ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ರನ ಕೊಂದ ತಂದೆಗೆ ಜೀವಾವಧಿ ಶಿಕ್ಷೆ

Last Updated 11 ನವೆಂಬರ್ 2020, 14:07 IST
ಅಕ್ಷರ ಗಾತ್ರ

ಬೆಳಗಾವಿ: ಮನೆಯಲ್ಲಿ ಹಣಕಾಸಿನ ವಿಚಾರವಾಗಿ ನಡೆದ ಗಲಾಟೆಯ ವೇಳೆ ಪುತ್ರನನ್ನು ಗುಂಡಿಕ್ಕಿ ಕೊಂದ ವ್ಯಕ್ತಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹ 30 ಸಾವಿರ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.

ಬೈಲಹೊಂಗಲ ತಾಲ್ಲೂಕಿನ ನಯಾನಗರದ ವಿಠ್ಠಲ ಇಂಡಿ ಶಿಕ್ಷೆಗೆ ಗುರಿಯಾದವರು. ಮೃತ ಈರಣ್ಣ ಇಂಡಿ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಜೆ ಪಡೆದು ಬಂದಿದ್ದರು.

ಹಣಕಾಸಿನ ವಿಚಾರವಾಗಿ 2016 ಡಿಸೆಂಬರ್ 12ರಂದು, ವಿಠ್ಠಲ ಹಾಗೂ ಈರಣ್ಣ ಮಧ್ಯೆ ಗಲಾಟೆ ನಡೆದಿತ್ತು. ಆರು ತಿಂಗಳ ಹಿಂದೆಯಷ್ಟೇ ಖರೀದಿಸಿದ್ದ ವಾಹನ ಮಾರಿದ್ದ ಅವರು, ಮತ್ತೊಂದು ವಾಹನ ತೆಗೆದುಕೊಳ್ಳಲು ಹಣಕ್ಕಾಗಿ ಒತ್ತಾಯಿಸಿದ್ದರು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅಂದು ರಾತ್ರಿ 9.30ರ ಸುಮಾರಿಗೆ ವಿಠ್ಠಲ ತನ್ನ ಪರವಾನಗಿ ಹೊಂದಿದ ರಿವಾಲ್ವಾರ್‌ನಿಂದ ಈರಣ್ಣ ಅವರ ಎದೆಗೆ ಗುಂಡು ಹಾರಿಸಿದ್ದ. ಗಲಾಟೆ ಬಿಡಿಸಲು ಬಂದ ಪುತ್ರಿ ಪ್ರೀತಿ ಮತ್ತು ಪತ್ನಿಯ ಮೇಲೂ ಗುಂಡು ಹಾರಿಸಿ ಕೊಲ್ಲಲು ಪ್ರಯತ್ನಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಪ್ರೀತಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿಂಗಾಣಿ ಗ್ರಾಮದ ವಿಠ್ಠಲಗೆ ಇಬ್ಬರು ಪತ್ನಿಯರಿದ್ದರು. ಮೊದಲನೇ ಪತ್ನಿ ಮಲಕವ್ವ ಹಿಂಗಾಣಿ ಗ್ರಾಮದಲ್ಲಿ ಮತ್ತು 2ನೇ ಪತ್ನಿ ಅನಸೂಯಾ ನಯಾನಗರದಲ್ಲಿದ್ದರು. ಸೇನೆಯಲ್ಲಿದ್ದ ವಿಠ್ಠಲ ನಿವೃತ್ತಿ ನಂತರ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಬೈಲಹೊಂಗಲದಲ್ಲಿ ಕೆಲಸ ಮಾಡುವಾಗ ಅನಸೂಯಾ ಜೊತೆಗಾದ ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳು. ಅವರಲ್ಲಿಹಿರಿಯ ಪುತ್ರ ಸೇನೆಗೆ ಸೇರಿದ್ದರು. ಮೊದಲನೇ ಪತ್ನಿಗೂ ಒಬ್ಬ ಮಗ ಇದ್ದಾನೆ.

ಪ್ರೀತಿ ನೀಡಿದ ದೂರಿನ ಮೇರೆಗೆ ‍ಪ್ರಕರಣ ದಾಖಲಿಸಿಕೊಂಡಿದ್ದ ಬೈಲಹೊಂಗಲ ಪೊಲೀಸ್ ಠಾಣೆಯ ಅಂದಿನ ಸಿಪಿಐ ಸಂಗನಗೌಡ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ ತೀರ್ಪು ನೀಡಿದ್ದಾರೆ. ಅಭಿಯೋಜಕ ವಿದ್ಯಾಸಾಗರ ದಶರಥ ದರಬಾರೆ ಸರ್ಕಾರದ ಪರ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT