ಬೈಲೂರು (ಬೆಳಗಾವಿ ಜಿಲ್ಲೆ): ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಅನಾಮಿಕನಿಂದ ಕೊಲೆ ಬೆದರಿಕೆ ಪತ್ರ ಬಂದಿದೆ. ಆಗಸ್ಟ್ 8ರಂದೇ ಈ ಪತ್ರ ಬಂದಿದ್ದು ವಿಷಯ ತಡವಾಗಿ ಬಹಿರಂಗವಾಗಿದೆ. ಶ್ರೀಗಳು ಭಕ್ತರ ಮುಂದೆ ವಿಷಯ ತಿಳಿಸಿದ್ದಾರೆ. ಆದರೆ, ಇದೂವರೆಗೆ ದೂರು ದಾಖಲಿಸಿಲ್ಲ.
2020ರಲ್ಲಿ ಕೂಡ ಶ್ರೀಗಳಿಗೆ ಇದೇ ರೀತಿಯ ಕೊಲೆ ಬೆದರಿಕೆ ಪತ್ರವನ್ನು ಮಠದ ವಿಳಾಸಕ್ಕೆ ತಲುಪಿಸಲಾಗಿತ್ತು. ಈಗ ಪತ್ರ ಬರೆದ ವ್ಯಕ್ತಿ 2020ರ ಸಂಗತಿಯನ್ನೂ ಪತ್ರದಲ್ಲಿ ತಿಳಿಸಿದ್ದಾನೆ.
‘ನಮ್ಮ ಧರ್ಮದೇವತೆಗಳನ್ನು ನಿಂದಿಸುವ ನಿನಗೆ ಘೋರವಾದ ಹತ್ಯೆ ಬರಲಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಕೊಣೆಯಲ್ಲಿ ‘ಓಂ ಶ್ರೀ ಕಾಳಿಕಾದೇವಿ ನಮಃ’ ‘ಸಹಿಷ್ಣು ಹಿಂದೂ’ ಎಂದು ಬರೆಯಲಾಗಿದೆ.
ಪತ್ರದಲ್ಲೇನಿದೆ?
‘ನಿಜಗುಣಾನಂದ ನಿನ್ನ ಸಾವು 2020ರಲ್ಲಿ ತಪ್ಪಿರಬಹುದು. 2023ರಲ್ಲಿ ತಪ್ಪುವುದಿಲ್ಲ. ನಿನ್ನ ಪಾಪದ ಮಾತಿನ ಕೊಡ ತುಂಬಿದೆ. ಆದಷ್ಟು ಬೇಗ ನಿನ್ನ ಭಕ್ತಾದಿಗಳಿಗ ನಿನ್ನ ತಿಥಿ ಬಗ್ಗೆ ಹೇಳು. ನಮ್ಮ ಧರ್ಮದೇವತೆಗಳನ್ನು ನಿಂದಿಸುವ ನಿನಗೆ ಘೋರವಾದ ಹತ್ಯೆಯೇ ಬರುತ್ತದೆ. ನಿನ್ನ ಅಂತಿಮ ದಿನಗಳು ಪ್ರಾರಂಭವಾಗಿವೆ. ದಿನಗಳನ್ನು ಎಣಿಸು. ಓಂ ಶ್ರೀ ಕಾಳಿಕಾದೇವಿ ನಮಃ, ಓಂ ಶ್ರೀ ಕಾಳಿಕಾದೇವಿ ನಮಃ’ ಎಂದು ಬಿಳಿ ಹಾಳಿಯಲ್ಲಿ ಬರೆದು, ಅದನ್ನು ಪ್ಯಾಕೇಟ್‌ನಲ್ಲಿ ಇಟ್ಟು ಕಳಿಸಲಾಗಿದೆ.
ನಿಜಗುಣಾನಂದ ಶ್ರೀಗಳು ದಶಕಗಳಿಂದ ಬಸವಾದಿ ಶರಣ ತತ್ವಗಳನ್ನು ಪ್ರಚುರಪಡಿಸುವಲ್ಲಿ ನಿರತರಾಗಿದ್ದಾರೆ. ಬೈಲೂರಿನ ಮಠವನ್ನು ಕೇಂದ್ರವಾಗಿಸಿಕೊಂಡು ತಮ್ಮ ವಿಚಾರಗಳನ್ನು ಬಿತ್ತುತ್ತಿದ್ದಾರೆ. ಅವರ ಪ್ರವಚನದಲ್ಲಿ ಮೌಢ್ಯ ವಿರೋಧಿ, ಕಂದಾಚಾರ ವಿರೋಧಿ, ಮೂರ್ತಿ ಪೂಜೆಯ ವಿರುದ್ಧ ಟೀಕೆಗಳು ಸಾಮಾನ್ಯ.