ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮ್ಮೇಳನಗಳಲ್ಲಿ ನಿರ್ಣಯಗಳ ಪರಾಮರ್ಷೆಯಾಗಲಿ’

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ
Last Updated 29 ಜೂನ್ 2019, 16:07 IST
ಅಕ್ಷರ ಗಾತ್ರ

ಬಸವರಾಜ ಕಟ್ಟೀಮನಿ‌ ವೇದಿಕೆ (ಗೋಕಾಕ): ‘ಹಿಂದಿನ ವರ್ಷದ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸರ್ಕಾರ ಯಾವ ಕ್ರಮಕೈಗೊಂಡಿದೆ ಎಂಬ ಕುರಿತು ಮುಂದಿನ ವರ್ಷದ ಸಮ್ಮೇಳನದಲ್ಲಿ ಪರಾಮರ್ಷೆಯಾಗಬೇಕು’ ಎಂದು ನಟಿ ತಾರಾ ಅನುರಾಧ ಆಗ್ರಹಿಸಿದರು.

ಗೋಕಾಕದಲ್ಲಿ ಶನಿವಾರ ನಡೆದ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ‌ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ‌ ಅವರು, ‘ಪ್ರತಿ ಸಮ್ಮೇಳನಗಳಲ್ಲೂ ನಿರ್ಣಯ ಕೈಗೊಳ್ಳಲಾಗುತ್ತಿದೆ. ಆದರೇ, ಅವು ಅನುಷ್ಟಾನಕ್ಕೆ ಬರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾಹಿತ್ಯ ಸಮ್ಮೇಳನಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸಿ, ಅವರ ಮುಂದೆ ನಿರ್ಣಯ ಮಂಡಿಸಬೇಕು. ಅವುಗಳನ್ನು ಅನುಷ್ಟಾನಕ್ಕೆ ತರುವ ಜವಾಬ್ದಾರಿಯನ್ನು ಅವರಿಗೇ ವಹಿಸಬೇಕು. ಮುಂದಿನ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರ್ಣಯಗಳ ಪ್ರಗತಿಯ ಕುರಿತು ಅವರು ಮಾಹಿತಿ ನೀಡುವಂತಾಗಬೇಕು’ ಎಂದು ಸಲಹೆ ನೀಡಿದರು.

ತ್ರಿಭಾಷಾ ಸೂತ್ರ ಹಳೆಯದು:

ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಕೂಗು ಇತ್ತೀಚೆಗೆ ಕೇಳಿ ಬರುತ್ತಿದೆ. ಆದರೆ, ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಅವಧಿಯಲ್ಲಿಯೇತ್ರಿಭಾಷಾ ಸೂತ್ರದ ಮಸೂದೆ ಮಂಡಿಸಲು ತಯಾರಿ ಮಾಡಿಕೊಳ್ಳಲಾಗಿತ್ತು. ಅದನ್ನು ಪ್ರಸ್ತುತ ಸರ್ಕಾರ ಹಿಂಪಡೆದು ಪ್ರಾದೇಶಿಕ ಭಾಷೆಗಳಿಗೆ ಸ್ವಾತಂತ್ರ್ಯ ನೀಡಿದೆ’ ಎಂದು ತಿಳಿಸಿದರು.

ಗೋಕಾಕ ಸಾಂಸ್ಕೃತಿಕ ನಗರ:
‘ಗೋಕಾಕ ಸುಂದರ ನಾಡು. ಬೆಟ್ಟ ಗುಡ್ಡ, ಕಪ್ಪು ನೆಲ, ಫಟಪ್ರಭಾ ನದಿ ಸೇರಿ ಇಲ್ಲಿ ಪ್ರಕೃತಿಯ ಸೊಬಗೇ‌ ಮೈದಳೆದಿದೆ. ಭಾವೈಕ್ಯತೆಯ ಸಂಗಮವೂ ಇಲ್ಲಿದೆ. ಸಾವಿತ್ರಿಬಾಯಿ ಫುಲೆ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಗರದೊಂದಿಗೆ ನನ್ನ ಒಡನಾಟ ಬೆಳೆದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಮುಂದಿನ ಬಾರಿ ಜಿಲ್ಲಾ ಸಮ್ಮೇಳನವನ್ನು ಮೂರರಿಂದ ನಾಲ್ಕು ದಿನಗಳ ಕಾಲ ಆಯೋಜಿಸಬೇಕು. ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಒಂದು ದಿನ ಮೀಸಲಿಡಬೇಕು. ಒಂದು ದಿನವನ್ನು ಎಲ್ಲ ಸಾಹಿತಿಗಳಿಗೂ ಮೀಸಲಿಡಬೇಕು’ ಎಂದು ಮನವಿ ಮಾಡಿದರು.

ಸಾಂಸ್ಕೃತಿಕ ಭವನ ನಿರ್ಮಿಸಿ:ಸಮ್ಮೇಳನಾಧ್ಯಕ್ಷೆ ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ‘ಕನ್ನಡ ಕೇವಲ ಭಾಷೆಯಲ್ಲ ನಮ್ಮ ಸಂಸ್ಕೃತಿ.‌ ಇಂಗ್ಲಿಷ್‌ ಭಾಷೆಯಿಂದ ದೇಶಿಯ ಭಾಷೆಗಳಿಗೆ ಕುತ್ತು ಬಂದಿದೆ. ನಮ್ಮಲ್ಲಿ ಭಾಷಾಭಿಮಾನದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ, ಪ್ರತಿಯೊಬ್ಬರು ಭಾಷಾಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

‘ಗೋಕಾಕನಲ್ಲಿ ಮನೆಗೊಬ್ಬರಂತೆ ಸಾಹಿತಿಗಳು ಹಾಗೂ ಕಲಾವಿದರು ಇದ್ದು, ಇಲ್ಲಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು‌ ನಡೆಯುವ ನಿಟ್ಟಿನಲ್ಲಿ ಸಾಂಸ್ಕೃತಿಕ ಭವನ‌‌ವನ್ನು ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

ಸುಣದೋಳಿಯ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ‌ ದೂರದರ್ಶನ ಕೇಂದ್ರದ ಸಹನಿರ್ದೇಶಕಿ ನಿರ್ಮಲಾ ಯಲಿಗಾರ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರ ಸಣ್ಣಕ್ಕಿ‌ ಇದ್ದರು.
ಶ್ರೀಪಾದ ಕುಂಬಾರ ಸ್ವಾಗತಿಸಿದರು. ಆರ್.ಎಲ್. ಮಿರ್ಜಿ ನಿರೂಪಿಸಿದರು. ಮಹಾಂತೇಶ ಉಕ್ಕಲಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT