ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಕ್ಕೇರಿ | ಕುಸಿದ ಅಂತರ್ಜಲ ಮಟ್ಟ: ಬರಿದಾಗಿವೆ ಬೆಳವಿ, ಯಾದಗೂಡ ಕೆರೆಯೊಡಲು

Published 28 ಮೇ 2024, 6:24 IST
Last Updated 28 ಮೇ 2024, 6:24 IST
ಅಕ್ಷರ ಗಾತ್ರ

ಹುಕ್ಕೇರಿ: ಭೀಕರ ಬರದ ಹಿನ್ನೆಲೆಯಲ್ಲಿ ತಾಲ್ಲೂಕಿನ ಯಾದಗೂಡ ಮತ್ತು ಬೆಳವಿ ಗ್ರಾಮದಲ್ಲಿನ ಕೆರೆಗಳ ಒಡಲು ಬರಿದಾಗಿದೆ. ಪ್ರತಿವರ್ಷ ಉತ್ತಮ ಮಳೆಯಾಗಿ, ಬೇಸಿಗೆಯಲ್ಲೂ ಕೆರೆಗಳಲ್ಲಿ ಒಂದಿಷ್ಟು ನೀರು ಸಂಗ್ರಹವಿರುತ್ತಿತ್ತು.

ಆದರೆ, ಕಳೆದ ವರ್ಷ ಮಳೆಯಾಗದ ಹಿನ್ನೆಲೆಯಲ್ಲಿ ಈ ಬಾರಿ ನೀರಿಲ್ಲದೆ ಭಣಗುಡುತ್ತಿವೆ. ಇದರಿಂದಾಗಿ ಪಕ್ಕದ ಜಮೀನುಗಳಲ್ಲಿ ಕೊರೆಯಿಸಿರುವ ತೆರೆದಬಾವಿ ಮತ್ತು ಕೊಳವೆಬಾವಿಗಳಲ್ಲೂ ಅಂತರ್ಜಲ ಮಟ್ಟ ಕುಸಿದಿದೆ.

ಕೆರೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಿದ್ದವರಿಗೆ ತೊಂದರೆಯಾಗಿದೆ. ಇಂದು ಅಥವಾ ನಾಳೆ ದೊಡ್ಡ ಮಳೆ ಸುರಿಯಬಹುದು. ಕೆರೆ ತುಂಬಬಹುದು ಎಂಬ ನಿರೀಕ್ಷೆಯಲ್ಲಿ ಅವರು ಮುಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧವಾಗುತ್ತಿದ್ದಾರೆ.

ಕೆರೆ ತುಂಬಿಸುವ ಯೋಜನೆ:

ಪ್ರತಿವರ್ಷ ಬೇಸಿಗೆಯಲ್ಲಿ ಬರಿದಾಗುವ ತಾಲ್ಲೂಕಿನ 28 ಕೆರೆಗಳಿಗೆ ಹಿರಣ್ಯಕೇಶಿ ನದಿಯಿಂದ ನೀರು ತುಂಬಿಸುವ ಮಹತ್ವಕಾಂಕ್ಷಿ ಯೋಜನೆಯನ್ನು ಹುಕ್ಕೇರಿ ಕ್ಷೇತ್ರದ ಹಿಂದಿನ ಶಾಸಕ ದಿ.ಉಮೇಶ ಕತ್ತಿ ಕೈಗೊಂಡಿದ್ದರು. ಇದಕ್ಕಾಗಿ ಸಂಕೇಶ್ವರದ ಬಳಿ ₹9 ಕೋಟಿ ವೆಚ್ಚದಲ್ಲಿ ಜಾಕ್‌ವೆಲ್ ನಿರ್ಮಿಸಿದ್ದರು.

ಪ್ರತಿವರ್ಷ ಮಳೆಗಾಲದಲ್ಲಿ ನದಿಯಿಂದ ಈ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಯಾದಗೂಡ, ಬೆಳವಿ ಕೆರೆಗಳು ಇದರಲ್ಲಿವೆ. ಇಳಿಜಾರು ಪ್ರದೇಶದಲ್ಲಿರುವ ಕೆರೆಗಳು ಪೂರ್ತಿ ತುಂಬಿದರೆ, ಎತ್ತರ ಪ್ರದೇಶದಲ್ಲಿರುವ ಕೆರೆಗಳಲ್ಲಿ ಅರ್ಧದಷ್ಟು ನೀರು ಸಂಗ್ರಹವಾಗುತ್ತಿತ್ತು.

ಆದರೆ, ವರುಣನ ಅವಕೃಪೆಯಿಂದಾಗಿ ಕಳೆದ ವರ್ಷ ಹಿರಣ್ಯಕೇಶಿ ನದಿಯಲ್ಲೂ ಹೆಚ್ಚಿನ ನೀರು ಸಂಗ್ರಹವಾಗಲಿಲ್ಲ. ಹಾಗಾಗಿ ಈ ಕೆರೆಗಳಿಗೂ ನಿರೀಕ್ಷೆಯಂತೆ ಬಾರದ್ದರಿಂದ ಸಮಸ್ಯೆ ತಲೆದೋರಿದೆ.

‘ಯಾದಗೂಡದ ಎರಡು ಕೆರೆ ಮತ್ತು ಬೆಳವಿಯ ಕೆರೆ ಬತ್ತಿದ್ದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಅಲ್ಲಿಲ್ಲಿ ಅಲೆದಾಡಿ ನೀರು ತರುವಂತಾಗಿದೆ’ ಎಂದು ಬೆಳವಿಯ ರೈತ ನಿಂಗಪ್ಪ ಜರಳಿ ಅಳಲು ತೋಡಿಕೊಂಡರು.

ಪ್ರತಿವರ್ಷ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಕೆರೆಗೆ ನೀರು ತುಂಬಿಸುವ ಬದಲಿಗೆ ವರ್ಷವಿಡೀ ಅವುಗಳಿಗೆ ನೀರು ಪೂರೈಸಲು ಏತ ನೀರಾವರಿ ಯೋಜನೆ ರೂಪಿಸಬೇಕು
ವಿಶ್ವನಾಥ ನಾಯಿಕ ರೈತ ಬೆಳವಿ
ತೆರೆದಬಾವಿ ಕೊಳವೆಬಾವಿ ಬತ್ತಿವೆ. ಕೆರೆಯೊಡಲು ಬರಿದಾಗಿದ್ದರಿಂದ ಕುಡಿಯಲೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷವಿಡೀ ಕೆರೆಯಲ್ಲಿ ನೀರು ಸಂಗ್ರಹವಿರುವಂತೆ ಸರ್ಕಾರ ಕ್ರಮ ವಹಿಸಬೇಕು
ಶಿವನಗೌಡ ಪಾಟೀಲ ರೈತ ಯಾದಗೂಡ
ಕೆರೆಯೊಡಲು ಬತ್ತಿದ್ದರಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಬೆಳೆಗಳು ಒಣಗಲು ಆರಂಭಿಸಿವೆ
ದುಂಡಪ್ಪ ಕುಡಬಾಳೆ ರೈತ ಯಾದಗೂಡ
ಕೆರೆ ನೀರು ಬತ್ತಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳಲು ತೊಂದರೆಯಾಗುತ್ತಿದೆ. ಇದರಿಂದ ಆರ್ಥಿಕ ಮುಗ್ಗಟ್ಟು ಎದುರಾಗಿದೆ
ನಿಂಗಪ್ಪ ಜರಳಿ ರೈತ ಬೆಳವಿ
ದೀಪದ ಬುಡದಲ್ಲೇ ಕತ್ತಲು!:
‘ಗರಿಷ್ಠ 51 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಿಡಕಲ್ ಜಲಾಶಯ ಹುಕ್ಕೇರಿ ತಾಲ್ಲೂಕಿನಲ್ಲೇ ಇದೆ. ಆದರೂ ಇದೇ ತಾಲ್ಲೂಕಿನ ಬೆಳವಿ ಯಾದಗೂಡ ಮತ್ತಿತರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಲೇ ಇದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಶಿರಹಟ್ಟಿಯ ವಕೀಲ ಡಿ.ಕೆ.ಅವರಗೋಳ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT