ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ, ಧರ್ಮ ಜತೆಯಾಗಿಯೇ ಸಾಗಲಿ–ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಮತ

Published 13 ಸೆಪ್ಟೆಂಬರ್ 2023, 10:28 IST
Last Updated 13 ಸೆಪ್ಟೆಂಬರ್ 2023, 10:28 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಜ್ಞಾನವಿಲ್ಲದ ಧರ್ಮ ಕುರುಡು. ಧರ್ಮವಿಲ್ಲದ ವಿಜ್ಞಾನ ಹೆಳವ ಇದ್ದಂತೆ. ಇವೆರಡೂ ಜತೆಯಾಗಿಯೇ ಸಾಗಿದರೆ ಮಾತ್ರ ನಮ್ಮ ಗುರಿ ತಲುಪಬಹುದು’ ಎಂದು ಗದಗ–ಡಂಬಳದ ಎಡೆಯೂರು ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಶಿವಬಸವ ನಗರದ ಡಾ.ಎಸ್‌.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ನಾಗನೂರು ರುದ್ರಾಕ್ಷಿಮಠದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಶ್ರೀಗಳ ನಡಿಗೆ ಭಕ್ತರ ಕಡೆಗೆ’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಇಂದು ಎಲ್ಲ ಭೋಗ, ಭಾಗ್ಯಗಳನ್ನು ನಮ್ಮ ಮನೆಬಾಗಿಲಿಗೇ ತಂದುಕೊಟ್ಟಿವೆ. ಆದರೆ, ಇವುಗಳಿಂದ ಎಲ್ಲ ಸಂದರ್ಭವೂ ಪ್ರಯೋಜನವಾಗುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ನಮ್ಮ ಅನಾರೋಗ್ಯ ಮತ್ತು ಸಾಮಾಜಿಕ ಅಸಮಾನತೆಗೂ ಕಾರಣವಾಗಬಹುದು. ಹೀಗಾಗಿ ಇಂದಿನ ವೈಜ್ಞಾನಿಕ ಯುಗದಲ್ಲಿ ಎಲ್ಲರೂ ಧರ್ಮದ ಬಗ್ಗೆಯೂ ಆಕರ್ಷಿತರಾಗಬೇಕಿದೆ’ ಎಂದರು.

‘ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ನಾವು ಪ್ರಾಮಾಣಿಕವಾಗಿ ಹೋರಾಡಬೇಕು. ಇದು ಸಾಕಾರವಾದರೆ ಧಾರ್ಮಿಕ ಅಲ್ಪಸಂಖ್ಯಾತರಾಗಿ ಗುರುತಿಸಿಕೊಂಡು, ಸರ್ಕಾರದಿಂದ ಹೆಚ್ಚಿನ ಸೌಕರ್ಯ ಪಡೆಯಲು ಅನುಕೂಲವಾಗುತ್ತದೆ' ಎಂದ ಶ್ರೀಗಳು,'ನಮ್ಮ ಹೋರಾಟದ ದಿಕ್ಕು ತಪ್ಪಿಸಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಗಳೆಲ್ಲ ಶುದ್ಧಸುಳ್ಳು’ ಎಂದು ಹೇಳಿದರು.

‘ಸಕಲರಿಗೂ ಲೇಸನ್ನೇ ಬಯಸುವುದು ಬಸವ ಧರ್ಮವಾಗಿದೆ. ಜಾತಿ, ಮತ, ಪಂಥ, ಧರ್ಮ ಮತ್ತು ಲಿಂಗಭೇದ ನಿವಾರಣೆಗೆ ಪ್ರಯತ್ನಿಸಿದ ಧರ್ಮ ಇದಾಗಿದೆ. ಈ ಧರ್ಮದ ಕುರಿತು ಜಾಗೃತಿ ಮೂಡಿಸಲು ಒಂದು ತಿಂಗಳ ಕಾಲ ಅಲ್ಲಮಪ್ರಭು ಸ್ವಾಮೀಜಿ ಕೈಗೊಂಡ ಯಾತ್ರೆ ಯಶಸ್ಸಿಗೆ ಸರ್ವಧರ್ಮೀಯರೂ ಕೈಜೋಡಿಸಿ ಭಾವೈಕ್ಯ ಮೆರೆದಿದ್ದಾರೆ’ ಎಂದು ಶ್ಲಾಘಿಸಿದರು.

ಶೇಗುಣಸಿಯ ಮಹಾಂತ ಸ್ವಾಮೀಜಿ, ‘ಧರ್ಮದ ಬಗ್ಗೆ ಜಾಗೃತಿ ಮತ್ತು ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣಕ್ಕಾಗಿ ಅಲ್ಲಮಪ್ರಭು ಸ್ವಾಮೀಜಿ ಕೈಗೊಂಡ ಈ ಪಾದಯಾತ್ರೆ ಯಶಸ್ವಿಯಾಗಿದೆ. ನಾವು ಬಸವ ತತ್ವದ ಬೀಜವನ್ನು ಜನರ ಮನದಲ್ಲಿ ಬಿತ್ತಬೇಕಿದೆ. ಬಸವಾದಿ, ಶಿವಶರಣದ ಹಾದಿಯಲ್ಲಿ ಸಾಗಬೇಕಿದೆ. ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಪಾದಯಾತ್ರೆ ಯಶಸ್ಸಿಗೆ ಶ್ರಮಿಸಿದವರನ್ನು ಸತ್ಕರಿಸಲಾಯಿತು. ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹಳಿಂಗಳಿಯ ಕಮರಿಮಠದ ಶಿವಾನಂದ ದೇವರು, ತಾರಿಹಾಳದ ಅಡವಿಸಿದ್ಧೇಶ್ವರ ಮಠದ ಅಡವೀಶ್ವರ ದೇವರು, ಕುಳವಳ್ಳಿಯ ಸುಕುಮಾರ ಯೋಗಾಶ್ರಮದ ಓಂ ಗುರೂಜಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಇತರರಿದ್ದರು.

‘ಬಸವ ತತ್ವ ಎಂಬುದು ಮಾನವೀಯತೆಯ ತತ್ವ’

‘ಬಸವ ತತ್ವ ಎಂಬುದು ಮಾನವೀಯತೆಯ ತತ್ವ. ವಿಶ್ವ ಬಂಧುತ್ವದ ತತ್ವ. ಅದಕ್ಕೆ ಗುರುತ್ವಾಕರ್ಷಣೆಯ ಬಲವಿದೆ. ಎಲ್ಲರನ್ನೂ ಸೆಳೆಯಬಲ್ಲ ಶಕ್ತಿಯಿದೆ. ನಮ್ಮ ಸಮಾಜ ಒಗ್ಗೂಡಿಸಲು ಬಸವ ತತ್ವ ಮಾರ್ಗದರ್ಶಿಯಾಗಿದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT