ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಗಳನ್ನು ಬಳಸುವುದಕ್ಕೂ ಕಲಿಯಿರಿ: ಗೋಪಾಲ್‌

Last Updated 5 ಅಕ್ಟೋಬರ್ 2022, 12:25 IST
ಅಕ್ಷರ ಗಾತ್ರ

ಬೆಳಗಾವಿ: ‘ಹಿಂದೂಗಳು ಶಸ್ತ್ರಗಳನ್ನು ಪೂಜೆ ಮಾಡುವುದು ಮಾತ್ರವಲ್ಲ; ಅವುಗಳನ್ನು ಬಳಸುವುದಕ್ಕೂ ಕಲಿಯಬೇಕು. ಆ ಮೂಲಕ ನಮ್ಮ ಪರಾಕ್ರಮ ಪ್ರದರ್ಶನ ಮಾಡಬೇಕು’ ಎಂದು ವಿಶ್ವ ಹಿಂದೂ ಪರಿಷತ್‌ ಕೇಂದ್ರೀಯ ಸಹ ಕಾರ್ಯದರ್ಶಿ, ಅಯೋಧ್ಯೆಯ ರಾಮ ಮಂದಿರ ನವನಿರ್ಮಾಣದ ಉಸ್ತುವಾರಿಯಲ್ಲಿ ಒಬ್ಬರಾದ ಗೋಪಾಲ್ ನಾಗರಕಟ್ಟೆ ಹೇಳಿದರು.

ಇಲ್ಲಿನ ಶಾಸ್ತ್ರೀ ನಗರದಲ್ಲಿರುವ ವಿಶ್ವ ಹಿಂದೂ ಪರಿಷತ್‌ ಕಚೇರಿಯಲ್ಲಿ ಬುಧವಾರ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

‘ಚಾಕು, ಕತ್ತರಿಯಂಥ ಚಿಕ್ಕ ಮನೆಬಳಕೆ ವಸ್ತುಗಳನ್ನು ಪೂಜಿಸುವುದಲ್ಲ. ಹೋರಾಟಕ್ಕೆ, ಹೊಡೆದಾಟಕ್ಕೆ ಬಳಸುವಂಥ ಅಸ್ತ್ರಗಳನ್ನು ‍‍‍ಪೂಜಿಸಿ. ಅಸ್ತ್ರಗಳನ್ನು ರಾವಣ, ಸದ್ಧಾಂ ಹುಸೇನ್‌ನಂಥವರೂ ಬಳಸಿದ್ದಾರೆ. ನೀವು ಅವರಂತೆ ಆಗದೇ ಶ್ರೀರಾಮ, ಶಿವಾಜಿ ಮಹಾರಾಜರಂತೆ ನ್ಯಾಯಕ್ಕಾಗಿ ಬಳಸಬೇಕು’ ಎಂದೂ ಹೇಳಿದರು.

‘ಸೈನಿಕರು, ಪೊಲೀಸರಿಂದ ಮಾತ್ರ ಹಿಂದೂ ಧರ್ಮ ಹಾಗೂ ಹಿಂದೂಗಳ ರಕ್ಷಣೆ ಸಾಧ್ಯವಿಲ್ಲ. ಪರಾಕ್ರಮದ ಮೂಲಕ ನಮ್ಮ ರಕ್ಷಣೆಗೆ ನಾವೇ ಸನ್ನದ್ಧಗೊಳ್ಳಬೇಕು. ಈ ಹಿಂದೆ ಸಾಕಷ್ಟು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆದರೆ, ಬರೀ ಶಾಂತಿಮಂತ್ರ ಪಾಲಿಸುವ ರೂಢಿ ಇತ್ತು. ಈಗ ಪ್ರತ್ಯುತ್ತರ ನೀಡುವ ಕೆಲಸಗಳೂ ನಡೆಯುತ್ತಿವೆ. ಹಿಂದೂಗಳಲ್ಲಿ ಪರಾಕ್ರಮ ಜಾಗ್ರತವಾಗುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆ’ ಎಂದು ಅವರು ಹೇಳಿದರು.

‘ಈ ಮುಂಚೆಯೇ ನಾವು ಪರಾಕ್ರಮ ತೋರಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು. ನೂಪುರ್‌ ಶರ್ಮಾ ವಿರುದ್ಧ ಪ್ರತಿಭಟನೆಗಳು ನಡೆದಾಗ ಭಗರಂಗ ದಳ ಯುವಕರು ಸುಮ್ಮನಾಗಿದ್ದು ದುರ್ದೈವ. ಬಿಸಿರಕ್ತ ಇದ್ದವರು ನೂಪುರ್ ಶರ್ಮಾ ಅವರೊಂದಿಗೆ ನಿಂತು ಧ್ವನಿ ಎತ್ತಬೇಕಿತ್ತು. ಹಿಂದೂ ಕಾರ್ಯಕರ್ತರು ಪೊಲೀಸ್‌ ಪ್ರಕರಣಗಳಿಗೆ ಹೆದರಬಾರದು’ ಎಂದೂ ಅವರು ಹೇಳಿದರು.

‘ಪಿಎಫ್ಐ ಬಳಿಕ ಆರ್‌ಎಸ್‌ಎಸ್ ನಿಷೇಧ ಆಗಬೇಕು ಎಂದು ಕೆಲವರು ಆಗ್ರಹಿಸುತ್ತಿದ್ದಾರೆ. ಇದು ಅವರ ಕನಸು ಮಾತ್ರ. ಹಿಂದೆ ಕೂಡ ಇಂಥ ಕೂಗು ಸಾಕಷ್ಟು ಕೇಳಿಬಂದಿವೆ. ಅವೆಲ್ಲ ತಾತ್ಕಾಲಿಕ. ದೊಡ್ಡ ಹೋರಾಟ ನಡೆದಾಗ ಸಣ್ಣ ಅವಘಡಗಳು ಸಂಭವಿಸುತ್ತವೆ. ಅದಕ್ಕೆ ಎದೆಗುಂದದೇ ಮುನ್ನುಗ್ಗಬೇಕು’ ಎಂದು ಗೋಪಾಲ್‌ ಹೇಳಿದರು.

‘ಅಯೋಧ್ಯೆಯಲ್ಲಿ ರಾಮ ಮಂದಿರ 2024ರ ವೇಳೆಗೆ ಪೂರ್ಣಗೊಳ್ಳಲಿದೆ. 360 ಅಡಿ ಉದ್ದ, 235 ಅಡಿ ಅಗಲ, 161 ಅಡಿ ಎತ್ತರದ ದೇವಸ್ಥಾನ ಇದಾಗಲಿದೆ. ಮಂದಿರ ಪ್ರದೇಶದಲ್ಲಿ ಆಯಾ ರಾಜ್ಯಗಳಿಗೂ ಒಂದಷ್ಟು ಜಾಗ ಮೀಸಲಿಡುವ ಯೋಜನೆ ನಡೆದಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ ಕದಮ್, ಗೌರವಾಧ್ಯಕ್ಷ ಡಾ.ಬಿ.ಜಿ. ಶಿಂಧೆ, ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ನಗರ ಘಟಕದ ಅಧ್ಯಕ್ಷ ಡಾ.ಭಾಗೋಜಿ, ಜಿಲ್ಲಾ ಘಟಕದ ಕಾರ್ಯದರ್ಶಿ ವಿಜಯ ಜಾಧವ, ಭಜರಂಗ ದಳದ ಜಿಲ್ಲಾ ಸಂಯೋಜಕ ಬಾವಕಣ್ಣ ಲೋಹಾರ, ನಗರ ಘಟಕದ ಸಂಯೋಜಕ ಆದಿನಾಥ ಗಾವಡೆ ಸೇರಿದಂತೆ ಹಲವು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT