಯೇ ತಡೆಗೋಡೆ ಇಲ್ಲದ ಬಾವಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಮುಖ್ಯರಸ್ತೆಯೂ ಗುಂಡಿಗಳಿಂದಲೇ ತುಂಬಿದೆ. ಮಳೆಯಾದರೆ ಗುಂಡಿಗಳಲ್ಲಿ ನೀರು ತುಂಬಿ ಅಪಘಾತಕ್ಕೆ ಎಡೆ ಮಾಡಿಕೊಡುತ್ತಿದೆ. ಚರಂಡಿ ನೀರು ರಸ್ತೆಗಳ ಮೇಲೆ ಹರಿದು ವಾತಾವರಣ ಹಾಳಾಗುತ್ತಿದೆ. ಬಿಸಿಲಿದ್ದಾಗ ಧೂಳಿನ ವಾತಾವರಣ ಸಾಮಾನ್ಯ! ವಿವೇಕಾನಂದ ವೃತ್ತದಿಂದ ವಜರಂಗ ದಳದ ದ್ವಜ ಕಂಬದವರೆಗೆ ರಸ್ತೆಯ ಎರಡೂ ಬದಿಯಲ್ಲಿ ನಿರ್ಮಾಣವಾಗಿರುವ ಪೇವರ್ಸ್‌ ಕಾಮಗಾರಿ ಕೆಳಗಡೆ ಚರಂಡಿ ನಿರ್ಮಾಣ ಮಾಡದೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬ ಆರೋಪಗಳಿವೆ. ನೀರು ಸರಾಗವಾಗಿ ಚರಂಡಿಗೆ ಹೋಗದೆ ಅಂಗಡಿಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ.

ರಾಯಬಾಗ ಪಟ್ಟಣ ಪಂಚಾಯಿತಿ, ಕುಡಚಿ, ಹಾರೂಗೇರಿ, ಮುಗಳಖೋಡ ಪುರಸಭೆಗೆ ಒಬ್ಬರು ಎಂಜಿನಿಯರ್‌ ಮಾತ್ರವೆ ಇದ್ದಾರೆ! ಪಟ್ಟಣಕ್ಕೆ ಪ್ರತ್ಯೇಕ ಎಂಜಿನಿಯರ್‌ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಇಲ್ಲಿನ ಮುಖ್ಯರಸ್ತೆಗೆ ಎರಡು ವರ್ಷದ ಹಿಂದೆ ಗುದ್ದಲಿ ಪೂಜೆ ನೆರವೇರಿಸಿದ್ದ ಕುಡಚಿ ಶಾಸಕ ಪಿ.ರಾಜೀವ್ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಕೇವಲ ತಾಂಡಾಗಳ ಅಭಿವೃದ್ಧಿ ಕಡೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಶಾಸಕರ ಮಾತುಗಳನ್ನು ಮಾತ್ರ ಕೇಳುತ್ತಾರೆ. ಜನರ ಮಾತುಗಳನ್ನು ತಳ್ಳಿ ಹಾಕುತಿದ್ದಾರೆ’ ಎಂದು ರೈತ ಸಂಘದ ಮುಖಂಡ ಸುರೇಶ ಹೊಸಪೇಟಿ ಆರೋಪಿಸಿದರು.

‘ಪಟ್ಟಣದಲ್ಲಿ ಚರಂಡಿ ನಿರ್ಮಾಣ ಸೇರಿದಂತೆ ಎಲ್ಲ ಕಾಮಗಾರಿಗಳನ್ನೂ ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಬಿ. ಡಂಬಳ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT