ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಧಾನಿ ಗ್ಯಾರಂಟಿ’, ಇದು ನಮ್ಮ ಗ್ಯಾರಂಟಿಯ ನಕಲು: ಲಕ್ಷ್ಮಿ ಹೆಬ್ಬಾಳಕರ

Published 5 ಫೆಬ್ರುವರಿ 2024, 10:34 IST
Last Updated 5 ಫೆಬ್ರುವರಿ 2024, 10:34 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದಲ್ಲಿ ನಾವು ಆಶ್ವಾಸನೆ ನೀಡಿದಂತೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದ್ದೇವೆ. ಗ್ಯಾರಂಟಿ ಎಂಬ ಶಬ್ದ ಕರ್ನಾಟಕ ಮತ್ತು ಕಾಂಗ್ರೆಸ್‌ನಿಂದ ಬಂದಿದೆ. ಈಗ ದೊಡ್ಡ ಹೋ್ಡಿಂಗ್‌ಗಳಲ್ಲಿ ‘ಪ್ರಧಾನಿ ಗ್ಯಾರಂಟಿ’ ಎಂದು ಬಿಂಬಿಸಲಾಗುತ್ತಿದೆ. ಇದು ನಮ್ಮ ಗ್ಯಾರಂಟಿಯ ನಕಲು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಗ್ಯಾರಂಟಿ ಹೆಸರನ್ನು ಕೇಂದ್ರ ಸರ್ಕಾರ ಬಳಸುತ್ತಿರುವ ವಿಚಾರವಾಗಿ ಇಲ್ಲಿ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಕೇಂದ್ರದಿಂದ ನಮಗೆ ಪದೇಪದೆ ಅನ್ಯಾಯವಾಗಿದೆ. ರಾಜ್ಯಕ್ಕೆ ಸಮರ್ಪಕವಾಗಿ ಅನುದಾನ ಸಿಗುತ್ತಿಲ್ಲ. ಬರ ಪರಿಸ್ಥಿತಿಯಲ್ಲಿ ಕೇಂದ್ರ ಸಹಾಯಕ್ಕೆ ಬರಲಿಲ್ಲ. ಹಾಗಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯೇ ಇದಕ್ಕೆ ಅಸ್ತ್ರ. ದೆಹಲಿಯಲ್ಲಿ ಫೆ.7ರಂದು ಪ್ರತಿಭಟನೆ ನಡೆಯುತ್ತಿದ್ದು, ಜಿಲ್ಲೆಯಲ್ಲಿರುವ ಕಾಂಗ್ರೆಸ್‌ನ 11 ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್‌ ಸದಸ್ಯರು ಭಾಗವಹಿಸಲಿದ್ದೇವೆ’ ಎಂದರು.

‘ಲಕ್ಷ್ಮಣ ಸವದಿ ಪಕ್ಷ ಬಿಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹೆಬ್ಬಾಳಕರ, ‘ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ನನ್ನ ಪುತ್ರ ಮೃಣಾಲ್ ಹೆಬ್ಬಾಳಕರ ಕೂಡ ಟಿಕೆಟ್ ಆಕಾಂಕ್ಷಿ. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರನ್ನು ಗೆಲ್ಲಿಸುತ್ತೇವೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ನಿರ್ಧಾರವೇ ನಮ್ಮ ನಿರ್ಧಾರ’ ಎಂದರು.

‘ಎಲ್ಲ ಪಕ್ಷಗಳು ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತೇವೆ. ನಾವು ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುತ್ತಿದ್ದೇವೆ’ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT