ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮಕನಮರಡಿ: ಸೊರಗಿದ ಪಾಶ್ಚಾಪೂರ ಪಿಯು ಕಾಲೇಜು

ಉಪನ್ಯಾಸಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳದ ಸರ್ಕಾರ
Last Updated 11 ನವೆಂಬರ್ 2020, 20:15 IST
ಅಕ್ಷರ ಗಾತ್ರ

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಾಶ್ಚಾಪೂರ ಗ್ರಾಮದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಕೊರತೆಯಿಂದಾಗಿ ಬಳಲುತ್ತಿದೆ.

ಆ ಭಾಗದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರು ಹಾಗೂ ಬಡ ವಿದ್ಯಾರ್ಥಿಗಳ ಕಲಿಕೆಗೆ ಈ ಕಾಲೇಜಿನಿಂದ ಅನುಕೂಲವಾಗಿದೆ. ಪ್ರವೇಶಾತಿಯಲ್ಲಿ ಪ್ರತಿ ವರ್ಷ ಹೆಚ್ಚಳ ಕಂಡುಬರುತ್ತಿದೆ. ಅದಕ್ಕೆ ತಕ್ಕಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಲ್ಪಿಸಲಾಗುತ್ತಿಲ್ಲ. ಪರಿಣಾಮ, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದ ಆಶಯಕ್ಕೆ ಧಕ್ಕೆಯಾಗುತ್ತಿದೆ ಎಂಬ ಆತಂಕ ಆ ಭಾಗದ ಗ್ರಾಮಸ್ಥರು ಮತ್ತು ಶಿಕ್ಷಣ ಪ್ರೇಮಿಗಳದಾಗಿದೆ.

ಮೂರು ವಿಭಾಗಗಳು:ಈ ಕಾಲೇಜಿನಲ್ಲಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿವೆ. ಕಲಾ ವಿಭಾಗದಲ್ಲಿ ಸಮಾಜವಿಜ್ಞಾನ ಹೊರತುಪಡಿಸಿ ಉಳಿದೆಲ್ಲ ವಿಷಯಗಳ ಉಪನ್ಯಾಸಕರು ಇಲ್ಲ. ಕನ್ನಡ ಮತ್ತು ಇಂಗ್ಲಿಷ್ ವಿಷಯದ ಉಪನ್ಯಾಸಕರು ಇಲ್ಲವೇ ಇಲ್ಲ! ವಾಣಿಜ್ಯ ವಿಭಾಗದಲ್ಲಿ ಒಬ್ಬರಷ್ಟೇ ಬೋಧಕರಿದ್ದರೆ, ವಿಜ್ಞಾನ ವಿಭಾಗದಲ್ಲಿ ಉಪನ್ಯಾಸಕರಿರುವುದು ಮೂವರಷ್ಟೆ. 2017ರಲ್ಲಿ ಪ್ರಾಚಾರ್ಯರು ನಿವೃತ್ತಿಯಾದ ನಂತರ, ಕಾಯಂ ಪ್ರಾಚಾರ್ಯರಿಲ್ಲ! ಉಪನ್ಯಾಸರೊಬ್ಬರು ಪ್ರಭಾರಿಯಾಗಿದ್ದಾರೆ. ಪಾಠವನ್ನೂ ಮಾಡಬೇಕು; ಅತ್ತ ಆಡಳಿತ ಕೆಲಸಗಳನ್ನೂ ನಿರ್ವಹಿಸಬೇಕಾದ ಅನಿವಾರ್ಯತೆ ಅವರದಾಗಿದೆ.

ವ್ಯತಿರಿಕ್ತ ಪರಿಣಾಮ:ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇನ್ನೂ ಏಳು ಪೂರ್ಣಕಾಲಿಕ ಉಪನ್ಯಾಸಕರು ಹಾಗೂ ಒಬ್ಬ ದ್ವಿತೀಯ ದರ್ಜೆ ಸಹಾಯಕ ಮತ್ತು ಒಬ್ಬ ಪ್ರಥಮ ದರ್ಜೆ ಸಹಾಯಕರ ಅವಶ್ಯಕತೆ ಇದೆ. ಸರ್ಕಾರವು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳದೆ ಇರುವುದರಿಂದ, ಹಾಲಿ ಸಿಬ್ಬಂದಿಯು ಹೆಚ್ಚಿನ ಹೊರೆ ಅನುಭವಿಸಬೇಕಾಗಿದೆ. ಪರಿಣಾಮ, ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿಗೆ 11 ಉಪನ್ಯಾಸಕರ ಹುದ್ದೆಗಳು ಮಂಜೂರಾಗಿದ್ದು, ಇರುವುದು ಐವರು ಮಾತ್ರ. ಪ್ರಸ್ತುತ ಪ್ರಥಮ ಪಿಯು ವಿಭಾಗದಲ್ಲಿ 230 ಮತ್ತು ದ್ವಿತೀಯ ಪಿಯುನಲ್ಲಿ 208 ವಿದ್ಯಾರ್ಥಿಗಳಿದ್ದಾರೆ. ಸಮಾಜವಿಜ್ಞಾನ-1, ವಿಜ್ಞಾನ-3, ವಾಣಿಜ್ಯ-1, ಬೋಧಕೇತರ-1 ಹುದ್ದೆಗಳಷ್ಟೇ ಭರ್ತಿಯಾಗಿವೆ.

ಹಿಂದೆ ತರಗತಿಗಳನ್ನು ಅತಿಥಿ ಉಪನ್ಯಾಸಕರ ಮೂಲಕ ‘ನಿರ್ವಹಣೆ’ ಮಾಡಲಾಗುತ್ತಿತ್ತು. ಪ್ರಸಕ್ತ ವರ್ಷ ಕೋವಿಡ್-19 ಕಾರಣದಿಂದ ಅತಿಥಿ ಉಪನ್ಯಾಸಕರ ನೇಮಕದ ಬಗ್ಗೆ ಸರ್ಕಾರದಿಂದ ಆದೇಶ ಹೊರಬೀಳದಿರುವುದರಿಂದ ಪ್ರಕ್ರಿಯೆ ನಡೆದಿಲ್ಲ. ಲಭ್ಯವಿರುವ ಕೆಲವೇ ಉಪನ್ಯಾಸಕರ ಮೂಲಕವೇ ಆನ್‌ಲೈನ್ ತರಗತಿಗಳನ್ನು (ಯೂಟ್ಯೂಬ್) ನಡೆಸಲಾಗುತ್ತಿದೆ. ದೂರದಲ್ಲಿರುವುದರಿಂದ ಕೆಲವು ವಿಷಯಗಳ ಅತಿಥಿ ಉಪನ್ಯಾಸಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಇಲಾಖೆಗೆ ಮಾಹಿತಿ:‘ನೇಮಕಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರದಿಂದ ಸ್ಪಂದನೆ ದೊರೆತಿಲ್ಲ’ ಎನ್ನಲಾಗುತ್ತಿದೆ. ಈ ಕಾಲೇಜು ಗ್ರಾಮೀಣ ಪ್ರದೇಶದ ‘ಸಿ’ ವಲಯದಲ್ಲಿ ಬರುತ್ತದೆ. ಆದ್ದರಿಂದ ಈಚೆಗೆ ನಡೆದ 1,203 ಹುದ್ದೆಗಳ ಉಪನ್ಯಾಸಕರ ಕೌನ್ಸೆಲಿಂಗ್‌ನಲ್ಲಿ ಒಬ್ಬ ಅಭ್ಯರ್ಥಿಯೂ ಈ ಕಾಲೇಜು ಆಯ್ದುಕೊಂಡಿಲ್ಲ. ಪರಿಣಾಮ, ಈ ಸಾಲಿನಲ್ಲೂ ಕಾಯಂ ಉಪನ್ಯಾಸಕರ ಕೊರತೆ ನೀಗುವುದು ಅನುಮಾನ ಮತ್ತು ಅತಿಥಿ ಉಪನ್ಯಾಸಕರ ಮೇಲಿನ ಅವಲಂಬನೆ ಅನಿವಾರ್ಯ ಎಂದು ತಿಳಿದುಬಂದಿದೆ.

‘ಶಾಸಕ ಸತೀಶ ಜಾರಕಿಹೊಳಿ ಅವರು ಕಾಲೇಜಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿದ್ದಾರೆ. ಒಳ್ಳೆಯ ಕಟ್ಟಡವೂ ಇದೆ. ಆದರೆ, ಪ್ರಮುಖವಾಗಿ ಸಿಬ್ಬಂದಿಯೇ ಇಲ್ಲ. ಉಪನ್ಯಾಸಕರು ಹಾಗೂ ಸಿಬ್ಬಂದಿ ನಿಯೋಜಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥ ಎ.ವೈ. ಸೋನ್ಯಾಗೋಳ ಒತ್ತಾಯಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT